ಬಹುನಿರೀಕ್ಷೆಯ ಕುರುಕ್ಷೇತ್ರ ಚಿತ್ರದ ಆಡಿಯೋ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

ಚಂದನವನದ ಬಹುನಿರೀಕ್ಷೆಯ ಅದ್ಧೂರಿ ತಾರಾಗಣದ ಪೌರಾಣಿಕ ಕಥಾಹಂದರದ ಚಿತ್ರ ಮುನಿರತ್ನ ಕುರುಕ್ಷೇತ್ರ. 2ಡಿ ಹಾಗೂ 3ಡಿಯಲ್ಲಿ ಸಿದ್ಧಗೊಂಡು ಬಹು ಭಾಷೆಗಳಲ್ಲಿ ಬಿಡುಗಡೆಗೆ ಸಿದ್ಧವಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೆ ಚಿತ್ರವಾದ ಮುನಿರತ್ನ ಕುರುಕ್ಷೇತ್ರ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಮೊನ್ನೆ ನಡೆಯಿತು.

ವರ್ಣರಂಜಿತ ವೇದಿಕೆಯಲ್ಲಿ ಸಾಹೋರೆ ಸಾಹೋ ಆಜನುಬಾಹು ಹಾಡಿನ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಮಾರಂಭದಲ್ಲಿ ನಿರ್ಮಾಪಕ ಮುನಿರತ್ನ ಮಾತನಾಡಿ, ಬಹುಶಃ ಕನ್ನಡದ ಒಂದೇ ಚಿತ್ರದಲ್ಲಿ ಎಲ್ಲಾ ಕಲಾವಿದರನ್ನು ಒಟ್ಟಿಗೆ ನೋಡುವಂಥ ಸಿನಿಮಾ ಇದು. ನಮ್ಮ ಕಲಾವಿದರು ಅದ್ಭುತವಾಗಿ ನಟನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಭೀಷ್ಮನ ಪಾತ್ರ ಮಾಡಿದ ಅಂಬರೀಶ್ ಅವರನ್ನು ನೆನಪಿಸಿಕೊಳ್ಳಲೇಬೇಕು.

ಚರಿತ್ರೆಯಲ್ಲಿ ಉಳಿಯುವ ಪಾತ್ರವನ್ನು ಅವರು ಮಾಡಿದ್ದಾರೆ. ಚಿತ್ರದ ಬಿಡುಗಡೆಯ ಸಮಯದಲ್ಲಿ ಅವರು ನಮ್ಮೊಂದಿಗಿಲ್ಲ ಎಂಬ ಬೇಸರವಿದೆ. ಆದರೆ, ಅವರು ನಮ್ಮೊಂದಿಗಿದ್ದಾರೆ. ಇದೇ ಮೊದಲ ಬಾರಿಗೆ ರವಿಚಂದ್ರನ್ ಕೃಷ್ಣನ ಪಾತ್ರದಲ್ಲಿ , ಅರ್ಜುನ್ ಸಜರ್ ಕರ್ಣನ ಪಾತ್ರದಲ್ಲಿ, ದರ್ಶನ್ ದುರ್ಯೋಧನನ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದರು.

ಯುವ ಪ್ರತಿಭೆ ನಿಖಿಲ್ ಕುಮಾರಸ್ವಾಮಿ ನಿರ್ವಹಿಸಿರುವ ಅಭಿಮನ್ಯುವಿನ ಪಾತ್ರ ಚಿತ್ರದಲ್ಲಿ ತುಂಬಾ ವಿಶೇಷವಾಗಿದೆ. ಆಗಸ್ಟ್ 2ರಂದು ಚಿತ್ರ ತೆರೆಗೆ ಬರಲಿದೆ. ಈ ಚಿತ್ರ ಮಾಡೋಕೆ ಕಾರಣ ನನಗಿರುವ ಸಿನಿಮಾ ಪ್ರೀತಿ. ಪ್ರಪಂಚದಲ್ಲೇ ಹೆಸರು ಮಾಡಿದ ಬಾಹುಬಲಿ ಚಿತ್ರದಂತೆ ನಾವೇಕೆ ಕನ್ನಡದಲ್ಲಿ ಆ ರೀತಿಯ ಚಿತ್ರ ಮಾಡಬಾರದು ಎಂದು ಯೋಚಿಸಿದಾಗ ಕಣ್ಣ ಮುಂದೆ ಬಂದದ್ದು ಈ ಮುನಿರತ್ನ ಕುರುಕ್ಷೇತ್ರ. ಹಾಗಾಗಿ ಇದನ್ನೇ ಸಿನಿಮಾ ಮಾಡಲು ನಿರ್ಧರಿಸಿದೆ.

ಈ ಚಿತ್ರ ನೋಡಿದವರು ಬಾಹುಬಲಿಗಿಂತ ಚೆನ್ನಾಗಿದೆ ಎಂದು ಹೇಳುವುದರಲ್ಲಿ ಅನುಮಾನವಿಲ್ಲ ಎಂಬ ವಿಶ್ವಾಸವನ್ನು ಮುನಿರತ್ನ ವ್ಯಕ್ತಪಡಿಸಿ ದರು. ಈ ಚಿತ್ರವನ್ನು ಪ್ರಪಂಚ ದಾದ್ಯಂತ ಬಿಡುಗಡೆ ಮಾಡಲು ರಾಕ್‍ಲೈನ್ ವೆಂಕಟೇಶ್ ಅವರು ತಯಾರಿ ಮಾಡಿಕೊಂಡಿದ್ದಾರೆ. ಕನ್ನಡದ ಹೆಮ್ಮೆಯ ಚಿತ್ರವಾಗಿ ಐದು ಭಾಷೆಗಳಲ್ಲಿ ಏಕಕಾಲಕ್ಕೆ ಕುರುಕ್ಷೇತ್ರ ಸಿನಿಮಾ ಬಿಡುಗಡೆಯಾಗುತ್ತಿದೆ ಎಂದು ಕೂಡ ಅವರು ಹೇಳಿದರು.

ನಿರ್ದೇಶಕ ನಾಗಣ್ಣ ಮಾತನಾಡಿ, ನಿರ್ಮಾಪಕ ಮುನಿರತ್ನ ಅವರೇ ಕುರುಕ್ಷೇತ್ರ ಚಿತ್ರದ ನಿಜವಾದ ಹೀರೋ. ಚಿತ್ರದಂತೆ, ನಿರ್ಮಾಪಕರದ್ದೂ 3ಡಿ ದೃಷ್ಟಿಕೋನ. ಮನೋರಂಜನೆಯ ರಸದೌತಣ ಈ ಚಿತ್ರದ ಮೂಲಕ ಪ್ರೇಕ್ಷಕರಿಗೆ ಸಿಗಲಿದೆ ಎಂದರು. ಸಂಭಾಷಣೆಕಾರ ಭಾರವಿ ಮಾತನಾಡಿ, ಕುರುಕ್ಷೇತ್ರ ಚಿತ್ರ ಕನ್ನಡ ನಾಡಿನ ಹಬ್ಬವಾಗಲಿದೆ. ಜಯಶ್ರೀದೇವಿ ಜತೆ ಇದ್ದ ನನ್ನನ್ನು ಕರೆದು ನಿರ್ಮಾಪಕರು ಅವಕಾಶ ಕೊಟ್ಟಿದ್ದಾರೆ ಎಂದರು.

ಈ ಚಿತ್ರದಲ್ಲಿ ಧರ್ಮರಾಯನ ಪಾತ್ರದಾರಿ ಶಶಿಕುಮಾರ್, ಅರ್ಜುನ ಪಾತ್ರಧಾರಿ ಸೋನುಸೂದ್, ಭೀಮನಾದ ಡ್ಯಾನಿಶ್ ಅಖ್ತರ್, ಯಶಸ್ ಸೂರ್ಯ, ಚಂದನ್, ಶ್ರೀನಾಥ್, ರವಿಶಂಕರ್, ರಮೇಶ್ ಭಟ್, ಅವಿನಾಶ್, ಸಾಹಿತಿ ನಾಗೇಂದ್ರ ಪ್ರಸಾದ್ ಹಾಗೂ ನಟಿ ಹರಿಪ್ರಿಯಾ ಚಿತ್ರದ ಕುರಿತು ತಮ್ಮ ಅನುಭವ ಹಂಚಿಕೊಂಡರು. ವೇದಿಕೆಯಲ್ಲಿ ನೃತ್ಯ ಕಲಾವಿದರಿಂದ ಸುಂದರ ನೃತ್ಯವನ್ನು ಕೂಡ ಆಯೋಜಿಸಲಾಗಿತ್ತು.

ಚಿತ್ರದ ಆಡಿಯೋ ಬಿಡುಗಡೆ ಸಂದರ್ಭದಲ್ಲಿ ವಿತರಕ ರಾಕ್‍ಲೈನ್ ವೆಂಕಟೇಶ್, ಅವರ ಸುಪುತ್ರ ಯತೀಶ್, ರಾಜಕೀಯ ಮುಖಂಡರಾದ ಸಚಿವ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್ ಹಾಗೂ ಇತರರು ಹಾಜರಿದ್ದರು.

ವಿ.ಹರಿಕೃಷ್ಣ ಸಂಗೀತವಿರುವ ಈ ಚಿತ್ರಕ್ಕೆ ಜೋನಿ ಹರ್ಷ ಸಂಕಲನ ಮಾಡಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಟ್ರೈಲರ್‍ಗಳು ಭಾರೀ ಸದ್ದು ಮಾಡಿದ್ದು, ಅದ್ಧೂರಿಯಾಗಿ ಚಿತ್ರ ತೆರೆ ಮೇಲೆ ಬರಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

Facebook Comments