ಬಹುಮತ ಸಾಬೀತು ಮಾಡಿದ ಪರಿಕ್ಕರ್, ಗೋವಾದಲ್ಲಿ ಬಿಜೆಪಿ ಪರ್ವ ಆರಂಭ, ಕಾಂಗ್ರೆಸ್’ಗೆ ಮುಖಭಂಗ

ಈ ಸುದ್ದಿಯನ್ನು ಶೇರ್ ಮಾಡಿ

Parikkar--01

ನವದೆಹಲಿ, ಮಾ.16-ನಿರೀಕ್ಷೆಯಂತೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕರ್ ಅವರು ವಿಧಾನಸಭೆಯಲ್ಲಿ ಇಂದು ಗದ್ದಲ-ಮಾತಿನ ಚಕಮಕಿಗಳ ನಡುವೆಯೂ ಬಹುಮತ ಸಾಬೀತು ಮಾಡಿದ್ದಾರೆ. 40 ಸದಸ್ಯ ಬಲದ ವಿಧಾನಸಭೆಯಲ್ಲಿ 22-16 ಮತಗಳಿಂದ ಪರಿಕರ್ ನೇತೃತ್ವದ ಬಿಜೆಪಿ ಸರ್ಕಾರ ವಿಶ್ವಾಸಮತದಲ್ಲಿ ಗೆಲುವು ಸಾಧಿಸಿದ್ದು, ಕರಾವಳಿ ರಾಜ್ಯದಲ್ಲಿ ಕಮಲ ಪರ್ವ ಆರಂಭಕ್ಕೆ ಅಧಿಕೃತ ಮುದ್ರೆ ಬಿದ್ದಂತಾಗಿದೆ. ಪರಿಕರ್‍ಗೆ ಬಹುಮತದಲ್ಲಿ ಸೋಲುಂಟಾಗುತ್ತದೆ ಎಂದು ಹೇಳಿದ್ದ ಕಾಂಗ್ರೆಸ್ ಹಿರಿಯ ನಾಯಕ (ಗೋವಾ ಉಸ್ತುವಾರಿ) ದಿಗ್ವಿಜಯ ಸಿಂಗ್ ಅವರಿಗೆ ಇದರಿಂದ ಭಾರೀ ಮುಖಭಂಗವಾಗಿದೆ.

ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಇಂದು ಬೆಳಿಗ್ಗೆ 11 ಗಂಟೆಗೆ ಗೋವಾ ವಿಧಾನಸಭೆ ಸಮಾವೇಶಗೊಂಡಾಗ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಜನಾದೇಶ ಧಿಕ್ಕರಿಸಿ ಬಿಜೆಪಿ ಸರ್ಕಾರ ರಚಿಸಲು ಮುಂದಾಗಿದೆ ಎಂದು ಸದಸ್ಯರು ಆರೋಪಿಸಿದರು. ನೀವು ಯಾಕೆ ಸರ್ಕಾರ ರಚನೆಗೆ ಹಕ್ಕು ಮಂಡಿಸಿಲ್ಲ. ಅದು ನಿಮ್ಮ ದೌರ್ಬಲ್ಯ ಎಂದು ಬಿಜೆಪಿ ಸದಸ್ಯರು ತಿರುಗೇಟು ನೀಡಿದಾಗ ಮಾತಿನ ಚಕಮಕಿ, ವಾದ-ವಾಗ್ವಾದಗಳು ನಡೆದು ಸದನದಲ್ಲಿ ಭಾರೀ ಗದ್ದಲದ ವಾತಾವರಣ ಸೃಷ್ಟಿಯಾಯಿತು.

ಈ ನಡುವೆ ವಿಧಾನಸಭಾಧ್ಯಕ್ಷರು ಬಹುಮತ ಸಾಬೀತು ಮಾಡುವಂತೆ ಮುಖ್ಯಮಂತ್ರಿ ಮನೋಹರ್ ಪರಿಕರ್ ಅವರನ್ನು ಅಹ್ವಾನಿಸಿದರು. ಪರಿಕರ್ ಸರ್ಕಾರದ ಪರವಾಗಿ 22 ಮತಗಳು (13 ಬಿಜೆಪಿ, 3 ಎಂಜಿಪಿ, 3 ಜಿಎಫ್, 1 ಎಸ್‍ಸಿಪಿ ಹಾಗೂ ಇಬ್ಬರು ಪಕ್ಷೇತರ ಶಾಸಕರು) ಹಾಗೂ ವಿರುದ್ಧವಾಗಿ 16 ಮತಗಳು ಚಲಾವಣೆಯಾದವು. ಸದಸ್ಯರೊಬ್ಬರು ಗೈರು ಹಾಜರಾಗಿದ್ದರು.   ವಿಶ್ವಾಸ ಮತದ ವೇಳೆ ಕಾಂಗ್ರೆಸ್ ಸದಸ್ಯ ವಿಶ್ವಜೀತ್ ರಾಣೆ ಸಭಾತ್ಯಾಗ ಮಾಡಿದರು.
ಬಹುಮತದಲ್ಲಿ ಗೆಲುವು ಸಾಧಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಕರ್, ಬಿಜೆಪಿ ವಾಮ ಮಾರ್ಗದಲ್ಲಿ ಅಧಿಕಾರಕ್ಕೆ ಬಂದಿಲ್ಲ. ಅಧಿಕೃತ ಬೆಂಬಲದೊಂದಿಗೆ ಗದ್ದುಗೇರಿದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.  ಗೋವಾ ರಾಜ್ಯವನ್ನು ದೇಶದ ಅತ್ಯುತ್ತಮ ರಾಜ್ಯಗಳಲ್ಲಿ ಒಂದಾಗಿಸುವ ಗುರಿ ಹೊಂದಿರುವುದಾಗಿ ಅವರು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin