ಬಹು ನಿರೀಕ್ಷಿತ ‘ಮಾಸ್ ಲೀಡರ್’ ಚಿತ್ರ ರಿಲೀಸ್

ಈ ಸುದ್ದಿಯನ್ನು ಶೇರ್ ಮಾಡಿ

mass-leader

ಸ್ಯಾಂಡಲ್‍ವುಡ್‍ನ ಸೆಂಚುರಿ ಸ್ಟಾರ್, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರ ಅಭಿನಯದಲ್ಲಿ ಮೂಡಿಬಂದಿರುವ ಮಾಸ್ ಲೀಡರ್ ಚಿತ್ರ ಈವಾರ ರಾಜ್ಯಾದ್ಯಂತ ಸುಮಾರು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಬಹಳ ದಿನಗಳ ಗ್ಯಾಪ್ ನಂತರ ತೆರೆ ಕಾಣುತ್ತಿರುವ ಶಿವಣ್ಣ ಅವರ ಅಭಿನಯದ ಚಿತ್ರ ಇದಾಗಿದೆ.   ಈ ಹಿಂದೆ ರೋಜ್ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದ ನರಸಿಂಹ (ಸಹನಾ ಮೂರ್ತಿ) ಅವರ ಸಾರಥ್ಯದಲ್ಲಿ ಮೂಡಿಬಂದಿರುವ ಎರಡನೆ ಚಿತ್ರವಾಗಿ ಮಾಸ್ ಲೀಡರ್ ಹೊರಬರುತ್ತಿದೆ. ತರುಣ್ ಶಿವಪ್ಪ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ದೇಶಭಕ್ತಿ ಹಾಗೂ ಅತ್ಯಂತ ಸೂಕ್ಷ್ಮವಾದ ರಾಷ್ಟ್ರಕ್ಕೆ ಸಂಬಂಧಪಟ್ಟಂಥ ಕಂಟೆಂಟ್ ಒಂದನ್ನು ಹೇಳುವ ಪ್ರಯತ್ನವನ್ನು ನಿರ್ದೇಶಕ ಸಹನಾ ಅವರು ಮಾಡಿದ್ದಾರೆ.
ಉತ್ತರ ಭಾರತದ ಜಮ್ಮು-ಕಾಶ್ಮೀರ, ಕತಾರ್, ಹಾಗೂ ಮಲ್ಮಾರ್‍ನಂಥ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಮಾಸ್ ಲೀಡರ್‍ಗೆ ಚಿತ್ರೀಕರಣವನ್ನು ಮಾಡಲಾಗಿದೆ.
ಛಾಯಾಗ್ರಾಹಕ ಗುರುಪ್ರಶಾಂತ್ ರೈ ಈ ಚಿತ್ರವನ್ನು ತಮ್ಮ ಕ್ಯಾಮೆರಾದಲ್ಲಿ ಸುಂದರವಾಗಿ ಸೆರೆ ಹಿಡಿದಿದ್ದಾರೆ. ಬೆಡಗಿ ಪ್ರಣೀತಾ ಈ ಚಿತ್ರದಲ್ಲಿ ಮೊದಲಬಾರಿಗೆ ಶಿವರಾಜ್‍ಕುಮಾರ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ನಟಿ ಆಶಿಕಾ ರಂಗನಾಥ್ ಶಿವಣ್ಣ ಅವರ ಸಹೋದರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವೀರಸಮರ್ಥ್ ಅವರ ಸಂಗೀತ ಸಾರಥ್ಯದಲ್ಲಿ ಈ ಚಿತ್ರದ ಹಾಡುಗಳು ಮೂಡಿಬಂದಿವೆ.
ತರುಣ್ ಟಾಕೀಸ್ ಲಾಂಛನದಲ್ಲಿ ತರುಣ್ ಶಿವಪ್ಪ ಮತ್ತು ಹಾರ್ದಿಕ್ ಗೌಡ ಸೇರಿ ನಿರ್ಮಿಸಿರುವ ಈ ಚಿತ್ರದಲ್ಲಿ ನಾಯಕ ಶಿವರಾಜ್‍ಕುಮಾರ್ ಅವರು ವಿಭಿನ್ನವಾದ ಗೆಟಪ್ಪುಗಳಲ್ಲಿ ಕಾಣಿಸಿಕೊಂಡಿರೋದು ವಿಶೇಷ. ಇನ್ನು ಈ ಚಿತ್ರಕ್ಕಾಗಿ ಕಾಶ್ಮೀರದ ಕಣಿವೆಗಳು ಹಾಗೂ ಕತಾರ್‍ನಲ್ಲಿ   ಒಂದು ಹಾಡು ಮತ್ತು ಆ್ಯಕ್ಷನ್ ದೃಷ್ಯಗಳ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರ ಜೊತೆಗೆ ವಿಜಯ್ ರಾಘವೇಂದ್ರ, ಗುರು ಜಗ್ಗೇಶ್, ಲೂಸ್ ಮಾದ ಯೋಗಿ ಸೇರಿದಂತೆ ಸ್ಯಾಂಡಲ್‍ವುಡ್‍ನ ಹಲವಾರು ಸ್ಟಾರ್ ಕಲಾವಿದರು ಕಾಣಿಸಿಕೊಂಡಿದ್ದಾರೆ.

 

ಶರ್ಮಿಳಾ ಮಾಂಡ್ರೆ, ಆಶಿಕಾ, ವಂಶಿ ಕೃಷ್ಣ, ಪ್ರಕಾಶ್ ಬೆಳವಾಡಿ, ಲಹರಿ ವೇಲು ಹಾಗೂ ಶ್ರೀನಗರ ಕಿಟ್ಟಿ – ಭಾವನ ದಂಪತಿಯ ಪುತ್ರಿ ಬೇಬಿ ಪರಿಣಿತ ಕೂಡಾ ಅಭಿನಯಿಸಿದ್ದಾರೆ. ಸ್ವಾತಂತ್ರ್ಯೋತ್ಸವದ ಮುಂಚೆಯೇ ಈ ಚಿತ್ರ ತೆರೆ ಮೇಲೆ ಬರುತ್ತಿದೆ. ಸಿನಿ ಪ್ರಿಯರಿಗೆ ದೇಶಾಭಿಮಾನದ ವಿಚಾರವನ್ನು ತೋರಿಸುವುದರ ಜತೆಗೆ ಜನಜಾಗೃತಿ ಮೂಡಿಸುವಂತಹ ಅಂಶ ಈ ಮಾಸ್ ಲೀಡರ್‍ನಲ್ಲಿದೆ ಎಂಬ ಮಾತು ಕೇಳಿಬರುತ್ತಿದೆ.  ಒಟ್ಟಿನಲ್ಲಿ ಅದ್ಧೂರಿ ಪ್ರಚಾರದೊಂದಿಗೆ ಮಾಸ್ ಲೀಡರ್ ಬೆಳ್ಳಿ ಪರದೆ ಮೇಲೆ ರಾರಾಜಿಸಲಿದೆ.

Facebook Comments

Sri Raghav

Admin