ಬಾಂಗ್ಲಾದಿಂದ ಬೆಂಗಳೂರಿಗೆ ಬಂದ 100ಕ್ಕೂ ಅನಾಮಿಕರು..!

ಈ ಸುದ್ದಿಯನ್ನು ಶೇರ್ ಮಾಡಿ

Childrens

ಬೆಂಗಳೂರು, ಜು.11- ಬಾಂಗ್ಲಾ ದೇಶದವರು ಎಂದು ಹೇಳಲಾದ ಸುಮಾರು 100ಕ್ಕೂ ಹೆಚ್ಚು ಮಕ್ಕಳು ಬೆಂಗಳೂರಿಗೆ ಆಗಮಿಸಿದ್ದು, ನಗರ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಯಾವುದೇ ದಾಖಲೆಗಳಿಲ್ಲದೆ ನಗರ ಪ್ರವೇಶಿಸಿರುವ ಈ ಮಕ್ಕಳ ಬಗ್ಗೆ ಹಲವಾರು ಗೊಂದಲಗಳು ವ್ಯಕ್ತವಾಗಿವೆ. ಸರಿ ಸುಮಾರು 10ರಿಂದ 15 ವರ್ಷದ ನೂರಕ್ಕೂ ಹೆಚ್ಚು ಮಕ್ಕಳು ಗೌಹಾಟಿ ರೈಲಿನಲ್ಲಿ ಆಗಮಿಸುತ್ತಿರುವ ಖಚಿತ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಇಂದು ಬೆಳಗ್ಗೆ ಕೆ.ಆರ್.ಪುರಂ ಮತ್ತು ಕಂಟೋನ್‍ಮೆಂಟ್ ರೈಲ್ವೆ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.

ಕೆ.ಆರ್.ಪುರಂ ರೈಲ್ವೆ ನಿಲ್ದಾಣದಲ್ಲಿ ಸುಮಾರು 32ಕ್ಕೂ ಹೆಚ್ಚು ಮಕ್ಕಳನ್ನು ವಶಕ್ಕೆ ಪಡೆಯಲಾಗಿದ್ದು, ರಾಮಮೂರ್ತಿನಗರ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಗಿದೆ.
ಮತ್ತೊಂದು ಬೋಗಿಯಲ್ಲಿದ್ದ ಸುಮಾರು 70ಕ್ಕೂ ಹೆಚ್ಚು ಮಕ್ಕಳನ್ನು ಕಂಟೋನ್‍ಮೆಂಟ್ ರೈಲ್ವೆ ನಿಲ್ದಾಣದಲ್ಲಿ ಇಳಿಸಿಕೊಂಡು ಭಾರತೀನಗರ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ. ಖಚಿತ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ರೈಲ್ವೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಆರಂಭದಲ್ಲಿ ರೈಲ್ವೆ ಪೊಲೀಸರು ವಿಚಾರಿಸಿದಾಗ ಈ ಮಕ್ಕಳು ಸ್ಪಷ್ಟ ಉತ್ತರ ನೀಡದೆ ಗೊಂದಲ ಉಂಟು ಮಾಡಿದ್ದಾರೆ.

Children-Bengaluru--02

ಮಕ್ಕಳ ಹೇಳಿಕೆಗಳ ಪ್ರಕಾರ ಬಹುತೇಕ ಮಕ್ಕಳು ಬಾಂಗ್ಲಾ ದೇಶದ ಮೂಲದವರಾಗಿದ್ದು, ಇನ್ನೂ ಕೆಲವರು ಪಶ್ಚಿಮಬಂಗಾಳಕ್ಕೆ ಸೇರಿದವರು ಎಂದು ಹೇಳಲಾಗಿದೆ.
ಕೇರಳದ ಮದರಸಾದಲ್ಲಿ ಶಿಕ್ಷಣ ಕೊಡಿಸುವುದಾಗಿ ಹೇಳಿ ತಮ್ಮನ್ನು ಮೌಲ್ವಿಯೊಬ್ಬರು ಕರೆತಂದಿರುವುದಾಗಿ ಮಕ್ಕಳು ಹೇಳಿಕೆ ನೀಡಿದ್ದಾರೆ. ಬಾಂಗ್ಲಾ ಮೂಲದವರು ಎಂದು ಹೇಳಿದ್ದರಿಂದ ಮಕ್ಕಳ ಬಳಿ ಇರುವ ದಾಖಲಾತಿಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಆದರೆ, ಆರಂಭದಲ್ಲಿ ಯಾವುದೇ ದಾಖಲೆಗಳು ಲಭ್ಯವಾಗಿಲ್ಲ. ಎಲ್ಲ ದಾಖಲೆಗಳನ್ನು ಮೌಲ್ವಿಗಳ ಬಳಿ ಕೊಟ್ಟಿರುವುದಾಗಿ ಮಕ್ಕಳು ಹೇಳಿದ್ದಾರೆ.

ಹಿರಿಯ ಅಧಿಕಾರಿಗಳು ಮತ್ತು ಸ್ವಯಂ ಸೇವಾ ಸಂಸ್ಥೆಯ ಕಾರ್ಯಕರ್ತರನ್ನು ಕರೆಸಿ ಅವರ ಸಮ್ಮುಖದಲ್ಲಿ ವಿಚಾರಣೆ ಮುಂದುವರೆಸಿದ್ದಾರೆ. ಈ ಪ್ರಕರಣದಲ್ಲಿ ಸ್ಪಷ್ಟ ಉತ್ತರ ಸಿಗದೇ ಇದ್ದುದ್ದರಿಂದ ಕೆಲ ಕಾಲ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಲವಾರು ರೀತಿಯ ಅನುಮಾನಗಳು ವ್ಯಕ್ತವಾಗಿ ಪೊಲೀಸರು ಎಲ್ಲಾ ದೃಷ್ಟಿಕೋನಗಳಿಂದಲೂ ವಿಚಾರಣೆ ಮುಂದುವರೆಸಿದ್ದಾರೆ. ಬಾಂಗ್ಲಾದೇಶದಿಂದ ಮಕ್ಕಳು ಬಂದಿದ್ದೇ ಆಗಿದ್ದರೆ ಅವರ ಬಳಿ ಸೂಕ್ತ ದಾಖಲೆಗಳು ಇರಬೇಕು. ಇಲ್ಲವಾದರೆ ಅದು ಅಕ್ರಮ ವಲಸೆಯಾಗಲಿದೆ. ಮಕ್ಕಳನ್ನು ಅಕ್ರಮವಾಗಿ ಕರೆತಂದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Children-Bengaluru--01

ಒಂದು ವೇಳೆ ಸೂಕ್ತ ದಾಖಲೆಗಳಿದ್ದು, ಕೇರಳದ ಮದರಸದಲ್ಲಿ ಶಿಕ್ಷಣ ಕೊಡಿಸುವ ಉದ್ದೇಶದಿಂದಲೇ ಕರೆತಂದಿದ್ದರೆ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಕಳುಹಿಸುವುದಾಗಿ ಹೇಳಲಾಗಿದೆ. ಚಿಕ್ಕವಯಸ್ಸಿನ ಮಕ್ಕಳನ್ನು ಮಾತ್ರ ರೈಲಿನಲ್ಲಿ ಕಳುಹಿಸಲಾಗಿದ್ದು, ಇವರ ಜತೆ ಹಿರಿಯರ್ಯಾರೂ ಇಲ್ಲದೇ ಇರುವುದು ಅನುಮಾನಗಳಿಗೆ ಕಾರಣವಾಗಿದೆ. ಜತೆಗೆ ತಮ್ಮ ಎಲ್ಲಾ ದಾಖಲೆಗಳು ಮೌಲ್ವಿಗಳ ಬಳಿ ಇವೆ ಎಂದು ಮಕ್ಕಳು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ಗೋಜಲುಮಯವಾಗಿದ್ದು, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ಮುಂದುವರೆಸಿದ್ದಾರೆ.

ಇತ್ತೀಚೆಗೆ ರಾಜ್ಯದಲ್ಲಿ ಹೊರಗಿನಿಂದ ಮಕ್ಕಳನ್ನು ಕರೆತಂದು ಬಾಲಕಾರ್ಮಿಕ ಪದ್ಧತಿಗೆ ಬಳಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.  ಪೊಲೀಸರು ವಿಚಾರಣೆ ನಡೆಸುವ ವೇಳೆ ಕೆಲವು ಮಕ್ಕಳ ಬಳಿ ಆಧಾರ್‍ಕಾರ್ಡ್‍ಗಳು ಪತ್ತೆಯಾಗಿವೆ. ಮೂಲತಃ ಬಾಂಗ್ಲಾದೇಶದವರು ಎಂದು ಹೇಳಲಾದ ಮಕ್ಕಳ ಹೆಸರಲ್ಲಿ ಆಧಾರಕಾರ್ಡ್ ಇರುವುದು ಪೊಲೀಸರ ಅನುಮಾನವನ್ನು ಮತ್ತಷ್ಟು ಹೆಚ್ಚಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin