ಬಾಂಬ್ ನಾಗನಿಗಾಗಿ ತಮಿಳುನಾಡಿನಲ್ಲಿ ತಲಾಶ್

ಈ ಸುದ್ದಿಯನ್ನು ಶೇರ್ ಮಾಡಿ

Bomb-Naga--01

ಬೆಂಗಳೂರು, ಏ.16- ಕಳೆದ ಶುಕ್ರವಾರ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಿ ಸಿನಿಮಿಯ ರೀತಿಯಲ್ಲಿ ನಾಪತ್ತೆಯಾಗಿರುವ ಪಾಲಿಕೆ ಮಾಜಿ ಸದಸ್ಯ ವಿ.ನಾಗರಾಜು ಅಲಿಯಾಸ್ ಬಾಂಬ್ ನಾಗ ನ್ಯಾಯಾಲಯದ ಮುಂದೆ ಶರಣಾಗಲು ಮುಂದಾಗಿದ್ದಾನೆ ಎಂದು ತಿಳಿದು ಬಂದಿದೆ.  ಈತ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು, ಅಲ್ಲಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ. ಉದ್ಯಮಿ ಅಪಹರಣ, ಹಳೇ ನೋಟುಗಳ ದಂಧೆ ಪ್ರಕರಣದಲ್ಲಿ ಭಾಗಿಯಾಗಿರುವ ಬಾಂಬ್ ನಾಗನ ಮನೆ ಹಾಗೂ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿದಾಗ 14.80 ಕೋಟಿ ರೂ. ಹಳೇ ನೋಟುಗಳು, ಕೋಟ್ಯಂತರ ರೂ. ಮೌಲ್ಯದ ಭೂ ದಾಖಲೆ ಪತ್ರಗಳು ಪತ್ತೆಯಾಗಿದ್ದವು.



ಪೊಲೀಸರ ದಾಳಿಗೂ ಮುನ್ನವೇ ಪರಾರಿಯಾಗಿದ್ದ ಬಾಂಬ್ ನಾಗ ತಮಿಳುನಾಡಿನಲ್ಲಿ ತಲೆ ಮರೆಸಿಕೊಂಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.
ಈತನ ಪತ್ತೆಗೆ ನಗರ ಪೊಲೀಸ್ ಆಯುಕ್ತ ಪ್ರವೀಣ್ಸೂದ್ ಅವರು ನಾಲ್ಕು ತಂಡಗಳನ್ನು ರಚಿಸಿದ್ದು, ಈ ತಂಡಗಳು ಚೆನ್ನೈ, ಧರ್ಮಪುರಿ, ಕಾಟ್ಪಾಡಿ ಸೇರಿದಂತೆ ತಮಿಳುನಾಡಿನ ಹಲವೆಡೆ ಶೋಧ ನಡೆಸುತ್ತಿವೆ.

ಸದ್ಯ ತಮಿಳುನಾಡಿನಲ್ಲಿ ತಲೆ ಮರೆಸಿಕೊಂಡಿರುವ ಬಾಂಬ್ ನಾಗ ಇನ್ನೆರೆಡು ದಿನಗಳಲ್ಲಿ ನ್ಯಾಯಾಲಯದ ಮುಂದೆ ಶರಣಾಗುವ ಸಾಧ್ಯತೆ ಇದೆ.
ಪೊಲೀಸ್ ಇಲಾಖೆಯಲ್ಲಿ ಪರಿಚಯವಿರುವ ಪೊಲೀಸ್ ಅಧಿಕಾರಿಗಳ ಮೂಲಕ ನ್ಯಾಯಾಲಯದಲ್ಲಿ ಶರಣಾಗುತ್ತೇನೆ. ಕಾಲಾವಕಾಶ ಕೊಡಿ ಎಂದು ಹಿರಿಯ ಅಧಿಕಾರಿಗಳಿಗೆ ಈತ ಮನವಿ ಮಾಡಿದ್ದಾನೆ ಎನ್ನಲಾಗಿದೆ.   ಈತನ ಶರಣಾಗತಿ ಪ್ರಸ್ತಾಪಕ್ಕೆ ಸೊಪ್ಪು ಹಾಕದ ನಗರ ಪೊಲೀಸರು ಪತ್ತೆ ಕಾರ್ಯವನ್ನು ಚುರುಕುಗೊಳಿಸಿದ್ದಾರೆ. ಬಾಂಬ್ ನಾಗ ತನ್ನಿಬ್ಬರು ಗಂಡು ಮಕ್ಕಳಿಗೆ ಗಾಂಧಿ, ಶಾಸ್ತ್ರಿ ಎಂಬ ಹೆಸರಿಟ್ಟಿದ್ದು, ಈ ಇಬ್ಬರೂ ಪುತ್ರರೂ ಬಾಂಬ್ನಾಗನೊಂದಿಗೆ ನಾಪತ್ತೆಯಾಗಿದ್ದಾರೆ.

ಹಳೇ ನೋಟುಗಳ ವಿನಿಮಯ, ವಂಚನೆ, ಉದ್ಯಮಿಗಳ ಅಪಹರಣ, ಹಣ ಸುಲಿಗೆ ಮತ್ತಿತರ ಅಪಹರಣ ಪ್ರಕರಣಗಳಲ್ಲಿ ಭಾಗಿಯಾಗಿರುವ ಈತನ ವಿರುದ್ಧ ಸಂಘಟಿತ ಅಪರಾಧ ಕಾಯ್ದೆ, ಕೋಕಾವನ್ನು ಬಳಸಲು ನಗರ ಪೊಲೀಸರು ಮುಂದಾಗಿದ್ದಾರೆ.  ಕಳೆದ ಡಿಸೆಂಬರ್ನಿಂದಲೇ ಬಾಂಬ್ ನಾಗ ಹಳೇ ನೋಟು ದಂಧೆಯನ್ನು ನಡೆಸುತ್ತಿದ್ದ ಮಾಹಿತಿ ಲಭ್ಯವಾಗಿದ್ದು, ಶೇ.30ರಷ್ಟು ಕಮೀಷನ್ ಪಡೆದು ಈತ ಹಳೇ ನೋಟುಗಳನ್ನು ಬದಲಾಯಿಸಿಕೊಳ್ಳುತ್ತಿದ್ದನು. ಹಲವರಿಗೆ ಹಣ ಕೊಡದೆ ವಂಚಿಸಿದ್ದನು ಎನ್ನಲಾಗಿದೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತರು ಹೆಚ್ಚಿನ ಮಾಹಿತಿ ಕಲೆ ಹಾಕಿದ್ದು, ಇದರ ಜತೆಗೆ ಈತ ಹಲವು ಬಿಲ್ಡರ್, ರಿಯಲ್ಎಸ್ಟೇಟ್ ಉದ್ಯಮಿಗಳನ್ನು ಬೆದರಿಸಿ ಜಮೀನು, ಮನೆ ಲಪಟಾಯಿಸಿರುವ ಬಗ್ಗೆಯೂ ಮಾಹಿತಿ ಕಲೆ ಹಾಕಿದ್ದು, ತನಿಖೆ ಮುಂದುವರೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin