ಬಾಂಬ್ ಭೀತಿಯಿಂದ ಬೆಚ್ಚಿಬಿದ್ದ ಮೈಸೂರು ಜನ..!

ಈ ಸುದ್ದಿಯನ್ನು ಶೇರ್ ಮಾಡಿ

Mysuru--01

ಮೈಸೂರು, ಡಿ.20- ಕೆಲ ದಿನಗಳ ಹಿಂದೆ ಕಾಲೇಜು ವಿದ್ಯಾರ್ಥಿಯೊಬ್ಬ ಇಬ್ಬರು ಆಗಂತುಕರು ಬಾಂಬ್ ಇಡಲು ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ಊಟಿ ರಸ್ತೆಯಲ್ಲಿ ಬಾಂಬ್ ಮಾದರಿ ವಸ್ತು ಪತ್ತೆಯಾಗಿರುವುದು ಮೈಸೂರು ಜನತೆಯನ್ನು ಬೆಚ್ಚಿ ಬೀಳಿಸಿದೆ. ಮೈಸೂರು-ಊಟಿ ರಸ್ತೆಯಲ್ಲಿರುವ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿಡಲಾಗಿದ್ದ ಬಿಳಿ ಬಟ್ಟೆಯಲ್ಲಿ ಸುತ್ತಿಟ್ಟಿದ್ದ ವಸ್ತು ಜನರಲ್ಲಿ ಭೀತಿ ಸೃಷ್ಟಿಸಿತ್ತು.

ಅನಾಮಧೇಯ ವಸ್ತುವಿನ ಬಗ್ಗೆ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ, ಬೆರಳಚ್ಚು ತಜ್ಞರೊಂದಿಗೆ ಪೊಲೀಸರು ದೌಡಾಯಿಸಿದರು. ಯಾವುದೇ ಅನಾಹುತ ಸಂಭವಿಸದಂತೆ ಎಚ್ಚರಿಕೆ ವಹಿಸಿದ ಪೊಲೀಸರು ಅನಾಮಧೇಯ ವಸ್ತುವನ್ನು ಸಮೀಪದ ಉದ್ಯಾನವನಕ್ಕೆ ಕೊಂಡೊಯ್ದು ಅಲ್ಲಿದ್ದ ಜನರನ್ನು ಹೊರ ಕಳುಹಿಸಿ ಪರಿಶೀಲಿಸಿದರು.

ಬಿಳಿ ಬಟ್ಟೆಯಲ್ಲಿ ಕಿಡಿಗೇಡಿಗಳು ತಾಮ್ರದ ತಂತಿ, ಫ್ಯೂಸ್, ಮೊಳೆ ಮತ್ತಿತರ ವಸ್ತುಗಳನ್ನು ಸುತ್ತಿಟ್ಟಿದ್ದರು. ಆದರೆ, ಬಟ್ಟೆಯಲ್ಲಿ ಯಾವುದೇ ಸ್ಫೋಟಕ ಇರದಿದ್ದರೂ ಉದ್ದೇಶ ಮಾತ್ರ ಬಾಂಬ್ ತಯಾರಿಸುವುದೇ ಆಗಿತ್ತು ಎನ್ನುವ ಮಾಹಿತಿ ಮಾತ್ರ ಪೊಲೀಸರನ್ನು ಬೆಚ್ಚಿ ಬೀಳಿಸಿದೆ. ದುಷ್ಕರ್ಮಿಗಳು ಬಾಂಬ್ ತಯಾರಿಸುವ ಉದ್ದೇಶದಿಂದಲೇ ಈ ಕಚ್ಚಾ ವಸ್ತುಗಳನ್ನು ಸಾಗಿಸುತ್ತಿದ್ದರು ಎನ್ನಲಾಗಿದೆ. ಆದರೆ, ಅವರು ಬಸ್ ನಿಲ್ದಾಣದಲ್ಲೇ ಬಾಂಬ್ ತಯಾರಿಕಾ ಕಚ್ಚಾ ವಸ್ತುವನ್ನು ಬಿಟ್ಟು ಪರಾರಿಯಾಗಿರುವುದು ಹಲವಾರು ಅನುಮಾನಗಳನ್ನು ಸೃಷ್ಟಿಮಾಡಿದೆ.

ಕೆಲ ದಿನಗಳ ಹಿಂದೆ ಮೈಸೂರಿನ ವಿದ್ಯಾರ್ಥಿಯೊಬ್ಬ ಇಬ್ಬರು ಆಗಂತುಕರು ನನ್ನನ್ನು ಉಗ್ರವಾದಕ್ಕೆ ಪ್ರೇರೇಪಿಸುತ್ತಿದ್ದಾರೆ. ನಗರದಲ್ಲಿ ಬಾಂಬ್ ಇಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ವಿದ್ಯಾರ್ಥಿಯ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ನಗರದೆಲ್ಲೆಡೆ ನಾಕಾಬಂದಿ ವಿಧಿಸಿ ತೀವ್ರ ಪರಿಶೀಲನೆ ನಡೆಸುತ್ತಿದ್ದರು. ಹೀಗಾಗಿ ಬಾಂಬ್ ಮಾದರಿಯ ವಸ್ತು ಹೊಂದಿದ್ದ ಆಗಂತುಕರು ಪೊಲೀಸರ ಭೀತಿಯಿಂದ ತಮ್ಮ ಬಳಿ ಇದ್ದ ವಸ್ತುವನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ.

ವಿಶ್ವವಿಖ್ಯಾತ ಅರಮನೆ, ವಸ್ತು ಸಂಗ್ರಹಾಲಯ ಮತ್ತಿತರ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿರುವ ಸಾಂಸ್ಕøತಿಕ ನಗರಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಉಗ್ರರ ಕೆಂಗಣ್ಣು ಮೈಸೂರಿನ ಮೇಲೂ ಬಿದ್ದಿರುವ ಸಾಧ್ಯತೆ ಇದೆ. ಕೆಲ ದಿನಗಳ ಹಿಂದೆ ಮೈಸೂರು ನ್ಯಾಯಾಲಯದ ಶೌಚಾಲಯದಲ್ಲಿ ಕಚ್ಚಾ ಬಾಂಬ್ ಸ್ಫೋಟಗೊಂಡು ಕೆಲವರು ಗಾಯಗೊಂಡಿದ್ದರು. ಅರಮನೆ ಸಮೀಪವೂ ಕೆಲ ಅನುಮಾನಾಸ್ಪದ ವ್ಯಕ್ತಿಗಳು ಓಡಾಡುತ್ತಿರುವ ಅಂಶವೂ ಬೆಳಕಿಗೆ ಬಂದಿತ್ತು.  ಒಟ್ಟಾರೆ ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಉಗ್ರರ ಕೆಂಗಣ್ಣು ಸಾಂಸ್ಕøತಿಕ ನಗರಿಯ ಮೇಲೂ ನೆಟ್ಟಿದೆ ಎಂಬುದನ್ನು ದೃಢಪಡಿಸಿದೆ. ಉಗ್ರರ ದಾಳಿ ಭೀತಿ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಮೈಸೂರು ಪೊಲೀಸರು ಯಾವುದೇ ಅನಾಹುತ ಸಂಭವಿಸದಂತೆ ಕಟ್ಟೆಚ್ಚರ ವಹಿಸಿದ್ದಾರೆ.

Facebook Comments

Sri Raghav

Admin