ಬಾಕಿ ವೇತನಕ್ಕೆ ಆಗ್ರಹಿಸಿ ಮುದ್ದೇಬಿಹಾಳ ಪುರಸಭೆ ಪೌರಕಾರ್ಮಿಕರ ಧರಣಿ

ಈ ಸುದ್ದಿಯನ್ನು ಶೇರ್ ಮಾಡಿ

3
ಮುದ್ದೇಬಿಹಾಳ,ಸೆ.28- ತಮಗೆ ಬರಬೇಕಿದ್ದ ಬಾಕಿ ವೇತನ ಪಾವತಿಸುವಂತೆ ಆಗ್ರಹಿಸಿ ಪುರಸಭೆ ಸದಸ್ಯರೊಬ್ಬರ ಮನೆಯ ಎದುರು ಪೌರಕಾರ್ಮಿಕ ಮಹಿಳೆಯರು ಕೆಲಕಾಲ ದಿಢೀರ್ ಕೆಲಸ ಸ್ಥಗಿತಗೊಳಿಸಿ ಧರಣಿ ನಡೆಸಿದ ಘಟನೆ ಪಟ್ಟಣದಲ್ಲಿ ನಿನ್ನೆ ಬೆಳಗ್ಗೆ ನಡೆದಿದೆ. ಪಟ್ಟಣದಲ್ಲಿ ಬೀದಿ ಸ್ವಚ್ಛಗೊಳಿಸುವ ಮಹಿಳಾ ಪೌರ ಕಾರ್ಮಿಕರು ಬೆಳಗ್ಗೆ ಎಂದಿನಂತೆ ಕಸಗೂಡಿಸುವ ಕೆಲಸ ನಿರ್ವಹಿಸುತ್ತಿದ್ದರು. ಆದರೆ ನಿನ್ನೆ ದಿಢೀರ್‍ನೇ ತಾವು ಮಾಡುತ್ತಿದ್ದ ಕೆಲಸವನ್ನು ಬಿಟ್ಟು ಕಸ ಸಂಗ್ರಹಿಸುವ ಡಬ್ಬ, ಸ್ವಚ್ಛತಾ ಸಾಮಗ್ರಿಯನ್ನು ಅಲ್ಲಿಂದಲ್ಲಿಯೇ ಬಿಟ್ಟು ವಿದ್ಯಾ ನಗರದಲ್ಲಿರುವ ಸದಸ್ಯರ ಮನೆಗೆ ತೆರಳಿದರು.

ಅರ್ಧ ಗಂಟೆಗೂ ಹೆಚ್ಚು ಕಾಲ ಅವರ ಮನೆ ಎದುರು ಸದಸ್ಯರ ಬರುವಿಕೆಗೆ ಕಾಯ್ದು ಕೂತರು. ಆದರೆ ಸದಸ್ಯರು ಮನೆಯಲ್ಲಿಲ್ಲದ ಕಾರಣ ಮರಳಿ ತಮ್ಮ ಕೆಲಸಕ್ಕೆ ಹಾಜರಾದರು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪೌರ ಕಾರ್ಮಿಕ ಮಹಿಳೆಯರು ಎಪ್ಪಾ ನಮ್ಮ ಪಗಾರ ಎರ್ಡ ತಿಂಗ್ಳಾತು ಆಗಿಲ್ಲ. ಹಬ್ಬಾ ಬಂತು ಅದ್ಕ ಕೈಯ್ಯಾಗ ರೊಕ್ಕಾ ಇಲ್ಲಂದ್ರ ಹಬ್ಬಾ ಹೆಂಗ ಮಾಡ್ಬೇಕು? ಏನು ಸಮಸ್ಯೆ ಇಲ್ಲಾ ಪಗಾರದ್ದ ಸಮಸ್ಯೆ ಆಗ್ಯದ್ರಿ ಎಂದು ಹೇಳಿದರು.ಪುರಸಭೆ ಅಧ್ಯಕ್ಷ ಬಸನಗೌಡ ಪಾಟೀಲ ಮಾತನಾಡಿ, ಇಪಿಎಫ್ 7-8 ಜನರ ಖಾತೆಗೆ ಹಾಕಬೇಕಿತ್ತು. ಆದರೆ ಅವರ ಆಧಾರ್

ಕಾರ್ಡ ಇನ್ನೂ ಖಾತೆಗೆ ಹೊಂದಾಣಿಕೆಯಾಗಿಲ್ಲದ ಕಾರಣ ವೇತನ ಪಾವತಿ ವಿಳಂಬವಾಗಿದೆ.ಖಾಸಗಿ ಗುತ್ತಿಗೆ ನೀಡಲಾಗಿದ್ದು ಅವರೇ ವೇತನದ ಜವಾಬ್ದಾರಿ ಹೊಂದಿರುತ್ತಾರೆ, ತ್ವರಿತವಾಗಿ ವೇತನ ಬಟವಡೆ ಮಾಡುವ ಕುರಿತು ಮಾಹಿತಿ ತಂದೊಪ್ಪಿಸಿದರೆ ಪುರಸಭೆಯಿಂದ ಆರ್‍ಟಿಜಿಎಸ್ ಮೂಲಕ ಅವರಿಗೆ ವೇತನ ನೀಡಲಾಗುವುದು, ಎರಡು ತಿಂಗಳ ವೇತನ ಬಾಕಿ ಉಳಿದಿರುವುದು ನಿಜ ಎಂದು ಹೇಳಿದರು.  ಪ್ರಭಾರಿ ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ ಮಾತನಾಡಿ, ನ್ಯಾಯಾಲಯದ ಪ್ರಕರಣ ನಿಮಿತ್ಯ ನಾನು ಗುಲ್ಬರ್ಗಾ ಹೈಕೋರ್ಟ್‍ಗೆ ಬಂದಿದ್ದೇನೆ.ಅಲ್ಲೇನಾಗಿದೆ ಎಂಬುದು ತಿಳಿದಿಲ್ಲ. ಬೆಳಗ್ಗೆ ಬಂದು ಪೌರಕಾರ್ಮಿಕ ಮಹಿಳೆಯರಿಗೆ ಏನು ಸಮಸ್ಯೆ ಆಗಿದೆ ಎಂಬುದನ್ನು ಪರಿಶೀಲನೆ ನಡೆಸಿ ಉತ್ತರ ನೀಡುತ್ತೇನೆ ಎಂದು ತಿಳಿಸಿದರು.

 

► Follow us on –  Facebook / Twitter  / Google+

Facebook Comments

Sri Raghav

Admin