ಬಾಗಲೂರು ಚಿನ್ನದಂಗಡಿ ದರೋಡೆ ಪ್ರಕರಣ ಬಯಲು : ನೌಕರ ಸೇರಿ ನಾಲ್ವರ ಸೆರೆ, 2 ಕೋಟಿ ಚಿನ್ನಾಭರಣ ವಶ

ಈ ಸುದ್ದಿಯನ್ನು ಶೇರ್ ಮಾಡಿ

Bagaluru

ಬೆಂಗಳೂರು,ಆ.8- ಮಾಲೀಕನ ಮೇಲಿನ ಕೋಪಕ್ಕೆ ಜ್ಯುವೆಲ್ಸ್ ಅಂಗಡಿ ದರೋಡೆ ಮಾಡಿಸಿದ್ದ ನೌಕರ ಸೇರಿ ನಾಲ್ವರನ್ನು ಎರಡೇ ದಿನದಲ್ಲಿ ಬಾಗಲೂರು ಪೊಲೀಸರು ಬಂಧಿಸಿ ಎರಡು ಕೋಟಿ ಮೌಲ್ಯದ ಆಭರಣಗಳನ್ನು ವಶಪಡಿ ಸಿಕೊಳ್ಳುವಲ್ಲಿ ಯಶಸ್ವಿ ಯಾಗಿದ್ದಾರೆ.ರಾಜಲಕ್ಷ್ಮಿ ಜ್ಯುವೆಲ್ಸ್‍ನ ನೌಕರ ರಾಜಸ್ಥಾನ ಮೂಲದ ಗೋಪಾಲರಾಮ್ ಅಲಿಯಾಸ್ ಗೋಪಾಲ್(24), ಪಾರಸ್‍ಮಾಲ್(35), ಸ್ಥಳೀಯ ನಿವಾಸಿಗಳಾದ ಮಂಜುನಾಥ್(40) ಮತ್ತು ಮುನಿಯಪ್ಪ(46) ಬಂಧಿತ ಆರೋಪಿಗಳು.  ಪ್ರಮುಖ ಆರೋಪಿ ಗೋಪಾಲರಾಮ್ ಕಳೆದ 13 ವರ್ಷದ ಹಿಂದೆ ರಾಜಸ್ಥಾನದಿಂದ ನಗರಕ್ಕೆ ಬಂದು ಯಲಹಂಕ ಉಪನಗರದಲ್ಲಿ  ಗೋವಿಂದ್ ಸಿಂಗ್ ಎಂಬುವರ ಸಂಬಂಧಿಕರ  ಎರಡು ಆಭರಣದ ಅಂಗಡಿಯಲ್ಲಿ ತಲಾ 4 ವರ್ಷದಂತೆ ಎಂಟು ವರ್ಷ ಕೆಲಸ ಮಾಡಿದ್ದನು.

ಆ ವೇಳೆ ಬೇರೆ ಒಡವೆ ಅಂಗಡಿ ಹಾಕಿಕೊಡುವುದಾಗಿ ನಂಬಿಸಿ ದಿನದ 24 ಗಂಟೆಯೂ ದುಡಿಸಿಕೊಳ್ಳುತ್ತಿದ್ದ ಮಾಲೀಕರ ವರ್ತನೆಯಿಂದ ಹಾಗೂ ಕಡಿಮೆ ಸಂಬಳ ನೀಡಿ ನಂತರ ಕೆಲಸದಿಂದ ತೆಗೆದು ಹಾಕಿದ್ದರಿಂದ ತನ್ನ ಊರಿಗೆ ವಾಪಸ್ ಆಗಿದ್ದನು.   ಮತ್ತೆ ರಾಜಸ್ಥಾನದಿಂದ ಎರಡು ವರ್ಷದ ಹಿಂದೆ ಬೆಂಗಳೂರಿಗೆ ಬಂದು ಬಾಗಲೂರು ಠಾಣೆ ವ್ಯಾಪ್ತಿಯ ದ್ವಾರಕನಗರದಲ್ಲಿನ ಶ್ರೀ ರಾಜಲಕ್ಷ್ಮಿ ಜ್ಯುವೆಲ್ಸ್ ಮತ್ತು ಬ್ಯಾಂಕರ್ಸ್ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದನು. ಅಂಗಡಿಯ ಮಾಲೀಕ ಗೋವಿಂದ್ ಸಿಂಗ್ ಈತನಿಗೆ ನಾಲ್ಕು ವರ್ಷ ಕೆಲಸ ಮಾಡಿದರೆ ಬೇರೆ ಅಂಗಡಿ ಹಾಕಿಕೊಡುವುದಾಗಿ ಹೇಳಿದ್ದರು ಎನ್ನಲಾಗಿದೆ.

ಈ ನಡುವೆ ಎರಡು ತಿಂಗಳಿನಿಂದ ಮಾಲೀಕರ ಸಂಬಂಧಿಕರೊಬ್ಬರನ್ನು ಅಂಗಡಿ ಕೆಲಸಕ್ಕೆ ಕರೆದುಕೊಂಡು ಬಂದಿದ್ದನು ಗಮನಿಸಿದ ನೌಕರ ಗೋಪಾಲ್ ತನ್ನನ್ನು ಕೆಲಸದಿಂದ ತೆಗೆದು ಹಾಕುತ್ತಾರೆ ಎಂದು ಹೆದರಿ ಆಭರಣ ದರೋಡೆ ಮಾಡಲು ಸಂಚು ರೂಪಿಸುತ್ತಾನೆ.  ಮಾಲೀಕರ ನಂಬಿಕೆಗೆ ಪಾತ್ರನಾಗಿದ್ದ ಈತ ಪ್ರತಿದಿನ ಕೆಲಸ ಮುಗಿದ ನಂತರ ಮಾಲೀಕರ ಮನೆಯಲ್ಲಿ ಊಟ ಮುಗಿಸಿ ಮತ್ತೆ ಅಂಗಡಿಗೆ ಬಂದು ರಾತ್ರಿ ಅಲ್ಲೇ ಮಲಗಿಕೊಂಡು ಪುನಃ ಬೆಳಗ್ಗೆ ಎದ್ದು  ಅವರ ಮನೆಯಲ್ಲೆ ಸ್ನಾನ, ತಿಂಡಿ ಮುಗಿಸಿ ಅಂಗಡಿಗೆ ಬರುವುದು ಈತನ ಕಾಯಕವಾಗಿತ್ತು.
ಆಭರಣ ದರೋಡೆ ಮಾಡಲು ರಾಜಸ್ಥಾನದಿಂದ ತನ್ನ ಸ್ನೇಹಿತ ಪಾರಸ್‍ಮಾಲ್‍ನನ್ನು ಬೆಂಗಳೂರಿಗೆ ಕರೆಸಿಕೊಂಡು 4ರಂದು ಮಧ್ಯರಾತ್ರಿ ಆಭರಣಗಳನ್ನು ಪ್ಯಾಕ್ ಮಾಡಿ ಕ್ಯಾಬ್ ತರಿಸಿಕೊಂಡು ಆಭರಣಗಳೊಂದಿಗೆ ಪಾರಸ್‍ಮಾಲ್ ಸಿಟಿ ರೈಲ್ವೆ ನಿಲ್ದಾಣಕ್ಕೆ ಡ್ರಾಪ್ ಪಡೆದು ರೈಲಿನಲ್ಲಿ ಹುಬ್ಬಳ್ಳಿಗೆ ತೆರಳಿ ಅಲ್ಲಿಂದ ರಾಜಸ್ಥಾನಕ್ಕೆ  ಆಭರಣಗಳೊಂದಿಗೆ ಹೋಗಿದ್ದಾನೆ.
ಆಭರಣ ದರೋಡೆಯಾಗಿದೆ ಎಂಬ ನಾಟಕವಾಡಲು ನೌಕರ ಗೋಪಾಲ್‍ರಾಮ್ ಸ್ಥಳೀಯ ನಿವಾಸಿಗಳಾದ ಮಂಜುನಾಥ್ ಮತ್ತು ಮುನಿಯಪ್ಪನಿಗೆ ಎರಡು ಲಕ್ಷ ಆಮಿಷವೊಡ್ಡಿದ್ದನು. ಅದರಂತೆ ಆ.5ರಂದು ಮುಂಜಾನೆ 7.15ರಲ್ಲಿ ಈ ಇಬ್ಬರು ತನ್ನ ಮೂವರು ಸಹಚರರೊಂದಿಗೆ ಮಾಂಗಲ್ಯ ಸರ ಕೊಳ್ಳುವ ನೆಪದಲ್ಲಿ ಗ್ರಾಹಕರಂತೆ ಅಂಗಡಿಗೆ ಬಂದು ನೌಕರ ಗೋಪಾಲ್ ಮೇಲೆ ಹಲ್ಲೆ ನಡೆಸಿ ಸೀಮೆಎಣ್ಣೆ ಸುರಿದು ಬೆದರಿಸಿ ಪರಾರಿಯಾಗಿದ್ದರು.

ತದನಂತರ ಗೋಪಾಲ್ ಅಂಗಡಿ ಮಾಲೀಕರಾದ ಗೋವಿಂದ್‍ಸಿಂಗ್‍ಗೆ ದೂರವಾಣಿ ಕರೆ ಮಾಡಿ ಆಭರಣಗಳನ್ನು ದರೋಡೆ ಮಾಡಲಾಗಿದೆ ಎಂದು ನಾಟಕ ಹೆಣೆದಿದ್ದನು.  ಈ ಪ್ರಕರಣ ಸ್ಥಳೀಯ ನಾಗರಿಕರನ್ನು ಬೆಚ್ಚಿ ಬೀಳಿಸಿತ್ತು. ಬೆಳ್ಳಂಬೆಳಗ್ಗೆ ಈ ದರೋಡೆ ನಡೆದಿರುವುದನ್ನು ಗಂಭೀರವಾಗಿ ಪರಿಗಣಿಸಿದ ಬಾಗಲೂರು ಪೊಲೀಸರು ದರೋಡೆಕೋರರ ಪತ್ತೆಗೆ ವಿಶೇಷ ತಂಡ ರಚಿಸಿದ್ದರು. ಈ ತಂಡ ಸ್ಥಳೀಯರಿಂದ ಹೆಚ್ಚಿನ ಮಾಹಿತಿ ಕಲೆ ಹಾಕಿದ್ದಲ್ಲದೆ ಅಂಗಡಿಯ ನೌಕರ ಗೋಪಾಲ್‍ನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಈ ದರೋಡೆ ನಾಟಕ ಬಯಲಾಗಿದೆ. ತನಗೆ ಅಂಗಡಿ ಮಾಲೀಕರು ಸರಿಯಾದ ಊಟ ತಿಂಡಿ , ಸಂಬಳ ಕೊಡುತ್ತಿರಲಿಲ್ಲ. ಅಲ್ಲದೆ ಹೆಂಡತಿಮಕ್ಕಳನ್ನು ನೋಡುವ ಸಲುವಾಗಿ ಊರಿಗೆ ಹೋಗಲು ರಜೆ ಕೊಡುತ್ತಿರಲಿಲ್ಲ. ಪ್ರತಿದಿನ ಸಂಜೆ ಅಂಗಡಿ ಲೆಕ್ಕ ನೋಡುವಾಗ ಹಣ ಕಡಿಮೆಯಿದೆ ಎಂದು ವಿನಾಕಾರಣ ಕಿರುಕುಳ ನೀಡುತ್ತಿದ್ದರು, ಅಲ್ಲದೆ ಬೇರೆ ಅಂಗಡಿ ಮಾಡಿಕೊಡದೆ ಮೋಸ ಮಾಡಿ ಕೆಲಸದಿಂದ ತೆಗೆದು ಹಾಕಬೇಕೆಂದು ನಿರ್ಧರಿಸಿದ್ದರಿಂದ ಬೇರೆಯವರ ಸಹಾಯದಿಂದ ಆಭರಣ ಕಳ್ಳತನವಾಗಿದೆ ಎಂದು ನಂಬಿಸಿ ರಾಜಸ್ಥಾನಕ್ಕೆ ಆಭರಣ ಸಾಗಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.

ಈತನ ಹೇಳಿಕೆ ಆಧರಿಸಿ ಪೊಲೀಸ್ ತಂಡ ರಾಜಸ್ಥಾನಕ್ಕೆ ತೆರಳಿ ಆರೋಪಿ ಪಾರಸ್‍ಮಾಲ್‍ನನ್ನು ಬಂಧಿಸಿ ಎರಡು ಕೋಟಿ ಬೆಲೆ ಬಾಳುವ 6 ಕೆ.ಜಿ ತೂಕದ  ವಿವಿಧ ವಿನ್ಯಾಸದ ಚಿನ್ನದ ಸರಗಳು, ನೆಕ್ಲೆಸ್‍ಗಳು, ಉಂಗುರಗಳು, ಓಲೆ, ಜುಮ್ಕಿಗಳು, ತಾಳಿ ಮತ್ತು ಗುಂಡುಗಳು, ಬಳೆಗಳು, ಬ್ರಾಸ್‍ಲೈಟ್‍ಗಳು, ಚಿನ್ನದ ನಾಣ್ಯಗಳು ಮುಂತಾದ ಚಿನ್ನದ ಒಡವೆಗಳು ಹಾಗೂ 4 ಕೆ.ಜಿ. ತೂಕದ ವಿವಿಧ  ವಿನ್ಯಾಸದ ಬೆಳ್ಳಿಯ ಕಾಲ್ಗೆಜ್ಜೆಗಳು, ಮಕ್ಕಳ ಕೈ-ಕಾಳು ಬಳೆಗಳು, ಚೈನ್, ಬ್ರಾಸ್‍ಲೈಟ್ ಮತ್ತಿತರ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.  ಬಹುಮಾನ: ಕ್ಷಿಪ್ರ ಕಾರ್ಯಾಚರಣೆಯಿಂದ ಆಭರಣಗಳನ್ನು ವಶ ಪಡಿಸಿಕೊಳ್ಳುವಲ್ಲಿ ಹಾಗೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ತಂಡಕ್ಕೆ ಅಂಗಡಿ ಮಾಲೀಕ ಗೋವಿಂದ್ ಸಿಂಗ್ 50 ಸಾವಿರ ಬಹುಮಾನ ನೀಡಿದ್ದಾರೆ.

Facebook Comments

Sri Raghav

Admin