ಬಾಣಂತಿ ಪತ್ನಿಗೆ ವಿಷಕುಡಿಸಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪತಿ..!

ಈ ಸುದ್ದಿಯನ್ನು ಶೇರ್ ಮಾಡಿ

ಚನ್ನಪಟ್ಟಣ, ಮಾ.19- ಕುಟುಂಬ ಕಲಹದಿಂದ ಮಾನಸಿಕವಾಗಿ ಮನನೊಂದಿದ್ದ ವ್ಯಕ್ತಿ ಒಂದೂವರೆ ತಿಂಗಳು ಬಾಣಂತಿ ಪತ್ನಿಗೆ ಬಲವಂತವಾಗಿ ವಿಷ ಕುಡಿಸಿ ನಂತರ ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ಪತ್ನಿ ಮೃತಪಟ್ಟು ಪತಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಘಟನೆ ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬಾಣಂತಿ ದಿವ್ಯ(20) ಸಾವನ್ನಪ್ಪಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿರುವ ಪತಿ ಮಹದೇವ (35) ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಗ್ರಾಮದ ನಿಂಗರಾಜು ಎಂಬುವವರ ಮಗಳಾದ ದಿವ್ಯಳನ್ನು ಎರಡು ವರ್ಷದ ಹಿಂದೆ ಅದೇ ಗ್ರಾಮದ ಪುಟ್ಟಮಾದಣ್ಣ ಎಂಬುವವರ ಮಗನಾದ ಮಹದೇವನಿಗೆ ಮದುವೆ ಮಾಡಿಕೊಡಲಾಗಿತ್ತು.

ಆಫೆಆಟೋ ಚಾಲಕನಾಗಿ ಜೀವನ ನಿರ್ವಹಣೆ ಮಾಡುತ್ತಿದ್ದ ಮಹದೇವ ದಿವ್ಯ ದಂಪತಿಗೆ ಒಂದೂವರೆ ವರ್ಷದ ಗಂಡು ಮಗು ಹಾಗೂ ಒಂದೂವರೆ ತಿಂಗಳಿನ ಹೆಣ್ಣು ಮಗಳಿದ್ದಳು. ಕೆಲ ದಿನಗಳಿಂದ ಕುಟುಂಬದಲ್ಲಿ ಜಮೀನಿನ ವಿಚಾರದಲ್ಲಿ ಸೋದರರಿಗೂ ಈತನಿಗೂ ಮನಸ್ತಾಪ ಉಂಟಾಗಿ ಜಮೀನು ಮಾರಾಟ ಮಾಡಲು ಸಹೋದರರು ಸಹಿ ಮಾಡಲಿಲ್ಲ ಎಂದು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದನೆಂದು ಹೇಳಲಾಗಿದೆ.

ಇದೇ ವಿಚಾರವಾಗಿ ಪತ್ನಿ ಜೊತೆ ಚರ್ಚೆ ನಡೆಸಿ ಒಂದೂವರೆ ತಿಂಗಳ ಬಾಣಂತಿ ಎಂಬುದನ್ನೂ ಮನಗಾಣದೆ ಆಕೆಗೆ ಬಲವಂತವಾಗಿ ವಿಷಕುಡಿಸಿ ತಾನೂ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಇಬ್ಬರೂ ಸಾವು-ಬದುಕಿನ ಜತೆ ಹೋರಾಟ ನಡೆಸುವಾಗ ಸ್ಥಳೀಯರು ತಕ್ಷಣ ಇಬ್ಬರನ್ನೂ ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಜಿಲ್ಲಾಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಪತ್ನಿ ಸಾವನ್ನಪ್ಪಿದ್ದಾಳೆ.

ಗಂಭೀರ ಸ್ಥಿತಿಯಲ್ಲಿದ್ದ ಪತಿ ಮಹದೇವನನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಆತನ ದೇಹ ಚಿಕಿತ್ಸೆಗೆ ಸ್ಪಂದಿಸದೆ ನಂತರ ಮೈಸೂರಿನ ಬೃಂದಾವನ ಆಸ್ಪತ್ರೆಗೆ ದಾಖಲಿಸಿ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಸಾವಿನ ದವಡೆಯಿಂದ ಪಾರಾಗಿದ್ದಾನೆ.  ಅಕ್ಕೂರು ಪೊಲೀಸ್ ಠಾಣೆಯ ಪಿಎಸ್‍ಐ ಭಾಸ್ಕರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Facebook Comments