ಬಾಬರಿ ಮಸೀದಿ ಧ್ವಂಸ ಪ್ರಕರಣ : ಅಡ್ವಾಣಿ, ಉಮಾ, ಜೋಷಿ ಸೇರಿ 12 ಜನರಿಗೆ ಜಾಮೀನು

ಈ ಸುದ್ದಿಯನ್ನು ಶೇರ್ ಮಾಡಿ

Advani-Babri--01

ಲಕ್ನೋ, ಮೇ 30-ದೇಶಾದ್ಯಂತ ಭಾರೀ ವಿವಾದಕ್ಕೆ ಕಾರಣವಾಗಿದ್ದ 1992ರ ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಮುಖಂಡರಾದ ಎಲ್.ಕೆ. ಅಡ್ವಾಣಿ, ಉಮಾ ಭಾರತಿ ಮತ್ತು ಡಾ. ಮುರಳಿ ಮನೋಹರ ಜೋಷಿ ಸೇರಿದಂತೆ 12 ಮಂದಿಗೆ ಇಂದು ಲಕ್ನೋದ ಸಿಬಿಐ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ. ಇದರೊಂದಿಗೆ ಅವರ ವಿರುದ್ಧ ಕ್ರಿಮಿನಲ್ ಒಳಸಂಚು ಆರೋಪಗಳ ಪ್ರಕರಣದಿಂದ ತಾತ್ಕಾಲಿಕ ಪರಿಹಾರ ದೊರೆತಂತಾಗಿದೆ. ಸಿಬಿಐ ವಿಶೇಷ ಕೋರ್ಟ್ ಆದೇಶದ ಮೇರೆಗೆ ಮಾಜಿ ಉಪ ಪ್ರಧಾನಿ ಅಡ್ವಾನಿ, ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿ ಮತ್ತು ಬಿಜೆಪಿ ಹಿರಿಯ ಧುರೀಣ ಡಾ. ಜೋಷಿ ಇಂದು ನ್ಯಾಯಮೂರ್ತಿ ಎಸ್.ಕೆ. ಯಾದವ್ ಅವರ ಮುಂದೆ ಹಾಜರಾದರು.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಯವರು ಬಿಜೆಪಿ ಮುಖಂಡರ ವಕೀಲರ ಮನವಿಯನ್ನು ಪುರಸ್ಕರಿಸಿ ಪ್ರಕರಣದ ಎಲ್ಲ 12 ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದರು.   ಮಹಂತ ನೃತ್ಯ ಗೋಪಾಲ್ ದಾಸ್, ಮಹಂತ ರಾಮ್ ವಿಲಾಸ್ ವೇದಾಂತಿ, ವೈಕುಂಠಲಾಲ್ ಶರ್ಮ ಅಲಿಯಾಸ್ ಪ್ರೇಮ್‍ಜೀ, ಮಹಂತ ಧರ್ಮದಾಸ್, ಸಾಧ್ವಿ ರೀತಾಂಬರ, ಬಿಜೆಪಿ ಸಂಸದ ವಿನಯ್ ಕಟಿಯಾರ್, ಸತೀಶ್ ಪ್ರಧಾನ್, ಚಂಪಟ್ ರಾಯ್ ಬನ್ಸಾಲ್, ವಿಶ್ವಹಿಂದು ಪರಿಷತ್‍ನ(ವಿಎಚ್‍ಪಿ) ವಿಷ್ಣು ಹರಿ ದಾಲ್ಮಿಯಾ ಅವರ ವಿರುದ್ಧವೂ ಒಳಸಂಚು ಆರೋಪಗಳ ವಿಚಾರಣೆ ಆರಂಭಿಸಿತ್ತು.

ಡಿಸೆಂಬರ್ 6, 1992ರ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಒಳಸಂಚಿನ ಆರೋಪಕ್ಕೆ ಗುರಿಯಾಗಿದ್ದ ಇವರು ತಮ್ಮ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ನೀಡಬೇಕೆಂದು ಕೋರ್ಟ್‍ಗೆ ಮನವಿ ಮಾಡಿದ್ದರು.   ಈ ನಾಯಕರ ವಿರುದ್ಧ ಒಳಸಂಚು ಆರೋಪಗಳನ್ನು ದಾಖಲಿಸುವುದಕ್ಕಾಗಿ ಅವರೆಲ್ಲರೂ ಖುದ್ದಾಗಿ ಹಾಜರಾಗಬೇಕೆಂದು ನ್ಯಾಯಾಲಯವು ಆದೇಶ ನೀಡಿತ್ತು. ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಬೇಕು ಎಂದು ಈ ಮುಖಂಡರು ಯಾವುದೇ ಮನವಿ ಸಲ್ಲಿಸಬಾರದು ಎಂದು ಕಳೆದ ವಾರ ವಿಶೇಷ ನ್ಯಾಯಾಲಯ ತಿಳಿಸಿತ್ತು.

ಉಮಾ ಭಾರತಿ ಪ್ರತಿಕ್ರಿಯೆ :

ಈ ಪ್ರಕರಣದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಅಪರಾಧಿಯಲ್ಲ. ಈ ಪ್ರಕರಣವು ದೇವರಿಗೆ ಸಂಬಂಧಿಸಿದ್ದು ಎಂದು ವಿಚಾರಣೆಗೆ ಹಾಜರಾಗುವುದಕ್ಕೆ ಮುನ್ನ ಉಮಾ ಭಾರತಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದರು. ಈ ನಾಯಕರ ವಿರುದ್ದ ಕ್ರಿಮಿನಲ್ ಪಿತೂರಿ ಪ್ರಕರಣದ ವಿಚಾರಣೆಯನ್ನು ಮತ್ತೆ ಆರಂಭಿಸಬೇಕು ಎಂದು ಸಿಬಿಐ ಏಪ್ರಿಲ್ 6ರಂದು ಸುಪ್ರೀಂಕೋರ್ಟ್‍ಗೆ ಮನವಿ ಮಾಡಿತ್ತು. ಸರ್ವೋಚ್ಚ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದ ಸಿಬಿಐ ಈ ಪ್ರಕರಣದಲ್ಲಿ ಬಿಜೆಪಿ ನಾಯಕರೂ ಸೇರಿದಂತೆ 21 ಜನರ ವಿರುದ್ಧದ ಒಳಸಂಚು ಪ್ರಕರಣಗಳನ್ನು ತಾಂತ್ರಿಕ ಕಾರಣಗಳಿಂದಾಗಿ ಅಲಹಾಬಾದ್ ಹೈಕೋರ್ಟ್‍ನಲ್ಲಿ ಕೈಬಿಡಲಾಗಿದೆ. ಈ ಪ್ರಕರಣವನ್ನು ಪುನ:ಶ್ಚೇತನಗೊಳಿಸಿ ಮತ್ತೆ ವಿಚಾರಣೆ ನಡೆಸಬೇಕೆಂದು ಕೇಂದ್ರೀಯ ತನಿಖಾ ದಳ ಕೋರಿತ್ತು.

ಅಡ್ವಾಣಿ, ಜೋಷಿ, ಉಮಾ ಭಾರತಿ ಅವರಲ್ಲದೇ ವಿನಯ್ ಕಟಿಯಾರ್, ಕಲ್ಯಾಣ್ ಸಿಂಗ್ (ಪ್ರಸ್ತುತ ರಾಜಸ್ತಾನ ರಾಜ್ಯಪಾಲ), ಶಿವಸೇನಾ ನಾಯಕ ಬಾಳ್ ಠಾಕ್ರೆ ಮತ್ತು ವಿಎಚ್‍ಪಿ ನಾಯಕ ಆಚಾರ್ಯ ಗಿರಿರಾಜ್ ಕಿಶೋರ್ ಅವರು ಆರೋಪಗಳಿಂದ ಈ ಹಿಂದೆ ಮುಕ್ತರಾಗಿದ್ದರು.   ಈ ಪ್ರಕರಣದಲ್ಲಿ ಬಿಜೆಪಿ ಧುರೀಣರ ವಿರುದ್ಧದ ಕ್ರಿಮಿನಲ್ ಒಳಸಂಚು ಆರೋಪಗಳನ್ನು ಕೈಬಿಟ್ಟಿರುವ ಅಲಹಾಬಾದ್ ಹೈಕೋರ್ಟ್ ನಿರ್ಣಯದ ವಿರುದ್ಧ ಸಿಬಿಐ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಮಾನ್ಯ ಮಾಡಿ ಲಕ್ನೋದ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವಂತೆ ಸೂಚಿಸಿತ್ತು.

ಬಾಬರಿ ಮಸೀದಿ ಧ್ವಂಸಗೊಂಡಾಗ ಆಯೋಧ್ಯೆಯ ರಾಮ್‍ಕಥಾ ಕುಂಜ್‍ನಲ್ಲಿ ಅಡ್ವಾಣಿ ಸೇರಿದಂತೆ ಅನೇಕ ಮುಖಂಡರು ವೇದಿಕೆಯಲ್ಲಿದ್ದದ್ದು ಒಂದು ಪ್ರಕರಣವಾದರೆ, ವಿವಾದಿತ ಕಟ್ಟಡದ ಸುತ್ತಮುತ್ತ ಜಮಾವಣೆಗೊಂಡ ಕರಸೇವಕರ ವಿರುದ್ಧದ ಪ್ರಕರಣವೂ ಮತ್ತೊಂದು ವಿವಾದವಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin