ಬಾಬ್ರಿ ಮಸೀದಿ ಧ್ವಂಸ ಪ್ರಕರಣ : 2 ವಾರಗಳ ಕಾಲ ವಿಚಾರಣೆ ಮುಂದೂಡಿದ ಸುಪ್ರೀಂ

ಈ ಸುದ್ದಿಯನ್ನು ಶೇರ್ ಮಾಡಿ

Babri-Case

ನವದೆಹಲಿ, ಮಾ.23-ದೇಶಾದ್ಯಂತ ಭಾರೀ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ನಾಯಕರಾದ ಎಲ್.ಕೆ. ಅಡ್ವಾಣಿ, ಡಾ.ಮುರಳಿ ಮನೋಹರ ಜೋಷಿ, ಉಮಾ ಭಾರತಿ ಮತ್ತಿತರ ವಿರುದ್ದದ ಒಳಸಂಚು ಆರೋಪಗಳನ್ನು ಮರು ಪರಿಶೀಲಿಸಬೇಕೇ ಎಂಬ ಕುರಿತ ವಿಚಾರಣೆಯನ್ನು ಸುಪ್ರೀಂಕೋರ್ಟ್ ಎರಡು ವಾರ ಕಾಲ ಮುಂದೂಡಿದೆ.   ಈ ಪ್ರಕರಣಕ್ಕೆ ಸಂಬಂಧಪಟ್ಟವರೆಲ್ಲರೂ ತಮ್ಮ ವಾದಗಳನ್ನು ಏ.6ರೊಳಗೆ ಲಿಖಿತವಾಗಿ ಸಲ್ಲಿಸುವಂತೆ ನ್ಯಾಯಮೂರ್ತಿಗಳಾದ ಪಿ.ಸಿ. ಘೋಷ್ ಮತ್ತು ಆರ್. ಎಫ್. ನಾರಿಮನ್ ಅವರನ್ನು ಒಳಗೊಂಡ ಪೀಠ ತಿಳಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಏ.7ಕ್ಕೆ ನಿಗದಿಗೊಳಿಸಿದೆ.

ಅಡ್ವಾಣಿ ಸೇರಿದಂತೆ ಮತ್ತಿತರರು ಆರೋಪಿಗಳಾಗಿರುವ ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ನಿನ್ನೆ ನಡೆಸಬೇಕಿತ್ತು. ಆದರೆ ಪೀಠದ ನ್ಯಾಯಮೂರ್ತಿ ನಾರಿಮನ್ ಅವರ ಗೈರು ಹಾಜರಿಯಿಂದಾಗಿ ವಿಚಾರಣೆಯನ್ನು ಇಂದಿಗೆ ಮುಂದೂಡಲಾಗಿತ್ತು.   ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಅಡ್ವಾಣಿ ಮತ್ತು ಇತರ ನಾಯಕರ ಮೇಲಿರುವ ಒಳಸಂಚು ಮತ್ತು ಪಿತೂರಿ ಆರೋಪಗಳನ್ನು ತಾಂತ್ರಿಕ ಆಧಾರ ಮೇಲೆ ಕೈಬಿಟ್ಟಿರುವುದನ್ನು ತಾನು ಒಪ್ಪುವುದಿಲ್ಲ ಎಂದು ಸುಪ್ರೀಂಕೋರ್ಟ್ ಈ ಹಿಂದಿನ ವಿಚಾರಣೆ ಸಂದರ್ಭದಲ್ಲಿ ಸ್ಪಷ್ಟಪಡಿಸಿತ್ತು. ಅಲ್ಲದೇ ಇವರ ಮೇಲಿರುವ ಒಳಸಂಚು ಆರೋಪಗಳನ್ನು ಪುನರ್ ಪರಿಶೀಲಿಸುವ ಆಯ್ಕೆಯನ್ನು ಮುಕ್ತವಾಗಿ ಇರಿಸಿತ್ತು.

ಈ ಪ್ರಕರಣದಲ್ಲಿ ಬಿಜೆಪಿ ಧುರೀಣರ ವಿರುದ್ಧದ ಕ್ರಿಮಿನಲ್ ಒಳಸಂಚು ಆರೋಪಗಳನ್ನು ಕೈಬಿಟ್ಟಿರುವ ಅಲಹಾಬಾದ್ ಹೈಕೋರ್ಟ್ ನಿರ್ಣಯದ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಮಾನ್ಯ ಮಾಡಿ ವಿಚಾರಣೆ ಕೈಗೆತ್ತಿಕೊಂಡಿದೆ.   ಸುಪ್ರೀಂಕೋರ್ಟ್ ಮುಂದೆ ಎರಡು ಪ್ರಕರಣಗಳು ವಿಚಾರಣೆಗೆ ಬಂದಿವೆ. ಡಿಸೆಂಬರ್ 6, 1992ರಲ್ಲಿ ಬಾ ಮಸೀದಿ ಧ್ವಂಸಗೊಂಡಾಗ ಆಯೋಧ್ಯೆಯ ರಾಮ್ ಕಥಾ ಕುಂಜ್‍ನಲ್ಲಿ ಬಿಜೆಪಿ ಮುಖಂಡರಾದ ಅಡ್ವಾಣಿ ಮತ್ತು ಇತರರು ವೇದಿಕೆಯಲ್ಲಿದ್ದುದು ಒಂದು ಪ್ರಕರಣವಾದರೆ, ವಿವಾದಿತ ಕಟ್ಟಡದ ಸುತ್ತಮುತ್ತ ಜಮಾಯಿಸಿದ್ದ ಕರಸೇವಕರ ವಿರುದ್ಧದ ಪ್ರಕರಣ ಮತ್ತೊಂದು.

ಆಯೋಧ್ಯೆಯ ವಿವಾದಿತ ಬಾಬ್ರಿ ಮಸೀದಿ ಕಟ್ಟಡದ ಧ್ವಂಸ ಹಿನ್ನೆಲೆಯಲ್ಲಿ ಎರಡು ಎಫ್‍ಐಆರ್‍ಗಳು ದಾಖಲಾಗಿರುವುದರಿಂದ ಪ್ರಕರಣಗಳ ಜಂಟಿ ವಿಚಾರಣೆ ನಡೆಸುವ ಬಗ್ಗೆಯೂ ಸುಪ್ರೀಂಕೋರ್ಟ್ ಈ ಹಿಂದೆ ಅಭಿಪ್ರಾಯ ವ್ಯಕ್ತಪಡಿಸಿತ್ತು. ತಾಂತ್ರಿಕ ಆಧಾರದ ಮೇಲೆ ಮಾತ್ರ 13 ಜನರ ವಿರುದ್ಧದ ಆರೋಪಗಳನ್ನು ಕೈಬಿಡಲಾಗಿದೆ. ಇಂದು ನಾನು ಎರಡೂ ಪ್ರಕರಣಗಳನ್ನು ಸೇರಿಸಿ ಜಂಟಿ ವಿಚಾರಣೆಯನ್ನು ಏಕೆ ನಡೆಸಬಾರದು ಎಂದು ನ್ಯಾಯಮೂರ್ತಿಗಳಾದ ಪಿ.ಸಿ. ಘೋಷ್ ಮತ್ತು ಆರ್. ಎಫ್. ನಾರಿಮನ್ ಅವರನ್ನು ಒಳಗೊಂಡ ಪೀಠ ಪ್ರಶ್ನಿಸಿತ್ತು.

ಅಡ್ವಾಣಿ, ಜೋಷಿ ಮತ್ತು ಉಮಾ ಭಾರತಿ ಅವರಲ್ಲದೇ, ವಿನಯ್ ಕಟಿಯಾರ್, ಕಲ್ಯಾಣ್ ಸಿಂಗ್ (ಪ್ರಸ್ತುತ ರಾಜಸ್ತಾನ ಗೌರ್ನರ್), ಶಿವಸೇನಾ ನಾಯಕ ದಿ. ಬಾಳ್ ಠಾಕ್ರೆ ಮತ್ತು ವಿಎಚ್‍ಪಿ ನಾಯಕ ದಿ. ಆಚಾರ್ಯ ಗಿರಿರಾಜ್ ಕಿಶೋರ್ ಅವರ ವಿರುದ್ಧದ ಒಳಸಂಚು ಆರೋಪಗಳನ್ನು ಕೈಬಿಡಲಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin