ಬಾರದ ಮಳೆ-ಜನರಿಗೆ ಸಂಕಷ್ಟ : ಮೋದಿಗೆ ಸಿದ್ದರಾಮಯ್ಯ ಪತ್ರ

ಈ ಸುದ್ದಿಯನ್ನು ಶೇರ್ ಮಾಡಿ

Modi-CM

ಬೆಂಗಳೂರು, ಆ.17-ಕಾವೇರಿ ನದಿ ಜಲಾನಯನ ಭಾಗದಲ್ಲಿ ಮಳೆ ಕೊರತೆಯಿಂದಾಗಿ ಜಲಾಶಯಗಳಲ್ಲಿ ನೀರಿಲ್ಲದೆ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವುದನ್ನು ಮನವರಿಕೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಮೋದಿಯವರಿಗೆ ಪತ್ರ ಬರೆಯಲಿದ್ದಾರೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ನ್ಯಾಯಾಧೀಕರಣ ತೀರ್ಪಿನನ್ವಯ ನಿಗದಿಪಡಿಸಿದ ನೀರು ಬಿಡುತ್ತಿಲ್ಲ ಎಂದು ತಮಿಳುನಾಡು ಸರ್ಕಾರ ತಕರಾರು ತೆಗೆದಿದೆ. ನೀರು ಬಿಡಲು ಜಲಾಶಯಗಳಲ್ಲಿ ನೀರಿಲ್ಲ. ರಾಜ್ಯ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದೆ. ನೀರಿನ ಅಭಾವವಿರುವ ವಾಸ್ತವ ಪರಿಸ್ಥಿತಿಯನ್ನು ಪ್ರಧಾನಿಯವರ ಗಮನಕ್ಕೂ ತರಲಾಗುವುದು ಎಂದರು.

ನಲವತ್ತು ವರ್ಷದಲ್ಲಿ ಅತೀ ಕಡಿಮೆ ನೀರು: ಕಳೆದ ನಲವತ್ತು ವರ್ಷದಲ್ಲೇ ಕಾವೇರಿ ಜಲಾನಯನ ಭಾಗದಲ್ಲಿ ಅತೀ ಕಡಿಮೆ ನೀರು ಸಂಗ್ರಹವಾಗಿದ್ದು, ಕೆಟ್ಟ ಪರಿಸ್ಥಿತಿಯನ್ನು ರಾಜ್ಯ ಎದುರಿಸುವಂತಾಗಿದೆ. ನಿನ್ನೆ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕೃಷ್ಣರಾಜ ಸಾಗರ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕೃಷಿಗೆ ನೀರು ಬಿಡದಿರಲು ತೀರ್ಮಾನಿಸಲಾಗಿದೆ. ಆದರೆ ಆ.30ರವರೆಗೂ ಈಗ ಬಿಡುತ್ತಿರುವ ನೀರನ್ನು ಮುಂದುವರೆಸಲಾಗುವುದು ಎಂದು ಹೇಳಿದರು. ಆ.31 ರಿಂದ ಸೆ.10ರವರೆಗೆ ಜಲಾಶಯದಿಂದ ನಾಲೆಗಳಿಗೆ ನೀರು ಬಿಡುವುದನ್ನು ನಿಲ್ಲಿಸಿ ಮತ್ತೆ ಸೆ.10 ರಂದು ನೀರಾವರಿ ಸಲಹಾ ಸಮಿತಿ ಸಭೆ ಸೇರಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಕೆಆರ್ಎಸ್ನಲ್ಲಿ ಬೆಂಗಳೂರು ಸೇರಿದಂತೆ ವಿವಿಧ ನಗರ ಮತ್ತು ಪಟ್ಟಣಗಳ ಕುಡಿಯುವ ನೀರಿಗೆ 15 ಟಿಎಂಸಿ ಅಡಿ ನೀರು ಬೇಕು. ಕೆಆರ್ಎಸ್ ಅಚ್ಚುಕಟ್ಟು ಪ್ರದೇಶದಲ್ಲಿ ಬೇಸಾಯಕ್ಕೆ ಕನಿಷ್ಠ 80 ದಿನ ನೀರು ಒದಗಿಸಲು 40 ಟಿಎಂಸಿ ನೀರು ಬೇಕು. ಸದ್ಯ ಕೃಷಿ ಬಳಕೆಗೆ 12 ಟಿಎಂಸಿ ನೀರು ಲಭ್ಯವಿದೆ. ಮುಂದಿನ ಡಿಸೆಂಬರ್ವರೆಗೆ 25 ಟಿಎಂಸಿ ನೀರು ಸಂಗ್ರಹವಾಗುವ ಸಂಭವವಿದೆ. ಈ ನಡುವೆ ತಮಿಳುನಾಡಿಗೂ ನೀರು ಬಿಡಬೇಕಾಗಿದೆ ಎಂದರು.

ಪರಿಸ್ಥಿತಿ ಹೀಗಿರುವುದರಿಂದ ರೈತರು ಬೆಳೆ ಬೆಳೆಯಲು ಹೋಗಿ ಹಾನಿ ಮಾಡಿಕೊಳ್ಳಬಾರದು. ಈಗಾಗಲೇ ಬೆಳೆದು ನಿಂತಿರುವ ಬೆಳೆಯೇ ಶೇ.40ರಷ್ಟಿದೆ ಎಂದ ಅವರು, ಗ್ರಾ.ಪಂ., ನೀರಾವರಿ, ವಿದ್ಯುತ್, ಕಂದಾಯ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಕಾರ್ಯಪಡೆಯನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರಚಿಸಿ ಕಟ್ಟುನಿಟ್ಟಿನ ನೀರಿನ ನಿರ್ವಹಣೆ ಮಾಡಲು ಸೂಚಿಸಲಾಗಿದೆ.
ರೈತರಿಗೆ ಸಂಕಷ್ಟ ಪರಿಸ್ಥಿತಿ ಮನವರಿಕೆ ಮಾಡಿಕೊಡಲು ನೀರಾವರಿ, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಗ್ರಾ.ಪಂ. ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮದ್ದೂರು, ಮಳವಳ್ಳಿ ತಾಲೂಕುಗಳ ಕುಡಿಯುವ ನೀರಿಗಾಗಿ ಕರೆ ತುಂಬಿಸಲು ಸಲಹಾ ಸಮಿತಿಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಶೋಕಾಸ್ ನೋಟೀಸ್: ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಬದಲಾಗಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡವರ ಭಾವಚಿತ್ರ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಡಿಡಿಪಿಐಗೆ ಶೋಕಾಸ್ ನೋಟೀಸ್ ಜಾರಿ ಮಾಡಲಾಗಿದೆ. ಇನ್ನು ಮುಂದೆ ರಾಷ್ಟ್ರೀಯ ಹಬ್ಬಗಳಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಭಾವಚಿತ್ರಗಳನ್ನು ಮಾತ್ರ ಬಳಸುವಂತೆ ಸೂಚಿಸಲಾಗಿದೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಎಷ್ಟು ಗೌರವ ಕೊಡಬೇಕು ಎಂಬ ಅರಿವು ಕೂಡ ತಮಗೆ ಇದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.  ಬಿಬಿಎಂಪಿಯಲ್ಲಿ ಜೆಡಿಎಸ್ನೊಂದಿಗೆ ಐದು ವರ್ಷಗಳ ಕಾಲ ಮೈತ್ರಿ ಮಾಡಿಕೊಳ್ಳಲಾಗಿದ್ದು, ಈಗಲೂ ಮುಂದುವರೆಯುತ್ತ್ತದೆ ಎಂದು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin