ಬಾರದ ಮಳೆ, ಭಾನುವಾರದಿಂದ ಮೋಡ ಬಿತ್ತನೆ ಆರಂಭ
ಬೆಂಗಳೂರು, ಆ.8- ಮಳೆ ಕೊರತೆಯಿಂದ ಬರದ ಛಾಯೆ ಆವರಿಸಿರುವ ರಾಜ್ಯದಲ್ಲಿ ಭಾನುವಾರದಿಂದ ಮೋಡ ಬಿತ್ತನೆ ಕಾರ್ಯ ಆರಂಭವಾಗಲಿದೆ. ಮೋಡ ಬಿತ್ತನೆ ಕಾರ್ಯಕ್ಕೆ ಸಂಬಂಧಿಸಿದ ಪೂರ್ವಸಿದ್ಧತೆ ಭರದಿಂದ ಸಾಗಿದೆ. ದಕ್ಷಿಣ ಕರ್ನಾಟಕದಲ್ಲಿ ಭಾನುವಾರ ಮೋಡ ಬಿತ್ತನೆ ಕಾರ್ಯ ಆರಂಭವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಇನ್ನೊಂದು ವಾರ ತಡವಾಗಿ ಮೋಡ ಬಿತ್ತನೆ ಆರಂಭವಾಗಲಿದೆ. ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ಮೋಡಬಿತ್ತನೆ ಸಿದ್ಧತೆ ನಡೆಸಲಾಗುತ್ತಿದೆ. ಮೋಡ ಬಿತ್ತನೆಗೆ ಬಳಸುವ ಏರ್ ಕ್ರಾಫ್ಟ್ಗೆ ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ. ಡಪ್ಲರ್ ರಾಡಾರ್ ಅಳವಡಿಕೆ ಪ್ರಕ್ರಿಯೆ ನಡೆಯುತ್ತಿದೆ. ಗದಗ, ಯಾದಗಿರಿ ಜಿಲ್ಲೆಯ ಶೋರಾಪುರದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ಸ್ಗೆ ಸೇರಿದ ಏರ್ಕ್ರಾಫ್ಟ್ ಬಳಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನಲ್ಲಿ ಭಾನುವಾರ ಮೋಡ ಬಿತ್ತನೆ ಪ್ರಕ್ರಿಯೆಯನ್ನು ಪ್ರಾರಂಭಿಸಲಿದ್ದು, ಸೋಮವಾರದಿಂದ ವಿಧ್ಯುಕ್ತವಾಗಿ ಆರಂಭವಾಗಲಿದೆ. ಮಳೆ ಬರುವ ಮೋಡಗಳಿಗೆ ಮೋಡ ಬಿತ್ತನೆ ಮಾಡುವುದರಿಂದ ಶೇ.10ರಷ್ಟು ಮಳೆ ಪ್ರಮಾಣ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ. 60 ದಿನಗಳ ಕಾಲ ರಾಜ್ಯದಲ್ಲಿ ಮೋಡ ಬಿತ್ತನೆ ಮಾಡಲು ತೀರ್ಮಾನಿಸಿದ್ದು, ಹೊಯ್ಸಳ ಪ್ರಾಜೆಕ್ಸ್ ಸಂಸ್ಥೆಗೆ ಮೋಡ ಬಿತ್ತನೆ ಟೆಂಡರ್ ನೀಡಲಾಗಿದೆ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಸೇರಿದಂತೆ ಒಟ್ಟು 300 ಗಂಟೆಗಳ ಮೋಡ ಬಿತ್ತನೆ ಕಾರ್ಯ ನಡೆಯಲಿದೆ.
35.77 ಕೋಟಿ ರೂ.ವೆಚ್ಚದಲ್ಲಿ ಮೋಡ ಬಿತ್ತನೆ ಕಾರ್ಯವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಮೂಲಕ ಕೈಗೊಳ್ಳಲಾಗುತ್ತಿದೆ. ಆಗಸ್ಟ್ ಮೊದಲ ವಾರದಲ್ಲೇ ಮೋಡ ಬಿತ್ತನೆ ಮಾಡಲು ಸರ್ಕಾರ ಉದ್ದೇಶಿಸಿತ್ತು. ಆದರೆ ಕೇಂದ್ರ ಸರ್ಕಾರದಿಂದ ವಿವಿಧ ಪರವಾನಗಿಗಳನ್ನು ಪಡೆಯಬೇಕಾಗಿದ್ದರಿಂದ ವಿಳಂಬವಾಗಿತ್ತು ಎಂದು ಮೂಲಗಳು ಸ್ಪಷ್ಟಪಡಿಸಿವೆ. ವಿವಿಧ ಸಮಿತಿಗಳು ಹಾಗೂ ಪರಿಣಿತರ ಮಾರ್ಗದರ್ಶನದಲ್ಲಿ ಮೋಡ ಬಿತ್ತನೆಗೆ ಸಂಬಂಧಿಸಿದ ಸಿದ್ಧತೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.