ಬಿಎಂಟಿಸಿ ಬಸ್‍ಗಳ ಸಂಖ್ಯೆ ಹೆಚ್ಚಳ, ದೈನಂದಿನ ಪಾಸ್‍ಗಳ ದರ ಇಳಿಕೆ

ಈ ಸುದ್ದಿಯನ್ನು ಶೇರ್ ಮಾಡಿ

BMTC01

ಬೆಂಗಳೂರು, ಫೆ.11-ನಗರದಾದ್ಯಂತ ಸಂಚರಿಸುವ ಬಿಎಂಟಿಸಿ ಬಸ್‍ಗಳ ಸಂಖ್ಯೆ ಹೆಚ್ಚಳಗೊಳಿಸಲು ಹಾಗೂ ದೈನಂದಿನ ಪಾಸ್‍ಗಳ ದರವನ್ನು ಇಳಿಕೆ ಮಾಡಲಾಗುವುದು ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಇಂದಿಲ್ಲಿ ತಿಳಿಸಿದರು. ವಿಧಾನಸೌಧ ಮುಂಭಾಗ ದೇಶದಲ್ಲೇ ಮೊದಲ ಬಾರಿಗೆ ಆಚರಿಸಲಾದ ವಿರಳ ಸಂಚಾರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ವಾಹನ ದಟ್ಟಣೆ ಮತ್ತು ಮಾಲಿನ್ಯ ನಿಯಂತ್ರಣ ಹಿನ್ನೆಲೆಯಲ್ಲಿ ಸಾರ್ವಜನಿಕ ವಾಹನಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಈ ದಿಸೆಯಲ್ಲಿ ಬಿಎಂಟಿಸಿ ಬಸ್‍ಗಳ ಸಂಖ್ಯೆಯನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ. 150 ಎಲೆಕ್ಟ್ರಿಕ್ ಬಸ್‍ಗಳನ್ನು ಪರಿಚಯಿಸಲಾಗುತ್ತಿದ್ದು, ಸದ್ಯದಲ್ಲೇ 40 ಬಸ್‍ಗಳು ಕಾರ್ಯಾರಂಭ ಮಾಡಲಿವೆ ಎಂದು ಮಾಹಿತಿ ನೀಡಿದರು.

ರಾಷ್ಟ್ರ ಮಟ್ಟದಲ್ಲಿ ಶಬ್ಧ ಮತ್ತು ವಾಯು ಮಾಲಿನ್ಯ ಅಧಿಕಗೊಂಡಿರುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಮಾಲಿನ್ಯ ನಿಯಂತ್ರಿಸುವ ಬಗ್ಗೆ ಗಮನಹರಿಸಬೇಕಿದೆ. ಮಾಲಿನ್ಯ ಹೆಚ್ಚಳದಿಂದಾಗಿ ಋತುಮಾನಗಳು ಬದಲಾಗಿವೆ. ಮಳೆ ಪ್ರಮಾಣ ಕಡಿಮೆಯಾಗಿದೆ. ದೇಶ ಸಂಕಷ್ಟ ಪರಿಸ್ಥಿತಿ ಎದುರಿಸುವಂತಾಗಬಾರದು ಎಂದರು.
ದೆಹಲಿಯಲ್ಲಿ ಉಂಟಾದ ಅತಿಯಾದ ಮಾಲಿನ್ಯದಿಂದಾಗಿ ಏನೆಲ್ಲ ತೊಂದರೆ ಎದುರಾಯಿತು ಎಂದು ಸ್ಮರಿಸಿದ ಅವರು, ಈ ನಿಟ್ಟಿನಲ್ಲಿ ನಗರದಲ್ಲೂ ಮಾಲಿನ್ಯ ನಿಯಂತ್ರಣಕ್ಕೆ ಸಾರ್ವಜನಿಕರು ಕೈಜೋಡಿಸಬೇಕಿದೆ. ನಾವು ಇದಕ್ಕಾಗಿ ಶಾಸನ ತಂದಿಲ್ಲ. ಆದರೆ ಜನಜಾಗೃತಿಗಾಗಿ ಜನಾಂದೋಲನವನ್ನು ಆರಂಭಿಸಿದ್ದೇವೆ. ವೈಯಕ್ತಿಕ ವಾಹನಗಳ ಬಳಕೆ ನಿಯಂತ್ರಿಸಿ, ಸಾರ್ವಜನಿಕ ವಾಹನಗಳನ್ನು ಬಳಸಿ ಎಂದು ಕರೆ ನೀಡಿದರು.

ಇದೇ ಮೊದಲ ಬಾರಿಗೆ ಈ ರೀತಿಯ ಆಂದೋಲನ ಆರಂಭವಾಗಿದ್ದು, ನಗರದಲ್ಲಿ ಪ್ರತಿ ಎರಡನೇ ಭಾನುವಾರ ವಿರಳ ಸಂಚಾರ ದಿನವನ್ನಾಗಿ ಆಚರಿಸಲಾಗುವುದು. ಮನುಕುಲದ ಒಳಿತಿಗಾಗಿ ಕೈಗೊಂಡಿರುವ ಈ ಕಾರ್ಯಕ್ರಮ ಇದಕ್ಕೆ ಕೈ ಜೋಡಿಸಿ ಎಂದರು.  ಬೆಂಗಳೂರಿನ ಜನತೆ ವಿರಳ ಟ್ರ್ಯಾಫಿಕ್ ದಿನಾಚರಣೆ ಅಭಿಯಾನಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅವರಿಗೆ ಧನ್ಯವಾದಗಳು. ಬೆಂಗಳೂರಿನ ಮಾಲಿನ್ಯ ತಡೆ ಹಾಗೂ ಇಂಧನ ಉಳಿತಾಯಕ್ಕೆ ಪ್ರತಿ ತಿಂಗಳ ಎರಡನೇ ಭಾನುವಾರದಂದು ತಮ್ಮ ಸ್ವಯಂ ವಾಹನ ಬಳಕೆ ಸ್ಥಗಿತಗೊಳಿಸಿ ದೇಶಪ್ರೇಮ ಮೆರೆಯಬೇಕು. ಕೇಂದ್ರ ಸರ್ಕಾರ ಎಲ್ಲಾ ರಾಜ್ಯದ ರಾಜಧಾನಿಗಳಲ್ಲೂ ವಿರಳ ಸಂಚಾರ ದಿನ ಅಭಿಯಾನ ಆರಂಭಿಸುವಂತೆ ಕೇಂದ್ರ ಪರಿಸರ ಮತ್ತು ಸಾರಿಗೆ ಸಚಿವಾಲಯಕ್ಕೆ ಕೋರಲು ನಿರ್ಧರಿಸಲಾಗಿದೆ ಎಂದರು.

ಮಾಲಿನ್ಯ ನಿಯಂತ್ರಣ ಮಂಡಳಿ, ಪೊಲೀಸ್ ಇಲಾಖೆ, ಮೆಟ್ರೋ, ಬಿಎಂಟಿಸಿ, ಬಿಬಿಎಂಪಿ, ವಾರ್ತಾ ಇಲಾಖೆ ಹಾಗೂ ಸಾರಿಗೆ ಇಲಾಖೆಗಳು ಅಭಿಯಾನದಲ್ಲಿ ಪಾಲ್ಗೊಂಡು ಉತ್ತಮ ಕಾರ್ಯನಿರ್ವಹಿಸಿವೆ ಎಂದ ಅವರು, ಜಾಥಾದಲ್ಲಿ ಪಾಲ್ಗೊಂಡ ಸೈಕಲ್ ಮತ್ತು ಎಲೆಕ್ಟ್ರಿಕ್ ವಾಹನಗಳ ಮಾಲೀಕರಿಗೆ ಅಭಿನಂದನೆ ಸಲ್ಲಿಸಿದರು.

Facebook Comments

Sri Raghav

Admin