ಬಿಎಸ್ವೈಗೆ ರಾಜಕೀಯದಲ್ಲಿ ಟರ್ನಿಂಗ್ ಪಾಯಿಂಟ್ ಆಗಲಿದೆಯೇ ಕಾನೂನು ಸಮರದಲ್ಲಿನ ಗೆಲುವು..?

ಈ ಸುದ್ದಿಯನ್ನು ಶೇರ್ ಮಾಡಿ

SSY

ಬೆಂಗಳೂರು, ಅ.26-ತಮ್ಮ ಒಡೆತನದ ಪ್ರೇರಣಾ ಟ್ರಸ್ಟ್ ಕಿಕ್ ಬ್ಯಾಕ್ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯದಿಂದ ಆರೋಪಮುಕ್ತವಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಸ್.ಯಡಿಯೂರಪ್ಪ ಅವರಿಗೆ ಇದರಿಂದ ರಾಜಕೀಯ ಮರುಜನ್ಮ ಸಿಗಲಿದೆಯೇ…? ಬಿಜೆಪಿ ಸೇರಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್‍ನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಈ ಪ್ರಕರಣದಲ್ಲಿ ಬಿಎಸ್‍ವೈ ಕಳಂಕ ರಹಿತರಾಗಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿರುವ ಯಡಿಯೂರಪ್ಪನವರಿಗೆ ಕಾನೂನು ಸಮರದಲ್ಲಿ ಜಯ ಸಿಕ್ಕಿರುವುದು ಅವರ ವರ್ಚಸ್ಸಿಗೆ ಇನ್ನಷ್ಟು ಬಲ ತುಂಬಿಕೊಟ್ಟಿರುವುದರಲ್ಲಿ ಸಂದೇಹವಿಲ್ಲ.

150 ಸ್ಥಾನಗಳನ್ನು ಗೆದ್ದು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬೇಕೆಂಬ ಛಲ ಹೊಂದಿರುವ ಅವರಿಗೆ ಈ ತೀರ್ಪು ನೈತಿಕವಾಗಿ ಇನ್ನಷ್ಟು ಬಲ ತುಂಬಿದೆ.
ಇನ್ನು ಅವರ ಮೇಲೆ ಕಾನೂನುಬಾಹಿರ ಡಿನೋಟೀಫಿಕೇಷನ್ ಪ್ರಕರಣಗಳು ಸುಪ್ರೀಂಕೋರ್ಟ್‍ನಲ್ಲಿ ವಿಚಾರಣಾ ಹಂತದಲ್ಲಿದೆ. ಲೋಕಾಯುಕ್ತ ನ್ಯಾಯಾಲಯ ದಾಖಲಿಸಿದ್ದ ಅಷ್ಟೂ ಮೊಕದ್ದಮೆಗಳನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ ವಜಾಗೊಳಿಸಿತ್ತು.ಸದ್ಯಕ್ಕೆ ಈ ಪ್ರಕರಣಗಳು ಸುಪ್ರೀಂಕೋರ್ಟ್‍ನಲ್ಲಿ ವಿಚಾರಣಾ ಹಂತದಲ್ಲಿರುವುದರಿಂದ ಬಿಎಸ್‍ವೈ ಕಾನೂನಿನ ಕುಣಿಕೆಯಿಂದ ಪಾರಾಗಿದ್ದಾರೆ. ಕಿಕ್ ಬ್ಯಾಕ್ ಪ್ರಕರಣದಲ್ಲಿ ಯಡಿಯೂರಪ್ಪನವರ ರಾಜಕೀಯ ವಿರೋಧಿಗಳಿಗಿಂತ ಸ್ವಪಕ್ಷೀಯದವರೇ ಅವರು ಕಾನೂನು ಕುಣಿಕೆಗೆ ಸಿಕ್ಕಿ ಹಾಕಿಕೊಳ್ಳಲಿ ಎಂದು ಜಪ ಮಾಡುತ್ತಿರುವುದು ಸುಳ್ಳಲ್ಲ. ಪಕ್ಷದಲ್ಲಿ ಅವರ ಕೆಲ ವರ್ತನೆಗಳಿಂದ ಬೇಸತ್ತಿದ್ದ ಎರಡು ಮತ್ತು ಮೂರನೆ ಹಂತದ ನಾಯಕರು ಬಿಎಸ್‍ವೈ ಕಾನೂನಿನ ಸಂಕಷ್ಟಕ್ಕೆ ಸಿಲುಕಲಿ ಎಂದು ಮನದಲ್ಲೇ ಬಯಸಿ ಜಪ ಮಾಡುತ್ತಿದ್ದರು. ಆದರೆ ನ್ಯಾಯಾಲಯ ಅವರನ್ನು ದೋಷಮುಕ್ತಗೊಳಿಸಿರುವುದು ಕೇವಲ ವಿರೋಧಿಗಳಿಗೆ ಮಾತ್ರವಲ್ಲದೆ, ಸ್ವಪಕ್ಷೀಯದವರಿಗೂ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಸಂಘಟನೆಯತ್ತ ಒಲವು:

ಸದ್ಯಕ್ಕೆ ನ್ಯಾಯಾಲಯದಿಂದ ಆರೋಪಮುಕ್ತವಾಗಿರುವ ಯಡಿಯೂರಪ್ಪ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆಯತ್ತ ಗಮನ ಹರಿಸಲಿದ್ದಾರೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಸರ್ಕಾರದ ವೈಫಲ್ಯಗಳು ಹಾಗೂ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರ ಬಳಿಗೆ ಕೊಂಡೊಯ್ದು ಪಕ್ಷವನ್ನು ಬೇರು ಮಟ್ಟದಿಂದ ಭದ್ರಪಡಿಸಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವತ್ತ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದಾರೆ. ಇನ್ನು ಯಡಿಯೂರಪ್ಪ ಲಂಚ ಪ್ರಕರಣದಲ್ಲಿ ದೋಷ ಮುಕ್ತರಾಗಿರುವುದರಿಂದ ಪಕ್ಷದಲ್ಲಿ ಅವರ ಹಿಡಿತ ಮತ್ತಷ್ಟು ಹೆಚ್ಚಲಿದೆ. ಸದ್ಯಕ್ಕೆ ರಾಷ್ಟ್ರೀಯ ನಾಯಕರು ಬಿಎಸ್‍ವೈ ಓಡುವ ಕುದುರೆ ಎಂದು ಅರಿತಿರುವುದರಿಂದ ಅವರ ನಿರ್ಧಾರಗಳಿಗೆ ಮಧ್ಯ ಪ್ರವೇಶ ಮಾಡುವುದು ತೀರ ಕಡಿಮೆ.

► Follow us on –  Facebook / Twitter  / Google+

Facebook Comments

Sri Raghav

Admin