ಬಿಎಸ್ವೈ ಬದಲಾಗದಿದ್ದರೆ ಬಿಜೆಪಿಗಿಲ್ಲ ಉಳಿಗಾಲ..!

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa-002

– ರವೀಂದ್ರ. ವೈ.ಎಸ್

ಬೆಂಗಳೂರು, ಜ.24– ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇನ್ನು ಮುಂದಾದರೂ ಬದಲಾಗಲಿದ್ದಾರೆಯೇ? ಏಕೆಂದರೆ ಪಕ್ಷದ ಪ್ರಮುಖರೇ ಹೇಳುವಂತೆ ಯಡಿಯೂರಪ್ಪ ವರ್ತನೆ ಇದೇ ರೀತಿ ಮುಂದಿನ ದಿನಗಳಲ್ಲೂ ಮುಂದುವರೆದರೆ ಪಕ್ಷಕ್ಕೆ ಉಳಿಗಾಲವಿಲ್ಲ. ಕಾರ್ಯಕರ್ತರು ಅನ್ಯ ಪಕ್ಷಗಳತ್ತ ಮುಖ ಮಾಡುವ ದಿನಗಳು ದೂರವಿಲ್ಲ ಎನ್ನುವ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಬಿಎಸ್‍ವೈ ವಿರುದ್ಧ ಈಶ್ವರಪ್ಪ ತಿರುಗಿ ಬಿದ್ದಿರುವುದು ಕೇವಲ ಸಾಂಕೇತಿಕ. ಅವರ ಸರ್ವಾಧಿಕಾರಿ ಧೋರಣೆಯ ವಿರುದ್ಧ ಅನೇಕ ಮುಖಂಡರು ಅಸಮಾಧಾನಗೊಂಡಿದ್ದಾರೆ. ಕೆಲವರು ಬಾಯಿ ಬಿಟ್ಟು ಮಾತನಾಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಈಗಲಾದರೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಮುನ್ನಡೆಸದಿದ್ದರೆ ಬಿಜೆಪಿ ಅಧಿಕಾರಕ್ಕೆ ಬರುವುದಿರಲಿ. ಅಧಿಕೃತ ಪ್ರತಿಪಕ್ಷ ಸ್ಥಾನ ಸಿಗುವುದೇ ಖಾತರಿ ಇಲ್ಲ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಪ್ರಮುಖರೊಬ್ಬರು.

ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಮುನ್ನಡೆಸುವ ಭರವಸೆಯನ್ನು ವರಿಷ್ಠರ ಬಳಿ ಯಡಿಯೂರಪ್ಪ ಕೊಟ್ಟಿದ್ದರು. ಇದನ್ನು ನಂಬಿ ಅವರ ಮೇಲೆ ಅಷ್ಟೆಲ್ಲಾ ಆರೋಪಗಳಿದ್ದರೂ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಯಿತು. ಆದರೆ ಎಳ್ಳಷ್ಟು ಕಾರ್ಯ ಶೈಲಿಯಲ್ಲಿ ಬದಲಾಗಿಲ್ಲ ಎಂಬ ನೋವು ಎಲ್ಲರಲ್ಲಿದೆ.  ಸಾಮಾನ್ಯವಾಗಿ ಬಿಜೆಪಿಯಲ್ಲಿ ಪಕ್ಷ ಬಿಟ್ಟು ಒಂದು ಬಾರಿ ಹೊರ ಹೋದರೆ ಅವರು ಎಷ್ಟೇ ಪ್ರಭಾವಿಗಳಾಗಿರಲಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದೇ ಅನುಮಾನ. ಗುಜರಾತ್‍ನಲ್ಲಿ ಕೇಶುಬಾಯ್ ಪಟೇಲ್, ಉತ್ತರ ಪ್ರದೇಶದಲ್ಲಿ ಕಲ್ಯಾಣ್‍ಸಿಂಗ್ ಅಷ್ಟೇಕೆ ಜಸ್ವಂತ್ ಸಿಂಗ್‍ರಂತರ ಘಟಾನುಘಟಿ ನಾಯಕರನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ.

ಮೇಲ್ನೋಟಕ್ಕೆ ಇವರ್ಯಾರ ಮೇಲೂ ಭ್ರಷ್ಟಾಚಾರದ ಆರೋಪವಾಗಲಿ ಇಲ್ಲವೆ ಜೈಲಿಗೆ ಹೋದ ಗುರುತರ ಆರೋಪಗಳಿರಲಿಲ್ಲ. ಇಷ್ಟಾದರೂ ಯಡಿಯೂರಪ್ಪ ತನ್ನ ಸ್ವಯಂಕೃತ ಅಪರಾಧದಿಂದಲೇ ಜೈಲಿಗೆ ಹೋಗಿ ಬಂದು ಪಕ್ಷ ಬಿಟ್ಟು ಹೊಸ ಪಕ್ಷ ಕಟ್ಟಿ ಪುನಃ ವಿಧಿಯಿಲ್ಲದೆ ಮಾತೃ ಪಕ್ಷಕ್ಕೆ ಬಂದರು. ಆದರೂ ತಮ್ಮ ವರ್ತನೆಯನ್ನು ಸರಿಪಡಿಸಿಕೊಳ್ಳದೆ ಹಳೆ ಗುಂಗಿನಲ್ಲೇ ಈಗಲೂ ಇದ್ದಾರೆ ಎಂಬುದು ಹಲವು ನಾಯಕರ ನೋವು.

ವರಿಷ್ಠರಿಗೆ ಹೇಳಿದ್ದು ಏನು?:

ತನ್ನನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ರಾಜ್ಯದಲ್ಲಿ ಪಕ್ಷವನ್ನು ಸ್ವಯಂ ಬಲದ ಮೇಲೆ ಅಧಿಕಾರಕ್ಕೆ ತರುವುದಾಗಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಭರವಸೆ ಕೊಟ್ಟಿದ್ದರು. ಸಾಮಾನ್ಯವಾಗಿ ಎಲ್ಲವನ್ನು ಅಳೆದು ತೂಗಿ ನೋಡುವ ಈ ಇಬ್ಬರು ಉಭಯ ನಾಯಕರು ಕರ್ನಾಟಕದಲ್ಲಿ ಬಿಎಸ್‍ವೈಗಿರುವ ಸಾಮಥ್ರ್ಯ, ಜಾತಿ ಬೆಂಬಲ ನಂಬಿಕೊಂಡೇ ಕಣ್ಣು ಮುಚ್ಚಿಕೊಂಡು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದರು. ಆದರೆ ಯಡಿಯೂರಪ್ಪ ಆನೆ ನಡೆದದ್ದೇ ದಾರಿ ಎಂಬಂತೆ ಈಗಲೂ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಎಲ್ಲರನ್ನು ಅನುಮಾನದ ದೃಷ್ಟಿಯಿಂದಲೇ ನೋಡುವುದು, ನನ್ನಿಂದಲೇ ಬಿಜೆಪಿ, ನಾನಿಲ್ಲದಿದ್ದರೆ ಪಕ್ಷ ಇಲ್ಲ ಎಂಬ ಅಹಂ ಅವರಲ್ಲಿ ಮನೆ ಮಾಡಿದೆ.

ತನ್ನ ಸುತ್ತಮುತ್ತ ಗಿರಕಿ ಹೊಡೆಯುವ ತನಗೆ ಜೈಕಾರ ಹಾಕುವವರನ್ನೇ ಯಡಿಯೂರಪ್ಪ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ. ಉಳಿದಂತೆ ಯಾರೊಬ್ಬರನ್ನೂ ನಂಬುವುದಿಲ್ಲ. ಇದುವೇ ಈಶ್ವರಪ್ಪನವರ  ಆಕ್ರೋಶಕ್ಕೆ ಮೂಲ ಕಾರಣ.

ಬಿಎಸ್‍ವೈ ಶಕ್ತಿ ಕುಂದುತ್ತಿದೆಯೇ:

ಇನ್ನು ಯಡಿಯೂರಪ್ಪ ಅದೇ ಜಾತಿಯನ್ನೇ ನಂಬಿಕೊಂಡು ರಾಜಕಾರಣ ನಡೆಸುತ್ತಿದ್ದಾರೆ. ಈಗಿನ ಚುನಾವಣೆಗಳು ಅಭಿವೃದ್ಧಿ ಮಾನದಂಡಗಳ ಮೇಲೆ ನಡೆಯುತ್ತದೆ ಎಂಬುದು ಅವರ ತಲೆಗೆ ಅದೇಕೋ ತಟ್ಟಿಲ್ಲ. ಹಣ, ಹೆಂಡ, ಜಾತಿ, ಚುನಾವಣಾ ಸಂದರ್ಭದಲ್ಲಿ ಒಂದಿಷ್ಟು ಕೆಲಸ ಮಾಡಬಹುದೇ ಹೊರತು ಉಳಿದಂತೆ ಇದರ ಮೇಲೆಯೇ ಚುನಾವಣೆ ನಡೆಯುವುದಿಲ್ಲ. ಮತದಾರರು ಜಾಗೃತರಾಗಿರುವುದರಿಂದ ತನಗೆ ಯಾರು ಬೇಕು , ಯಾವುದೇ ಬೇಡ ಎಂಬುದನ್ನು ಆಯ್ಕೆ ಮಾಡಿಕೊಳ್ಳುವಷ್ಟು ಸರ್ವ ಸ್ವತಂತ್ರನಾಗಿದ್ದಾನೆ.

ಇನ್ನು ಒಂದು ಕಾಲದಲ್ಲಿ ಯಡಿಯೂರಪ್ಪ ವಿರುದ್ಧ ಪಕ್ಷದಲ್ಲಿ ಮಾತನಾಡುವುದಿರಲಿ , ಅವರ ಮುಂದೆ ನಿಲ್ಲುವುದಕ್ಕೂ ಕೆಲವರು ಹೆದರುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವರ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿರುವುದು ನೋಡಿದರೆ ಪಕ್ಷದಲ್ಲಿ ಅವರ ಶಕ್ತಿ ಕಳೆಗುಂದುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತದೆ. ಏಕೆಂದರೆ ಕೆಲ ದಿನಗಳ ಹಿಂದೆ ತುಮಕೂರಿನಲ್ಲಿ ಈಶ್ವರಪ್ಪ ತದನಂತರ ವಿಧಾನ ಪರಿಷತ್ ಸದಸ್ಯರಾದ ಸೋಮಣ್ಣ ಬೇವಿನಮರದ್, ಮಾಜಿ ಶಾಸಕ ಸೊಗಡು ಶಿವಣ್ಣ, ಮಾಜಿ ಸಚಿವ ವಿ.ಸೋಮಣ್ಣ ಸೇರಿದಂತೆ ಕೆಳ ಹಂತದ ನಾಯಕರು ಬಿಎಸ್‍ವೈ ವಿರುದ್ಧ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದಾರೆ.

ಅಂದರೆ ಯಡಿಯೂರಪ್ಪ ಇಲ್ಲದಿದ್ದರೂ ಬಿಜೆಪಿಯನ್ನು ಮುನ್ನಡೆಸುವ ಶಕ್ತಿ ಮುಖಂಡರಿಗಿದೆ. ಸದ್ಯಕ್ಕೆ ಯಡಿಯೂರಪ್ಪ ಮುಖಕ್ಕಿಂತ ನರೇಂದ್ರ ಮೋದಿ ಮುಖ ನೋಡಿದರೆ ಬಿಜೆಪಿಗೆ ಮತ ಬರುತ್ತದೆ ಎಂಬ ಮನೋಭಾವನೆ ಬಹುತೇಕರಲ್ಲಿ ಮನೆ ಮಾಡಿದೆ. ಸೊಕ್ಕು, ಅಹಂ, ಧಿಮಾಕು, ಅಪನಂಬಿಕೆ, ಅನುಮಾನ, ಹಿತ್ತಾಳೆ ಕಿವಿ ಈ ದೌರ್ಬಲ್ಯಗಳು ರಾಜಕಾರಣದಲ್ಲಿ ಬಹಳಷ್ಟು ದಿನ ಉಳಿಯಲು ಸಾಧ್ಯವಾಗುವುದಿಲ್ಲ ಎಂಬುದನ್ನು ಯಡಿಯೂರಪ್ಪ ಮನಗಾಣಬೇಕು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin