ಬಿಎಸ್‍ಎಫ್ ಕ್ಯಾಂಪ್ ಮೇಲೆ ಉಗ್ರರ ದಾಳಿ : ಎಎಸ್‍ಐ ಸಾವು, ಇಬ್ಬರು ಉಗ್ರರ ಎನ್‍ಕೌಂಟರ್‍

ಈ ಸುದ್ದಿಯನ್ನು ಶೇರ್ ಮಾಡಿ

BSF-Camp--02

ಶ್ರೀನಗರ, ಆ.3-ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನಿ ಬೆಂಬಲಿತ ಉಗ್ರಗಾಮಿಗಳ ಅಟ್ಟಹಾಸ ಮತ್ತಷ್ಟು ತೀವ್ರಗೊಂಡಿದೆ. ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರ ವಿಮಾನ ನಿಲ್ದಾಣದ ಬಳಿ ಇಂದು ಮುಂಜಾನೆ ಗಡಿ ಭದ್ರತಾ ಪಡೆ (ಬಿಎಸ್ ಎಫ್) ಶಿಬಿರದ ಮೇಲೆ ಭಯೋತ್ಪಾದಕರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಸಹಾಯಕ ಸಬ್‍ಇನ್ಸ್‍ಪೆಕ್ಟರ್ (ಎಎಸ್‍ಐ) ಮೃತಪಟ್ಟು ಹಲವು ಯೋಧರು ತೀವ್ರ ಗಾಯಗೊಂಡಿದ್ದಾರೆ. ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದು, ಭಾರೀ ವಿಧ್ವಂಸಕ ಕೃತ್ಯವನ್ನು ತಪ್ಪಿಸಿದ್ದಾರೆ.  ಇನ್ನೊಂದೆಡೆ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರಗಾಮಿಗಳು ಪೊಲೀಸ್ ಪೇದೆಯೊಬ್ಬರನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆಯೂ ನಡೆಸಿದೆ.

ಶ್ರೀನಗರದ 182ನೇ ಬೆಟಾಲಿಯನ್ ಕ್ಯಾಂಪನ್ನು ಗುರಿಯಾಗಿಟ್ಟುಕೊಂಡು ಉಗ್ರರು ಇಂದು ಮುಂಜಾನೆ 4 ಗಂಟೆ ಸಮಯದಲ್ಲಿ ದಾಳಿ ನಡೆಸಿದರು. ಈ ಆತ್ಮಾಹುತಿ ದಾಳಿಯಲ್ಲಿ ಬಿಎಸ್‍ಎಫ್‍ನ ಎಎಸ್‍ಐ ಮೃತಪಟ್ಟು ಕೆಲವು ಯೋಧರು ಗಾಯಗೊಂಡಿದ್ದಾರೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಮಹಾ ನಿರ್ದೇಶಕ ಎಸ್.ಪಿ.ವೇದ್ ತಿಳಿಸಿದ್ದಾರೆ.

ಶ್ರೀನಗರ ಏರ್‍ಪೊೀರ್ಟ್ ಭದ್ರತೆಗಾಗಿ ಇರುವ ಯೋಧರ ಈ ಶಿಬಿರದ ಮೇಲೆ ದಾಳಿ ನಡೆಸಿ ನಂತರ ವಿಮಾನನಿಲ್ದಾಣದಲ್ಲೂ ವಿಧ್ವಂಸಕ ಕೃತ್ಯ ನಡೆಸಲು ಉಗ್ರರು ಕುತಂತ್ರ ರೂಪಿಸಿದ್ದರು ಎಂದು ಹೇಳಲಾಗಿದೆ. ಈ ಕ್ಯಾಂಪ್ ಪಕ್ಕದಲ್ಲಿ ಹಳೆ ಶ್ರೀನಗರ ವಾಯು ನೆಲೆ ಇದ್ದು, ಇದನ್ನು ಭಾರತೀಯ ವಾಯು ಪಡೆ (ಐಎಎಫ್) ಬಳಸುತ್ತಿದೆ. ಅತಿ ಭದ್ರತೆಯ ಈ ಪ್ರದೇಶವನ್ನು ಉಗ್ರರು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿರುವುದು ಆತಂಕಕ್ಕೀಡು ಮಾಡಿದೆ.
ಸೇನಾ ಶಿಬಿರದ ಕಟ್ಟಡದೊಳಗೆ ಉಗ್ರರು ಅಡಗಿದ್ದರು. ಯೋಧರು ಮತ್ತು ಭಯೋತ್ಪಾದಕರ ನಡುವೆ ಕೆಲಕಾಲ ಗುಂಡಿನ ಚಕಮಕಿ ನಡೆಯಿತು. ಎನ್‍ಕೌಂಟರ್‍ನಲ್ಲಿ ಇಬ್ಬರು ಉಗ್ರರು ಹತರಾದರು ಎಂದು ಬಿಎಸ್‍ಎಫ್ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಐವರು ಉಗ್ರರಿಂದ ಬಿಎಸ್‍ಎಫ್ ಕ್ಯಾಂಪ್ ಮೇಲೆ ಈ ದಾಳಿ ನಡೆದಿದೆ. ಉಗ್ರರ ಆಕ್ರಮಣದ ಹಿನ್ನೆಲೆಯಲ್ಲಿ ಶ್ರೀನಗರ ಏರ್‍ಪೊೀರ್ಟ್‍ನ ಎಲ್ಲ ವಿಮಾನ ಸೇವೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಆ ಪ್ರದೇಶದಲ್ಲಿ ಯೋಧರು ತೀವ್ರ ಶೋಧ ನಡೆಸುತ್ತಿದ್ದಾರೆ. ಸುತ್ತಮತ್ತಲಿನ ಶಾಲಾ-ಕಾಲೇಜುಗಳಿಗೆ ರಜೆ ಘೋಘಿಸಲಾಗಿದೆ.
ಪೊಲೀಸ್ ಹತ್ಯೆ :

ಕಾಶ್ಮೀರ ಪುಲ್ಮಾಮ ಜಿಲ್ಲೆಯ ಅವಂತಿಪೊರಾ ಪ್ರದೇಶದಲ್ಲಿ ನಿನ್ನೆ ರಾತ್ರಿ ಉಗ್ರರು ಪೊಲೀಸ್ ಪೇದೆಯೊಬ್ಬರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮುಂಶಿ (ಪೇದೆ) ಆಗಿ ನೇಮಕಗೊಂಡಿದ್ದ ಆಶಿಕ್ ಅಹಮದ್ ಉಗ್ರರ ಗುಂಡಿಗೆ ಬಲಿಯಾದವರು. ಶ್ರೀನಗರ ಸಮೀಪದ ಅವಂತಿಪೊರಾದ ಪಡ್ಗಂಪೊರಾದಲ್ಲಿ ತಮ್ಮ ಬಂಧುವಿನ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದಾಗ ಅವರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

ಐವರು ಉಗ್ರರ ಹತ್ಯೆ :

ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ನಿನ್ನೆ ಎರಡು ಒಳನುಸುಳುವಿಕೆ ಯತ್ನಗಳನ್ನು ವಿಫಲಗೊಳಿಸಿರುವ ಯೋಧರು ಐವರು ಉಗ್ರರನ್ನು ಹೊಡೆದುರುಳಿಸಿದ್ದಾರೆ.  ಬಾರಾಮುಲ್ಲಾದ ರಾಮ್‍ಪುರದಲ್ಲಿ ಇಬ್ಬರು ಉಗ್ರರು ಯೋಧರ ಗುಂಡಿಗೆ ಬಲಿಯಾಗಿದ್ದರು. ತಂಗಧರ್ ವಿಭಾಗದಲ್ಲಿ ಒಳನುಸುಳಲು ಯತ್ನಿಸುತ್ತಿದ್ದ ಭಯೋತ್ಪಾದಕರು ಮತ್ತು ಭದ್ರತಾಪಡೆ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಹತರಾದರು. ಬಲಿಯಾದ ಆತಂಕವಾದಿಗಳಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾಶ್ಮೀರದಲ್ಲಿ ಉಗ್ರಗಾಮಿಗಳ ಉಪಟಳ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಕಣಿವೆ ರಾಜ್ಯದಲ್ಲಿ ಪ್ರತಿದಿನ ಉಗ್ರರ ಅಟ್ಟಹಾಸ ಮೆರೆಯುತ್ತಾ ರಕ್ತದೋಕುಳಿಯಾಡುತ್ತಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin