ಬಿಎಸ್‍ವೈಗೆ ಕ್ಲೀನ್‍ಚಿಟ್ ಸಿಗುತ್ತಿದ್ದಂತೆ ದೂರ ಸರಿದವರು ಕಣ್ಣು ಈಗ ಕಮಲದತ್ತ..!

ಈ ಸುದ್ದಿಯನ್ನು ಶೇರ್ ಮಾಡಿ

SSY

ಬೆಂಗಳೂರು, ಅ.27- ಕಿಕ್‍ಬ್ಯಾಕ್ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಸಿಬಿಐ ವಿಶೇಷ ನ್ಯಾಯಾಲಯ ಕ್ಲೀನ್‍ಚಿಟ್ ನೀಡುತ್ತಿದ್ದಂತೆ ಪಕ್ಷದಿಂದ ದೂರ ಸರಿದಿದ್ದ ಹಲವರು ಮತ್ತೆ ಮಾತೃಪಕ್ಷದತ್ತ ಮುಖ ಮಾಡುತ್ತಿದ್ದಾರೆ.  ವಿವಿಧ ಕಾರಣಗಳಿಂದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ತೊರೆದಿದ್ದ ಅನೇಕರು ಇದೀಗ ಪುನಃ ಕಮಲ ಮುಡಿಯಲು ಸಜ್ಜಾಗುತ್ತಿದ್ದಾರೆ.  ಇದರಲ್ಲಿ ಪ್ರಮುಖವಾಗಿ ಇತ್ತೀಚೆಗೆ ಕಾಂಗ್ರೆಸ್ ತೊರೆದಿದ್ದ ದಲಿತ ಸಮುದಾಯದ ಪ್ರಭಾವಿ ಮುಖಂಡ ವಿ.ಶ್ರೀನಿವಾಸ ಪ್ರಸಾದ್ ಹೆಸರು ಮುಂಚೂಣಿಯಲ್ಲಿದೆಯಾದರೂ ಈವರೆಗೂ ಅಂತಿಮಗೊಂಡಿಲ್ಲ. ಇನ್ನು ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ, ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕುಡುಚಿ ಶಾಸಕ ಪಿ.ರಾಜೀವ್ ಸೇರಿದಂತೆ ಅನೇಕರು ಬಿಜೆಪಿ ಸೇರುವತ್ತ ಒಲವು ತೋರಿದ್ದಾರೆ. ಪಕ್ಷದಲ್ಲಿದ್ದುಕೊಂಡು ಚಟುವಟಿಕೆಗಳಿಂದ ದೂರ ಉಳಿದಿದ್ದ ದೊಡ್ಡಬಳ್ಳಾಪುರ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಕೂಡ ಸಕ್ರಿಯವಾಗಿ ಪಕ್ಷದಲ್ಲಿ ತೊಡಗಿಸಿಕೊಳ್ಳುವ ಉಮೇದಿನಲ್ಲಿದ್ದಾರೆ.

ಬಿಜೆಪಿಯತ್ತ ಶ್ರೀನಿವಾಸ ಪ್ರಸಾದ್:

ಮೈಸೂರು-ಚಾಮರಾಜನಗರ ಭಾಗದ ಪ್ರಭಾವಿ ದಲಿತ ಮುಖಂಡ ವಿ.ಶ್ರೀನಿವಾಸ ಪ್ರಸಾದ್ ಅವರನ್ನು ಸೆಳೆಯಲು ಬಿಜೆಪಿ ಹರಸಾಹಸ ಮಾಡುತ್ತಿದೆ. ರಾಷ್ಟ್ರ ಮಟ್ಟದ ಬಿಜೆಪಿಯ ಪ್ರಭಾವಿ ಮೂವರು ನಾಯಕರು ನಿರಂತರವಾಗಿ ಪ್ರಸಾದ್ ಸಂಪರ್ಕದಲ್ಲಿದ್ದಾರೆ. ಹಿಂದೆ ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದ ಪ್ರಸಾದ್ ಅವರನ್ನು ಕರೆತರಲು ಬಿಜೆಪಿಯ ಈ ಮೂವರು ನಾಯಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಜತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕೂಡ ಅವರನ್ನು ಪಕ್ಷಕ್ಕೆ ಶತಾಯ-ಗತಾಯ ಕರೆತರಲೇಬೇಕೆಂದು ರಾಜ್ಯ ನಾಯಕರಿಗೆ ಸೂಚನೆ ಕೊಟ್ಟಿದ್ದಾರೆ.

ನಿನ್ನೆ ಯಡಿಯೂರಪ್ಪನವರಿಗೆ ಶುಭ ಕೋರುವ ನೆಪದಲ್ಲಿ ಶ್ರೀನಿವಾಸ ಪ್ರಸಾದ್ ಡಾಲರ್ಸ್ ಕಾಲೋನಿ ನಿವಾಸಕ್ಕೆ ತೆರಳಿ ಮುಕ್ತ ಮಾತುಕತೆ ನಡೆಸಿದ್ದಾರೆ. ನ.27ರಂದು ಬೆಂಗಳೂರಿನಲ್ಲಿ ನಡೆಯಲಿರುವ ಹಿಂದುಳಿದ ವರ್ಗಗಳ ಸಮಾವೇಶದ ವೇಳೆ ಶ್ರೀನಿವಾಸ ಪ್ರಸಾದ್ ಅವರನ್ನು ಅಮಿತ್ ಷಾ ಸಮ್ಮುಖದಲ್ಲಿ ಪಕ್ಷಕ್ಕೆ ಬರಮಾಡಿಕೊಳ್ಳಲು ಬಿಜೆಪಿ ಸಿದ್ಧತೆ ನಡೆಸಿದೆ.
ಆದರೆ, ಉಪಚುನಾವಣೆಯಲ್ಲಿ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಬಳಿಕ ಪಕ್ಷಕ್ಕೆ ಸೇರ್ಪಡೆಯಾಗುವ ಬಗ್ಗೆ ತೀರ್ಮಾನಿಸುವ ಇಂಗಿತವನ್ನು ಬಿಜೆಪಿ ನಾಯಕರ ಬಳಿ ಶ್ರೀನಿವಾಸ ಪ್ರಸಾದ್ ವ್ಯಕ್ತಪಡಿಸಿದ್ದಾರೆ.

ಕೃಷ್ಣಯ್ಯಶೆಟ್ಟಿ:

ಒಂದು ಕಾಲದಲ್ಲಿ ಬಿಜೆಪಿಯ ಶಾಶ್ವತ ಖಜಾನೆ ಎಂದೇ ಕರೆಯಲ್ಪಡುತ್ತಿದ್ದ ಕೃಷ್ಣಯ್ಯಶೆಟ್ಟಿ ಅಕ್ರಮ ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ಸಿಲುಕಿಕೊಂಡು ಜೈಲು ಪಾಲಾದರು. ಬಳಿಕ 2013ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅವರಿಗೆ ಟಿಕೆಟ್ ನಿರಾಕರಿಸಿದ್ದರಿಂದ ಕಾಂಗ್ರೆಸ್‍ನತ್ತ ಮುಖ ಮಾಡಿದ್ದರು. ಆದರೆ, ಅಲ್ಲಿಯೂ ಕೂಡ ಕೃಷ್ಣಯ್ಯಶೆಟ್ಟಿ ಇದ್ದೂ ಇಲ್ಲದಂತಾಗಿದ್ದರು. ಇದೀಗ ಮಾಜಿ ಸಚಿವರೊಬ್ಬರು ಇವರನ್ನು ಕರೆತರಲು ಕಾರ್ಯೋನ್ಮುಖರಾಗಿದ್ದಾರೆ.  ಯಡಿಯೂರಪ್ಪ ಜತೆಯೂ ಕೃಷ್ಣಯ್ಯಶೆಟ್ಟಿ ಆತ್ಮೀಯ ಸಂಬಂಧ ಹೊಂದಿರುವುದರಿಂದ ಅವರ ಪಕ್ಷ ಸೇರ್ಪಡೆ ಬಹುತೇಕ ಖಚಿತವಾಗಿದೆ.

ಹಾಲಾಡಿ ಶ್ರೀನಿವಾಸಶೆಟ್ಟಿ:

ಕರಾವಳಿ ಭಾಗದ ವಾಜಪೇಯಿ ಎಂದೇ ಕರೆಸಿಕೊಳ್ಳುವ ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸಶೆಟ್ಟಿ ಕೂಡ ಬಿಜೆಪಿಯತ್ತ ಮುಖ ಮಾಡಿದ್ದಾರೆ. ಸಚಿವ ಸ್ಥಾನ ನೀಡುವುದಾಗಿ ಹೇಳಿ ಕೊನೆ ಕ್ಷಣದಲ್ಲಿ ಕೈ ತಪ್ಪಿದ್ದರಿಂದ ಬೇಸರಗೊಂಡು ಪಕ್ಷದಿಂದಲೇ ದೂರ ಉಳಿದಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ತಾವೆಷ್ಟು ಪ್ರಭಾವಿ ಎಂಬುದನ್ನು ಸಾಬೀತು ಮಾಡಿದ್ದರು. ಇದೀಗ ಇವರು ಪುನಃ ಮಾತೃಪಕ್ಷ ಸೇರ್ಪಡೆಯಾಗಲು ವೇದಿಕೆ ಸಿದ್ಧವಾಗಿದೆ.  ಇದೇ ರೀತಿ ಶಾಸಕರಾದ ಪಿ.ರಾಜೀವ್ ಸೇರಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್‍ನಲ್ಲಿ ಅತೃಪ್ತಗೊಂಡಿರುವ ಕೆಲ ಪ್ರಮುಖರು ಕೂಡ ಕಮಲ ಮುಡಿಯುವ ಹುಮ್ಮಸ್ಸಿನಲ್ಲಿದ್ದಾರೆ. ವಿಧಾನಸಭೆ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿ ಇರುವಾಗಲೇ ರಾಜ್ಯ ರಾಜಕಾರಣದಲ್ಲಿ ಧೃವೀಕರಣದ ಪರ್ವ ಆರಂಭವಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin