ಬಿಎಸ್‍ವೈಗೆ ಪರ್ಯಾಯ ಶಕ್ತಿಯಾಗಿ ಸಕ್ರಿಯ ರಾಜಕಾರಣಕ್ಕೆ ಸಂತೋಷ್ ಎಂಟ್ರಿ..?

ಈ ಸುದ್ದಿಯನ್ನು ಶೇರ್ ಮಾಡಿ

BJP-Yadiyurappa

– ರವೀಂದ್ರ.ವೈ.ಎಸ್

ಬೆಂಗಳೂರು,ಸೆ.27-ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹಲವು ಹೊಸ ಪ್ರಯೋಗಗಳನ್ನು ಮಾಡುತ್ತಿರುವ ಬಿಜೆಪಿ, ರಾಷ್ಟ್ರೀಯ ಸಂಘಟನಾ ಸಹಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಸಕ್ರಿಯ ರಾಜಕಾರಣಕ್ಕೆ ಕರೆತರಲು ಮುಂದಾಗಿದೆ. ಈವರೆಗೂ ತೆರೆಮರೆಯಲ್ಲೇ ಕುಳಿತು ಪಕ್ಷವನ್ನು ನಿಯಂತ್ರಿಸುತ್ತಿದ್ದ ಸಂತೋಷ್ ಈ ಬಾರಿ ಚುನಾವಣೆಗೆ ಧುಮುಕುವ ಮೂಲಕ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಲು ಮುಂದಾಗಿದ್ದಾರೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಸಂತೋಷ್ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರಿನ ಕೆ.ಆರ್.ಕ್ಷೇತ್ರದಿಂದ ಅಖಾಡಕ್ಕಿಳಿಸಲು ಕೇಂದ್ರ ಬಿಜೆಪಿ ವರಿಷ್ಠರು ತೀರ್ಮಾನಿಸಿದ್ದಾರೆ.  ದೆಹಲಿಯಲ್ಲಿ ಭಾನುವಾರ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರ ನಿವಾಸದಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು , ಸಂತೋಷ್ ಅವರನ್ನು ಮೈಸೂರಿನ ಕೆ.ಆರ್.ಕ್ಷೇತ್ರದಿಂದ ಕಣಕ್ಕಿಳಿಸಲು ವರಿಷ್ಠರು ಸಮರ್ಥಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇದಕ್ಕೆ ಸಂತೋಷ್ ಕೂಡ ಸಮ್ಮತಿ ಸೂಚಿಸಿದ್ದಾರೆ. ಕೆ.ಆರ್.ಕ್ಷೇತ್ರದಲ್ಲಿ ಬ್ರಾಹ್ಮಣ ಸಮುದಾಯದ ಮತಗಳು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಕಣಕ್ಕಿಳಿದರೆ ಗೆಲುವು ಸುಲಭವಾಗಬಹುದೆಂಬ ಲೆಕ್ಕಾಚಾರ ಬಿಜೆಪಿ ಚಿಂತಕರ ಚಾವಡಿಯದ್ದು.   ಮೈಸೂರು ಭಾಗದಲ್ಲಿ ಸಂತೋಷ್ ಕಣಕ್ಕಿಳಿದರೆ ಪಕ್ಕದ ಚಾಮರಾಜನಗರ ಸೇರಿದಂತೆ ಮತ್ತಿತರ ಕಡೆಯೂ ಹಿಂದುತ್ವ ಕಾರ್ಯಸೂಚಿಯ ಮೇಲೆ ಅಧಿಕಾರಕ್ಕೆ ಬರಬಹುದೆಂಬ ಲೆಕ್ಕಾಚಾರ ಹಾಕಲಾಗಿದೆ.
ಕರಾವಳಿ ತೀರ ಪ್ರದೇಶದಲ್ಲಿ ಆರ್‍ಎಸ್‍ಎಸ್ ಪ್ರಬಲ ಹಿಡಿತ ಸಾಧಿಸಿರುವ ಜೊತೆಗೆ ಉಗ್ರ ಹಿಂದುತ್ವದ ಪ್ರತಿಪಾದಕ ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಕೇಂದ್ರ ಸಂಪುಟದಲ್ಲಿ ಸ್ಥಾನ ಪಡೆದಿರುವುದರಿಂದ ಈ ಭಾಗದಲ್ಲಿ ಬಿಜೆಪಿಗೆ ಯಾವುದೇ ಸಮಸ್ಯೆ ಇಲ್ಲ.
ದಕ್ಷಿಣ ಕರ್ನಾಟಕದಲ್ಲಿ ಪಕ್ಷ ಸಂಘಟನೆಗೆ ಹಿನ್ನಡೆಯಾಗಿರುವುದರಿಂದ ಆರ್‍ಎಸ್‍ಎಸ್ ಮೂಲದ ಸಂತೋಷ್ ಅವರನ್ನೇ ಮೈಸೂರು ಭಾಗದಿಂದ ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ.

ಯಾರು ಈ ಸಂತೋಷ್:

ಮೂಲತಃ ಇಂಜಿನಿಯರಿಂಗ್ ಪದವೀಧರರಾಗಿರುವ ಸಂತೋಷ್ ಆರ್‍ಎಸ್‍ಎಸ್‍ನ ಪ್ರಭಾವಿ ನಾಯಕ. ರಾಜ್ಯದಲ್ಲಿ ತಳವೂರಲು ಪ್ರಯತ್ನಿಸಿದರಾದರೂ ಅದಕ್ಕೆ ಯಡಿಯೂರಪ್ಪ ಅವಕಾಶ ನೀಡಿರಲಿಲ್ಲ.  ಯಡಿಯೂರಪ್ಪ ಪಕ್ಷ ಬಿಟ್ಟು ಹೊರ ಹೋದ ನಂತರ ಬಿಜೆಪಿ ಮೇಲೆ ಹಿಡಿತ ಸಾಧಿಸಿದ್ದರಾದರೂ ಪುನಃ ಬಂದ ನಂತರ ತೆರೆಮರೆಗೆ ಸರಿದಿದ್ದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ ಸಂತೋಷ್ ಅವರನ್ನು ದೂರ ಇಡುವಂತೆ ವರಿಷ್ಠರಿಗೆ ದೂರು ನೀಡಿದ್ದರು.
ಬಿಜೆಪಿಯಲ್ಲಿ ಈಗಲೂ ತಮ್ಮದೇ ಗುಂಪು ರಚಿಸಿಕೊಂಡಿದ್ದ ಸಂತೋಷ್ ಬಿಎಸ್‍ವೈಗೆ ಯಾವಾಗಲೂ ಮಗ್ಗಲು ಮುಳ್ಳಾಗಿದ್ದರು. ಸಂಗೊಳ್ಳಿ ರಾಯಣ್ಣ ಬ್ರಿಗೇಡ್‍ನ್ನು ಈಶ್ವರಪ್ಪ ರಚನೆ ಮಾಡಿದಾಗ ಅದಕ್ಕೆ ಎಲ್ಲ ರೀತಿಯ ಸಹಕಾರ ನೀಡಿದ್ದೇ ಸಂತೋಷ್ ಎಂಬ ಆಪಾದನೆ ಇತ್ತು.

ಇತ್ತೀಚೆಗೆ ಬೂತ್ ಕಮಿಟಿ ರಚನೆಯಾದಾಗಲೂ ಸಂತೋಷ್ ಬೆಂಬಲಿಗರಿಗೆ ಆದ್ಯತೆ ನೀಡಲಾಗಿದೆ ಎಂದು ಯಡಿಯೂರಪ್ಪ ಮುನಿಸಿಕೊಂಡಿದ್ದರು. ಹೀಗೆ ಒಂದಿಲ್ಲೊಂದು ರೀತಿಯಲ್ಲಿ ಸಂತೋಷ್ ಬಿಎಸ್‍ವೈ ಹೆಗಲಿಗೆ ಏರಿದ್ದರು.   ಇದೀಗ ಸಕ್ರಿಯ ರಾಜಕಾರಣಕ್ಕೆ ಬರುವ ಮೂಲಕ ಪುನಃ ಬಿಎಸ್‍ವೈ ಕನಸಿಗೆ ಅಡ್ಡಿಯಾಗುವ ಸಾಧ್ಯತೆಗಳು ಹೆಚ್ಚಳವಾಗಿದೆ.

Facebook Comments

Sri Raghav

Admin