ಬಿಎಸ್‍ವೈ ಮುಖ್ಯಮಂತ್ರಿ ಮಾಡೋ ಗುರಿ ರಾಯಣ್ಣ ಬ್ರಿಗೇಡ್‍ಗಿಲ್ಲ : ಈಶ್ವರಪ್ಪ ಹೊಸ ಬಾಂಬ್

ಈ ಸುದ್ದಿಯನ್ನು ಶೇರ್ ಮಾಡಿ

Eshwarappa-vs-Yadiyurappa

ಕಲಬುರಗಿ, ಜ.10- ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವ ಗುರಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‍ಗಿಲ್ಲ ಎಂದು ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಮೇಲ್ಮನೆ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.  ಇದುವರೆಗೂ ಯಡಿಯೂರಪ್ಪ ಅವರನ್ನು ಸಿಎಂ ಮಾಡುವುದೇ ನಮ್ಮ ಉದ್ದೇಶ ಎಂದು ಹೇಳುತ್ತಿದ್ದ ಈಶ್ವರಪ್ಪ ಅವರು ಈಗ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‍ಗೆ ಆ ಉದ್ದೇಶ ಇಲ್ಲ ಎಂದು ಹೇಳುವ ಮೂಲಕ ತಮ್ಮ ರಾಗ ಬದಲಿಸಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಡಿಸಿಎಂ ಈಶ್ವರಪ್ಪ, ಬ್ರಿಗೇಡ್ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿದ್ದೇವೆ. ಮೊದಲು ಯಡಿಯೂರಪ್ಪ ಅವರನ್ನು ಸಿಎಂ ಮಾಡುವ ಉದ್ದೇಶವಿದ್ದದ್ದು ನಿಜ. ನನಗೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬೆಂಬಲ ಬೇಡ. ಜನ ನನ್ನನ್ನು ಸಿಎಂ ಮಾಡುತ್ತಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಹಾಗಾಗಿ ಮಠಾಧೀಶರ ಸಲಹೆಯಂತೆ ಯಾವುದೇ ರಾಜಕೀಯ ಪಕ್ಷಕ್ಕೆ ಬೆಂಬಲ ನೀಡದಿರಲು ಬ್ರಿಗೇಡ್ ವತಿಯಿಂದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಯಾವುದೇ ಕಾರಣಕ್ಕೂ ಬ್ರಿಗೇಡ್ ರಾಜಕೀಯ ಪಕ್ಷವಾಗಿ ಹೊರಹೊಮ್ಮುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಇದ್ದುದು ಸತ್ಯ. ಸದ್ಯದಲ್ಲೇ ಬಗೆಹರಿಯುವ ವಿಶ್ವಾಸವಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಕಳೆದ ಏಳು ತಿಂಗಳ ಹಿಂದೆ ಈಶ್ವರಪ್ಪ ನೇತೃತ್ವದಲ್ಲಿ ಹಿಂದುಳಿದ ದಲಿತರ ಹೆಸರಿನಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಚನೆಯಾಗಿತ್ತು. ಇದೇ ಜ.26ಕ್ಕೆ ಬಾಗಲಕೋಟೆ ಜಿಲ್ಲೆ ಕೂಡಲ ಸಂಗಮದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಬಿಜೆಪಿಯಲ್ಲಿದ್ದುಕೊಂಡು ಹಿಂದುಳಿದವರ, ದಲಿತರ ಪ್ರತ್ಯೇಕ ಸಂಘಟನೆ ಏಕೆ ಮಾಡಬೇಕು. ನಮ್ಮ ಪಕ್ಷದ ಅಡಿಯಲ್ಲಿರುವ ಹಿಂದುಳಿದವರ, ದಲಿತರ ಮೋರ್ಚಾ ಅಡಿ ಸಂಘಟನೆ ಮಾಡಲಿ ಎಂದು ಪಕ್ಷದ ಮುಖಂಡರು ಹೇಳಿದ್ದರೂ ಕೂಡ ರಾಯಣ್ಣ ಬ್ರಿಗೇಡ್ ರಾಜಕೀಯ ರಹಿತ ಸಂಘಟನೆ. ಇದರಲ್ಲಿ ಮಠಾಧೀಶರು, ಜಾತ್ಯತೀತ ಮುಖಂಡರು ಇದ್ದಾರೆ. ಹಿಂದುಳಿದ ಮತ್ತು ದಲಿತರಿಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಈ ಸಂಘಟನೆ ಮಾಡಲಾಗಿದೆ ಎಂದು ಹೇಳುತ್ತಿದ್ದರು.  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಉದ್ದೇಶವೂ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‍ಗಿದೆ ಎಂದು ಈಶ್ವರಪ್ಪ ನೀಡಿದ್ದ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಯಡಿಯೂರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮುಖ್ಯಮಂತ್ರಿ ಮಾಡುವ ಅಗತ್ಯವಿಲ್ಲ. ಅದನ್ನು ಜನ ಮಾಡುತ್ತಾರೆ ಎಂದು ಹೇಳಿದ್ದರು. ಬ್ರಿಗೇಡ್ ಚಟುವಟಿಕೆಗಳಿಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin