ಬಿಎಸ್ ವೈ ಪರಮಾಪ್ತ ,ಸಂಸದ ಸಿದ್ದೇಶ್ವರ್ ಮನೆ ಮೇಲೆ ಐಟಿ ದಾಳಿ : ಹಲವು ದಾಖಲೆ ವಶ

ಈ ಸುದ್ದಿಯನ್ನು ಶೇರ್ ಮಾಡಿ

GP
ಬೆಂಗಳೂರು,ಮೇ 18-ಕೇಂದ್ರ ಮಾಜಿ ಸಚಿವ ಹಾಗೂ ಹಾಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ, ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಪರಮಾಪ್ತ ಜಿ.ಎಂ.ಸಿದ್ದೇಶ್ವರ್ ಅವರಿಗೂ ಆದಾಯ ತೆರಿಗೆ(ಐಟಿ) ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಚಿತ್ರದುರ್ಗ, ದಾವಣಗೆರೆ ಹಾಗೂ ಭೀಮಸಮುದ್ರ ಸೇರಿದಂತೆ ಮತ್ತಿತರ ಕಡೆ ಐಟಿ ಅಧಿಕಾರಿಗಳು ಇಂದು ಏಕಕಾಲಕ್ಕೆ 25ಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ನಡೆಸಿ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಮೂಲತಃ ಅಡಿಕೆ ವ್ಯಾಪಾರಿಗಳಾಗಿರುವ ಸಿದ್ದೇಶ್ವರ್ ದಾವಣಗೆರೆಯಲ್ಲಿ ಶಿಕ್ಷಣ ಸಂಸ್ಥೆಯ ಮಾಲೀಕತ್ವವನ್ನು ಹೊಂದಿದ್ದಾರೆ. ಇಲ್ಲಿನ ಅವರ ನಿವಾಸ, ಜಿ.ಎಂ.ಸಿದ್ದೇಶ್ವರ್ ಸಹಕಾರ ಪತ್ತಿನ ಬ್ಯಾಂಕ್, ಕಚೇರಿ ಸೇರಿದಂತೆ ಮತ್ತಿತರ ಸ್ಥಳಗಳಲ್ಲಿ ಆದಾಯ ಇಲಾಖೆಯ ಅಧಿಕಾರಿಗಳ ಪ್ರತ್ಯೇಕ ತಂಡ ಏಕಕಾಲಕ್ಕೆ ದಾಳಿ ನಡೆಸಿದೆ.ಚಿತ್ರದುರ್ಗದಲ್ಲಿ ಸಿದ್ದೇಶ್ವರ್ ಅವರ ಸಹೋದರನ ನಿವಾಸ ಹಾಗೂ ಅವರ ಒಡೆತನದ ಕಾರ್ಖಾನೆಯೊಂದರ ಮೇಲೂ ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಬೆಳಗ್ಗೆಯಿಂದಲೇ ಸಂಜೆವರೆಗೂ ಅವರ ನಿವಾಸ, ಕಚೇರಿ ಹಾಗೂ ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆದಿದೆ. ಈ ವೇಳೆ ಅಧಿಕಾರಿಗಳು ಬ್ಯಾಂಕ್ ವಹಿವಾಟು, ಖರೀದಿಸಿರುವ ಆಸ್ತಿ, ಮನೆ, ಜಮೀನು ಇತ್ಯಾದಿ ವಿವರಗಳನ್ನು ಪಡೆದಿದ್ದಾರೆ ಎನ್ನಲಾಗಿದೆ.
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ, ನೋಟು ಅಮಾನೀಕರಣದ ನಂತರ ನಡೆಸಿರುವ ವಹಿವಾಟು, ಅಡಿಕೆ ವ್ಯಾಪಾರದಲ್ಲಿ ಬಂದಿರುವ ಲಾಭಾಂಶದ ಬಗ್ಗೆಯೂ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ಐಟಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಸಿದ್ದೇಶ್ವರ್ ತುಮಕೂರಿನ ಪ್ರವಾಸದಲ್ಲಿದ್ದರು ಎಂದು ತಿಳಿದುಬಂದಿದೆ. ನೋಟು ಅಮಾನೀಕರಣದ ನಂತರ ದೇಶಾದ್ಯಂತ ಐಟಿ ಅಧಿಕಾರಿಗಳು ಅಲ್ಲಲ್ಲಿ ದಾಳಿ ನಡೆಸಿ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಕೇಂದ್ರ ಮಾಜಿ ಸಚಿವರಾದ ಲಾಲೂ ಪ್ರಸಾದ್ ಯಾದವ್, ಪಿ.ಚಿದಂಬರಂ ಅವರ ಪುತ್ರನ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಕರ್ನಾಟಕದಲ್ಲೂ ಐಟಿ ಅಧಿಕಾರಿಗಳು ಅನೇಕರ ಮೇಲೆ ದಾಳಿ ನಡೆಸಿದ್ದರು. ಬಿಜೆಪಿ ಸಂಸದರೊಬ್ಬರ ಮೇಲೆ ನಡೆದಿರುವ ದಾಳಿ ಇದೇ ಮೊದಲು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin