ಬಿಜಿಎಸ್ ಆಸ್ಪತ್ರೆಯಿಂದ ನಡೆದಾಡುವ ದೇವರು ಡಿಸ್ಚಾರ್ಜ್

ಈ ಸುದ್ದಿಯನ್ನು ಶೇರ್ ಮಾಡಿ

Siddaganga-Swamiji

ಬೆಂಗಳೂರು, ಮೇ 13- ಆರೋಗ್ಯದಲ್ಲಿ ಕೊಂಚ ಏರುಪೇರಾಗಿ ನಗರದ ಬಿಜಿಎಸ್ ಆಸ್ಪತ್ರೆಗೆ ನಿನ್ನೆ ದಾಖಲಾಗಿದ್ದ ತ್ರಿವಿಧ ದಾಸೋಹಿ, ನಡೆದಾಡುವ ದೇವರು ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರಸ್ವಾಮೀಜಿಯವರು ಚೇತರಿಸಿಕೊಂಡಿದ್ದು, ಇಂದು ಆಸ್ಪತ್ರೆಯಿಂದ ಮಠಕ್ಕೆ ತೆರಳಿದರು.  ಬಿಜಿಎಸ್‍ಗ್ಲೋಬಲ್ ಆಸ್ಪತ್ರೆಗೆ ನಿನ್ನೆ ದಾಖಲಾಗಿದ್ದ ಶ್ರೀಗಳಿಗೆ ಚಿಕಿತ್ಸೆ ನೀಡಿದ ಡಾ.ರವೀಂದ್ರ ಮತ್ತು ತಂಡ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿ, ಪಿತ್ತನಾಳದ ಸೋಂಕಿನಿಂದ ಆದ ಜ್ವರದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಂಡೋಸ್ಕೋಪಿಕ್ ಚಿಕಿತ್ಸೆ ನೀಡಲಾಗಿದೆ. ಈಗ ಅವರು ಚೇತರಿಸಿಕೊಂಡಿದ್ದು, ಡಿಸ್‍ಚಾರ್ಜ್ ಮಾಡಲಾಗಿದೆ. ಮಠದಲ್ಲಿಯೇ ಚಿಕಿತ್ಸೆ ಮುಂದುವರೆಸಲಾಗುವುದು ಎಂದು ಹೇಳಿದರು.ಆಸ್ಪತ್ರೆಯಲ್ಲಿ ಶ್ರೀಗಳು ಮಠದಲ್ಲಿದ್ದಂತೆಯೇ ಇದ್ದರು. ಅವರ ಕೊಠಡಿಯನ್ನು ದೇಗುಲದಂತೆ ವ್ಯವಸ್ಥೆಗೊಳಿಸಿದ್ದೆವು. ನಿನ್ನೆ ರಾತ್ರಿ ಆಸ್ಪತ್ರೆ ಸಿಬ್ಬಂದಿಗಳಿಗೆ ಅವರು ಹಿತವಚನ ಹೇಳಿದರು. ಅವರನ್ನು ಭೇಟಿ ಮಾಡಲು ಗಣ್ಯ ವ್ಯಕ್ತಿಗಳು ಕೂಡ ಆಗಮಿಸಿದ್ದರು. ಅವರೊಂದಿಗೂ ಕೂಡ ಶ್ರೀಗಳು ಲವಲವಿಕೆಯಿಂದ ಮಾತನಾಡಿದ್ದಾರೆ. ಈಗ ಅವರಿಗೆ ಯಾವ ಸಮಸ್ಯೆಯೂ ಇಲ್ಲ. ಶ್ರೀಗಳು ಒಂದೆರಡು ದಿನ ವಿಶ್ರಾಂತಿ ಪಡೆಯುವ ಅವಕಶ್ಯಕತೆ ಇದ್ದು, ಅದನ್ನು ಮಠದಲ್ಲೇ ಮುಂದುವರೆಸಲಿದ್ದಾರೆ. ನಮ್ಮ ವೈದ್ಯರು ಮಠದಲ್ಲೇ ಇದ್ದು ನಿಗಾ ವಹಿಸಲಿದ್ದಾರೆ ಎಂದರು.

ಸ್ವಾಮೀಜಿ ಅವರಿಗೆ ಬುಧವಾರ ರಾತ್ರಿ ನಿಶಕ್ತಿ ಕಾಣಿಸಿಕೊಂಡಿದ್ದರಿಂದ ವೈದ್ಯರ ತಂಡ ಚಿಕಿತ್ಸೆ ಆರಂಭಿಸಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ನಿನ್ನೆ ಬೆಳಗ್ಗೆ ಸ್ವಾಮೀಜಿ ಅವರನ್ನು ನಗರಕ್ಕೆ ಬರಮಾಡಿಕೊಂಡು ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಿ ತಜ್ಞರ ತಂಡ ಚಿಕಿತ್ಸೆ ನೀಡಿತು.  ಯಕೃತಿನ ಸೋಂಕು ಹಾಗೂ ಕೆಲ ಅಡಚಣೆ ಉಂಟಾಗಿದ್ದರಿಂದ ಸ್ವಾಮೀಜಿಗಳಿಗೆ ಜ್ವರ ಕಾಣಿಸಿಕೊಂಡಿತ್ತು, ಜತೆಗೆ ವಯೋಸಹಜ ಸಮಸ್ಯೆಗಳಿಂದಲೂ ಬಳಲುತ್ತಿರುವ ಶ್ರೀಗಳಿಗೆ ಸ್ವಲ್ಪ ಸುಸ್ತಾದಂತೆ ಕಂಡು ಬಂದಿತ್ತು ಎಂದರು.

ಸದ್ಯ ಅವರು ಚೇತರಿಸಿಕೊಂಡಿದ್ದಾರೆ. ಯಾವುದೇ ಆತಂಕವಿಲ್ಲ. ಶ್ರೀಗಳು ಆಸ್ಪತ್ರೆಗೆ ದಾಖಲಾಗಿರುವ ವಿಚಾರ ತಿಳಿಯುತ್ತಿದ್ದಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ನಟ ಗಣೇಶ್, ಪತ್ನಿ ಶಿಲ್ಪಾಗಣೇಶ್ ಮತ್ತಿತರರು ಕೂಡ ಯೋಗ ಕ್ಷೇಮ ವಿಚಾರಿಸಿದ್ದಾರೆ  ಇತ್ತ ಶ್ರೀಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಅತ್ತ ಮಠದ ಭಕ್ತರಲ್ಲಿ ಆತಂಕ ಶುರುವಾಗಿ ಮಠದ ಬಳಿ ಎಲ್ಲ ಜಮಾಯಿಸಿದ್ದರು. ಈಗ ಅವರು ಚೇತರಿಸಿಕೊಂಡು ಮಠಕ್ಕೆ ಹಿಂದಿರುಗುವ ಸುದ್ದಿ ಕೇಳುತ್ತಿದ್ದಂತೆ ಎಲ್ಲರೂ ಸಂತಸಗೊಂಡಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin