ಬಿಜೆಪಿಗೆ ಕಗ್ಗಂಟಾದ 10 ಕ್ಷೇತ್ರಗಳ ಟಿಕೆಟ್ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Karnataka-BJP--01

ಬೆಂಗಳೂರು, ಏ.17-ಏನೇ ಸರ್ಕಸ್ ಮಾಡಿದರೂ ರಾಜ್ಯ ಬಿಜೆಪಿ ನಾಯಕರಿಗೆ 10 ವಿಧಾನಸಭಾ ಕ್ಷೇತ್ರಗಳ ಟಿಕೆಟ್ ಘೋಷಣೆ ಭಾರೀ ಕಗ್ಗಂಟಾಗಿ ಪರಿಣಮಿಸಿದೆ. ಈಗಾಗಲೇ ಬಂಡಾಯದ ಬೇಗುದಿಯಿಂದ ಕಮಲ ವಿಲವಿಲನೆ ಎನ್ನುತ್ತಿರುವಾಗಲೇ ಹತ್ತು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿದೆ.  ಬೆಂಗಳೂರಿನ ಗಾಂಧಿನಗರ, ಸರ್ವಜ್ಞನಗರ, ಪುಲಕೇಶಿನಗರ, ಚಿಕ್ಕಮಗಳೂರಿನ ಮೂಡಿಗೆರೆ, ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ, ಉಡುಪಿ, ಶಿವಮೊಗ್ಗದ ಭದ್ರಾವತಿ, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ ಸೇರಿದಂತೆ 10 ಕ್ಷೇತ್ರಗಳಲ್ಲಿ ಸರ್ವಸಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ಭಾರೀ ಸರ್ಕಸ್ ನಡೆಸುತ್ತಿದೆ.

ಈ ಎಲ್ಲಾ ಕ್ಷೇತ್ರಗಳಲ್ಲೂ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಇರುವ ಕಾರಣ ಯಾರಿಗೇ ಕೊಟ್ಟರೂ ಮತ್ತೊಬ್ಬರು ಬಂಡಾಯ ಏಳಬಹುದೆಂಬ ಭೀತಿ ನಾಯಕರನ್ನು ಕಾಡುತ್ತಿದೆ. ಸಮೀಕ್ಷೆ ಆಧಾರದ ಮೇಲೆ ಟಿಕೆಟ್ ನೀಡುವುದಾಗಿ ಹೇಳಿದರೂ ಕೇಳುವ ವ್ಯವಧಾನ ಯಾರಿಗೂ ಇಲ್ಲ. ಅದರಲ್ಲೂ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಸಂಘ ಪರಿವಾರದ ನಾಯಕರು ಒಂದೊಂದು ಕ್ಷೇತ್ರಕ್ಕೆ ಮೂವರಿಂದ ನಾಲ್ವರು ಅಭ್ಯರ್ಥಿಗಳನ್ನು ಶಿಫಾರಸು ಮಾಡಿರುವುದು ಸಮಸ್ಯೆ ಇನ್ನಷ್ಟು ಬಿಗಡಾಯಿಸಲು ಕಾರಣವಾಗಿದೆ.

ಕರಾವಳಿ ಜಿಲ್ಲೆಗಳಲ್ಲಿ ಈ ಬಾರಿ ಗೆದ್ದೇ ತೀರಬೇಕೆಂದು ಹಠಕ್ಕೆ ಬಿದ್ದಿರುವ ಬಿಜೆಪಿ ಆರ್‍ಎಸ್‍ಎಸ್ ಸಲಹೆ, ಮಾರ್ಗದರ್ಶನ ಪಡೆದು ಹೊಸ ಮುಖಗಳಿಗೆ ಆದ್ಯತೆ ನೀಡಲು ಚಿಂತನೆ ನಡೆಸಿದೆ. ಆದರೆ ಮಾಜಿ ಸಚಿವ ಕೃಷ್ಣಪಾಲೇಮರ್, ಮಾಜಿ ಶಾಸಕ ಯೋಗೀಶ್‍ಭಟ್ ಉಡುಪಿಯಲ್ಲಿ ರಘುಪತಿ ಭಟ್, ಮೂಡಿಗೆರೆಯಲ್ಲಿ ಎಂ.ಪಿ.ಕುಮಾರಸ್ವಾಮಿ ತಮಗೆ ಟಿಕೆಟ್ ಬೇಕೆಂದು ಪಟ್ಟು ಹಿಡಿದಿರುವ ಕಾರಣ ಬಿಜೆಪಿಗೆ ಯಾರನ್ನು ಕಣಕ್ಕಿಳಿಸಬೇಕು ಎಂಬ ಯಕ್ಷಪ್ರಶ್ನೆ ಎದುರಾಗಿದೆ.  ಒಬ್ಬರನ್ನು ಬಿಟ್ಟು ಮತ್ತೊಬ್ಬರಿಗೆ ಟಿಕೆಟ್ ನೀಡಿದರೆ ಮುನಿಸಿಕೊಳ್ಳಬಹುದು. ಇದು ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದೆಂಬ ಕಾರಣದಿಂದ ಕೊನೆ ಕ್ಷಣದಲ್ಲಿ ಸರ್ವಸಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ತೀರ್ಮಾನಿಸಿದೆ.

Facebook Comments

Sri Raghav

Admin