ಬಿಜೆಪಿಗೆ ಸೆಡ್ಡು ಹೊಡೆದ ಬೇಳೂರು : ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ..!

ಈ ಸುದ್ದಿಯನ್ನು ಶೇರ್ ಮಾಡಿ

Beluru-Gopalakrishna

ಬೆಂಗಳೂರು, ಏ.18-ಟಿಕೆಟ್ ಸಿಗದೆ ಪಕ್ಷದ ವಿರುದ್ಧವೇ ತಿರುಗಿ ಬಿದ್ದಿರುವ ಶಿವಮೊಗ್ಗ ಜಿಲ್ಲೆ ಸಾಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಹಾಗೂ ಮಾಜಿ ಶಾಸಕ ಗೋಪಾಲ ಕೃಷ್ಣ ಬೇಳೂರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ. ಇಂದು ಅಥವಾ ನಾಳೆಯೊಳಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಬೇಳೂರು ಭೇಟಿಯಾಗಲಿದ್ದಾರೆ. ಒಂದು ವೇಳೆ ಅವರಿಂದ ಸೂಕ್ತ ಸ್ಪಂದನೆ ಹಾಗೂ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವ ಭರವಸೆ ಸಿಕ್ಕರೆ ಸ್ಫರ್ಧೆಯಿಂದ ಹಿಂದೆ ಸರಿಯುವ ಸಾಧ್ಯತೆ ಇದೆ.

ಒಂದು ವೇಳೆ ಬಿಜೆಪಿಯಿಂದ ಯಾರೊಬ್ಬರೂ ಮಾತುಕತೆಗೆ ಆಹ್ವಾನಿಸದಿದ್ದರೆ ಬೇಳೂರು ಸಾಗರದಿಂದ ಯಾವುದೇ ರಾಜಕೀಯ ಪಕ್ಷಕ್ಕೆ ಸೇರದೆ ಪಕ್ಷೇತರ ಅಭ್ಯರ್ಥಿಯಾಗಿ ಶನಿವಾರ ಇಲ್ಲವೇ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ. ಟಿಕೆಟ್ ಘೋಷಣೆಯಾದ ನಂತರ ಇವರೆಗೂ ಗೋಪಾಲಕೃಷ್ಣ ಬೇಳೂರು ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ , ಜಿಲ್ಲಾ ಮುಖಂಡ ಕೆ.ಎಸ್.ಈಶ್ವರಪ್ಪ , ಜಿಲ್ಲಾ ಘಟಕದ ಅಧ್ಯಕ್ಷ ರುದ್ರೇಗೌಡ ಸೇರಿದಂತೆ ಯಾರೊಬ್ಬರು ಕರೆದು ಮಾತುಕತೆ ನಡೆಸಿಲ್ಲ.  ತಮ್ಮನ್ನು ಪಕ್ಷದ ಮುಖಂಡರು ಸೌಜನ್ಯಕ್ಕಾದರೂ ಕರೆ ಮಾತನಾಡಿದ್ದರೆ ನನ್ನ ನಿರ್ಧಾರ ಏನೆಂಬುದನ್ನು ತಿಳಿಸುತ್ತಿದ್ದೆ. ಕಳೆದ 5 ವರ್ಷಗಳಿಂದ ಕ್ಷೇತ್ರದಲ್ಲಿ ನಾನು ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಿದ್ದೇನೆ. ಇದ್ದಕ್ಕಿದ್ದಂತೆ ನನಗೆ ಟಿಕೆಟ್ ತಪ್ಪಿಸಿ ಹೊರಗಿನವರಿಗೆ ಮಣೆ ಹಾಕಿದರೆ ನಾನು ಹೇಗೆ ಸುಮ್ಮನಿರಬೇಕೆಂದು ತಮ್ಮ ಆಪ್ತರ ಬಳಿ ನೋವು ತೋಡಿಕೊಂಡಿದ್ದಾರೆ. ಬೆಂಗಳೂರಿಗೆ ಆಗಮಿಸಿರುವ ಅಮಿತ್ ಷಾ ಅವರು ತಮ್ಮನ್ನು ಮಾತುಕತೆಗೆ ಆಗಮಿಸಿ ಸಮಾಧಾನಪಡಿಸಿದರೆ ಕಣದಿಂದ ಹಿಂದೆ ಸರಿಯುವುದಾಗಿ ಬೇಳೂರು ಹೇಳಿಕೊಂಡಿದ್ದಾರೆ.

ಬೆಂಬಲಿಗರ ಪಟ್ಟು:
ಮೂಲಗಳ ಪ್ರಕಾರ ಸಾಗರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕೆಂದು ಬೆಂಬಲಿಗರು ಪಟ್ಟು ಹಿಡಿದಿದ್ದಾರೆ. ನೀವು ಯಾವುದೇ ಪಕ್ಷಕ್ಕೂ ಹೋಗದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕು. ಯಾವುದೇ ಕಾರಣಕ್ಕೂ ಕಣದಿಂದ ಹಿಂದೆ ಸರಿಯಬಾರದು ಎಂದು ಒತ್ತಡ ಹಾಕಿದ್ದಾರೆ.  ಬಿಜೆಪಿ ಅಭ್ಯರ್ಥಿಯಾಗಿರುವ ಹಾಲಪ್ಪಗೂ ಸಾಗರಕ್ಕೂ ಸಂಬಂಧವೇ ಇಲ್ಲ. ಹಾಗೆ ನೋಡಿದರೆ ಅವರು ಒಂದು ಬಾರಿ ಹೊಸನಗರ, ಮತ್ತೊಂದು ಬಾರಿ ಸೊರಬದಿಂದ ಗೆದ್ದವರು.  ನೀವು ಜೆಡಿಎಸ್‍ಗೂ ಹೋಗದೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕೆಂದು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ ಬೆಂಬಲಿಗರು ಕೂಡ ಒತ್ತಡ ಹಾಕುತ್ತಿದ್ದಾರೆ.  ಒಂದೆಡೆ ಕಾರ್ಯಕರ್ತರು ಮತ್ತು ಬೆಂಬಲಿಗರ ಒತ್ತಡಕ್ಕೆ ಸಿಲುಕಿರುವ ಬೇಳೂರು ಪಕ್ಷದಿಂದ ಯಾವುದೇ ಆಶ್ವಾಸನೆ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

Facebook Comments

Sri Raghav

Admin