ಬಿಜೆಪಿಯಲ್ಲಿ ಉಂಟಾಗಿರುವ ಅಸಮಾಧಾನಕ್ಕೆ ಶೋಭಾಕರಂದ್ಲಾಜೆ ವರ್ತನೆಯೇ ಕಾರಣ

ಈ ಸುದ್ದಿಯನ್ನು ಶೇರ್ ಮಾಡಿ

Shobha-Karandlaje

ಬೆಂಗಳೂರು, ಆ.9-ರಾಜ್ಯ ಬಿಜೆಪಿ ಘಟಕದಲ್ಲಿ ಉಂಟಾಗಿರುವ ಅಸಮಾಧಾನಕ್ಕೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾಕರಂದ್ಲಾಜೆ ವರ್ತನೆಯೇ ಕಾರಣ ಎಂದು ಭಿನ್ನಮತೀಯರು ಕಿಡಿಕಾರಿದ್ದಾರೆ.  ಈ ಸಂಬಂಧ ಕೇಂದ್ರ ವರಿಷ್ಠರಿಗೆ ಹದ್ದುಮೀರಿ ವರ್ತಿಸುತ್ತಿರುವ ಶೋಭಾ ವಿರುದ್ಧ ದೂರು ನೀಡಿ ಸಮಸ್ಯೆ ಇತ್ಯರ್ಥಪಡಿಸುವಂತೆ ಭಿನ್ನಮತೀಯರು ಕೋರಲಿದ್ದಾರೆ.
ಪಕ್ಷ ವಹಿಸಿರುವ ಜವಾಬ್ದಾರಿಯನ್ನಷ್ಟೇ ನಿರ್ವಹಿಸಲು ಶೋಭಾಗೆ ಬುದ್ಧಿಮಾತು ಹೇಳಬೇಕು. ಪ್ರತಿಯೊಂದರಲ್ಲೂ ಹಸ್ತಕ್ಷೇಪ ಇಲ್ಲವೆ, ಮೂಗು ತೂರಿಸುವ ಕೆಲಸ ನಿಲ್ಲಿಸುವಂತೆ ತಾಕೀತು ಮಾಡಲು ನಿರ್ದೇಶನ ನೀಡಬೇಕೆಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾಗೆ ಭಿನ್ನಮತೀಯರು ದೂರು ನೀಡಲು ಮುಂದಾಗಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಬೇಕೆಂದರೆ ಮೊದಲು ಶೋಭಾ ಅವರ ಒಪ್ಪಿಗೆ ಪಡೆಯಬೇಕು. ಇನ್ನು ಅವರ ಜೊತೆ ಖಾಸಗಿಯಾಗಿ ಮಾತನಾಡಲು ಅವಕಾಶ ಸಿಗುತ್ತಿಲ್ಲ. ಪಕ್ಷದ ಸಂಘಟನೆ ಸೇರಿದಂತೆ ಯಾವುದೇ ವಿಷಯದಲ್ಲೂ ಮುಕ್ತವಾಗಿ ಚರ್ಚಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಭಿನ್ನಮತೀಯರ ಅಳಲು.  ಇನ್ನು ಮಾಜಿ ಶಾಸಕರು, ಪಕ್ಷದ ಮುಖಂಡರು ಸೇರಿದಂತೆ ಯಡಿಯೂರಪ್ಪ ಕೂಡ ಶೋಭಾ ಜೊತೆ ಚರ್ಚಿಸುವಂತೆ ಸೂಚಿಸುತ್ತಾರೆ. ಅಧ್ಯಕ್ಷರ ಬಳಿಹೇಳಿಕೊಳ್ಳುವ ಸಮಸ್ಯೆಗಳನ್ನು ನಾವು ಸಂಸದೆಯ ಜೊತೆ ಹೇಗೆ ಚರ್ಚಿಸಲು ಸಾಧ್ಯ ಎಂಬುದು ಕೆಲವರ ನೋವಿನ ನುಡಿ.  ಕಳೆದ ಬಾರಿಯೇ ಶೋಭಾ ಅವರನ್ನು ಪಕ್ಷದ ಚಟುವಟಿಕೆಯಿಂದ ದೂರವಿಡುವಂತೆ ಸೂಚಿಸಲಾಗಿತ್ತು.ಆದರೆ ಯಡಿಯೂರಪ್ಪ ತಮ್ಮ ಹಳೆಯ ಚಾಳಿಯನ್ನೇ ಮುಂದುವರೆಸಿರುವುದು ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದೆ.

ತಮ್ಮ ಆಪ್ತರಿಗೆ ಮಾತ್ರ ಮಣೆ ಹಾಕುವ ಅವರು, ಪಕ್ಷದ ನಿಷ್ಠಾವಂತರನ್ನು ಕಡೆಗಣಿಸುತ್ತಿದ್ದಾರೆ. ಅದರಲ್ಲೂ ಶೋಭಾ ಕರಂದ್ಲಾಜೆಯ ಹಸ್ತಕ್ಷೇಪ ಸಹಿಸಲು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮವೇ ಭಾನುವಾರ ಕರೆದ ಪದಾಧಿಕಾರಿಗಳ ಸಭೆಯಿಂದ ದೂರು ಉಳಿಯಬೇಕಾಯಿತು. ಇನ್ನಾದರೂ ಯಡಿಯೂರಪ್ಪ ಇಂತಹ ಪ್ರಮಾದಗಳಿಗೆ ಅವಕಾಶ ನೀಡದೆ ಎಚ್ಚೆತ್ತುಕೊಂಡು ಪಕ್ಷದ ಸಂಘಟನೆಗೆ ಆದ್ಯತೆ ನೀಡುವಂತೆ ಭಿನ್ನಮತೀಯರು ಮನವಿ ಮಾಡಿಕೊಂಡಿದ್ದಾರೆ.

Facebook Comments

Sri Raghav

Admin