ಬಿಜೆಪಿಯಲ್ಲಿ ಮುಂದುವರೆದ ಯಡಿಯೂರಪ್ಪ-ಈಶ್ವರಪ್ಪ ನಡುವಿನ ಶೀತಲ ಸಮರ

ಈ ಸುದ್ದಿಯನ್ನು ಶೇರ್ ಮಾಡಿ

Yadiyurapaaಬೆಂಗಳೂರು, ಆ.25-ಬಿಜೆಪಿಯಲ್ಲಿ ಭಾರೀ ವಿವಾದ ಸೃಷ್ಟಿಸಿರುವ ಸಂಗೊಳ್ಳಿರಾಯಣ್ಣ ಬ್ರಿಗೇಡ್ ಸಂಘಟನೆ ಸಂಬಂಧ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಈಶ್ವರಪ್ಪ ನಡುವಿನ ಶೀತಲ ಸಮರ ಮತ್ತೆ ಮುಂದುವರೆದಿದೆ.  ಎರಡು ದಿನಗಳ ಹಿಂದೆ ನವದೆಹಲಿಯಲ್ಲಿ ನಡೆದ ಎಲ್ಲಾ ರಾಜ್ಯಗಳ ಕೋರ್ ಕಮಿಟಿ ಸಭೆಯಲ್ಲಿ ಪಕ್ಷ ಸಂಘಟನೆಗೆ ಎಲ್ಲರೂ ಮುಂದಾಗಬೇಕೆಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೂಚನೆ ಕೊಟ್ಟಿದ್ದರು. ಹೀಗಾಗಿ ಬಿಜೆಪಿಯಲ್ಲಿ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಮುಗಿಯಲಿದೆ ಎಂಬ ನಿರೀಕ್ಷೆ ಎಲ್ಲರಲ್ಲಿತ್ತು.  ಆದರೆ ಯಡಿಯೂರಪ್ಪ ಇಂದು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಈಶ್ವರಪ್ಪ ಅವರನ್ನೇ ಗುರಿಯಾಗಿಸಿಕೊಂಡು ಮತ್ತೆ ಬುಸುಗುಟ್ಟಿದ್ದಾರೆ.  ನನ್ನ ಹೆಸರಿನಲ್ಲಿ ಯಾರೊಬ್ಬರೂ ಅಭಿಮಾನಿಗಳ ಸಂಘವನ್ನು ಸ್ಥಾಪಿಸುವುದಾಗಿ ಇಲ್ಲವೆ ಸಭೆ ಸಮಾರಂಭಗಳನ್ನು ನಡೆಸಬಾರದು. ಎಲ್ಲಾ ಚಟುವಟಿಕೆಗಳು ಪಕ್ಷದ ಚೌಕಟ್ಟಿನಲ್ಲಿಯೇ ನಡೆಯಬೇಕೆಂದು ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಇದು ಸೂಚ್ಯವಾಗಿ ಈಶ್ವರಪ್ಪನವರನ್ನೇ ಗುರಿಯಾಗಿಟ್ಟುಕೊಂಡು ಬಿಎಸ್ವೈ ಹೇಳಿದ್ದಾರೆ ಎಂಬ ಮಾತು ಕಮಲ ಪಾಳಯದಲ್ಲಿ ಕೇಳಿ ಬಂದಿದೆ.  ನನ್ನ ಹೆಸರಿನಲ್ಲಿ ಅಭಿಮಾನಿ ಸಂಘ ಸ್ಥಾಪನೆ ಮಾಡುವುದು, ಇದರ ಹೆಸರಿನಲ್ಲಿ ಸಂಘಟನೆ ಮಾಡುವುದು ನನಗೆ ಅಷ್ಟು ಸರಿ ಕಾಣುತ್ತಿಲ್ಲ. ನಾನು ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷನಾಗಿರುವುದರಿಂದ ಯಾವುದೇ ಸಭೆ, ಸಮಾರಂಭ ಮಾಡಬೇಕಾದರೂ ಪಕ್ಷದ ಚೌಕಟ್ಟಿನಲ್ಲೇ ಮಾಡಬೇಕು. ಹೀಗಾಗಿ ಅಭಿಮಾನಿಗಳು ಸಂಘಟನೆಯಲ್ಲಿ ತೊಡಗಿಕೊಳ್ಳದಂತೆ ನಿರ್ದೇಶನ ನೀಡಿದ್ದಾರೆ.  ಯಡಿಯೂರಪ್ಪ ಅಭಿಮಾನಿಗಳಿಗೆ ಮನವಿ ಮಾಡುವ ಮೂಲಕ ಪರೋಕ್ಷವಾಗಿ ಈಶ್ವರಪ್ಪನವರ ಕಾಲೆಳೆಯುವ ತಂತ್ರವನ್ನು ಅನುಸರಿಸಿದ್ದಾರೆ. ಸಂಗೊಳ್ಳಿರಾಯಣ್ಣ ಬ್ರಿಗೇಡ್ ಸ್ಥಾಪನೆ ಮಾಡುವುದು ಬೇಡ ಎಂಬುದು ಬಿಎಸ್ವೈ ಮನವಿಯಾಗಿತ್ತು.

ಆದರೆ ಪಕ್ಷದೊಳಗಿರುವ ಕೆಲ ಬಿಎಸ್ವೈ ವಿರೋಧಿಗಳು ಈಶ್ವರಪ್ಪ ಸಂಗೊಳ್ಳಿರಾಯಣ್ಣ ಬ್ರಿಗೇಡ್ ಸ್ಥಾಪನೆ ಮಾಡುವ ಮೂಲಕ ಹಿಂದುಳಿದ, ದಲಿತ ಸಮುದಾಯದ ಸಂಘಟನೆ ಮಾಡುತ್ತಿದ್ದಾರೆ. ಇದರ ಮೂಲಕ ನಮ್ಮ ಪಕ್ಷಕ್ಕೆ ಅನುಕೂಲವಾಗುವುದಾದರೆ ಇದರಲ್ಲಿ ತಪ್ಪೇನು ಎಂದು ಪರೋಕ್ಷವಾಗಿ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದರು.   ಇನ್ನು ಕೆಲ ಬಿಜೆಪಿ ರಾಷ್ಟ್ರೀಯ ನಾಯಕರು ಕೂಡ ಪರೋಕ್ಷವಾಗಿ ಯಡಿಯೂರಪ್ಪನವರನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ನೆಪದಲ್ಲಿ ಈಶ್ವರಪ್ಪನವರ ಈ ಕಾರ್ಯಕ್ಕೆ ಕೈಜೋಡಿಸಿದ್ದರು.  ಇದೀಗ ಯಡಿಯೂರಪ್ಪ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಮುಂದಾಗಿದ್ದು, ತಮ್ಮ ಅಭಿಮಾನಿಗಳ ಸಂಘ ಸ್ಥಾಪನೆ ಮಾಡುವುದು ಬೇಡ ಎನ್ನುವ ಮೂಲಕ ಈಶ್ವರಪ್ಪನವರಿಗೂ ಇದು ಅನ್ವಯ ಎಂಬ ಸಂದೇಶ ರವಾನಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin