ಬಿಜೆಪಿಯವರದ್ದು ಮಿಷನ್ 150ನೋ ಅಥವಾ 420ನೋ ಜನರೇ ನಿರ್ಧರಿಸುತ್ತಾರೆ : ಆಂಜನೇಯ ವ್ಯಂಗ್ಯ

ಈ ಸುದ್ದಿಯನ್ನು ಶೇರ್ ಮಾಡಿ

Anjaneya
ಚಿತ್ರದುರ್ಗ, ಮೇ 1- ರಾಜ್ಯ ಬಿಜೆಪಿಯದು ಮಿಷನ್ ನೂರೈವತ್ತೋ ಅಥವಾ ನಾನೂರಿಪ್ಪತ್ತೋ ಎಂಬುದನ್ನು ಮುಂದಿನ ಚುನಾವಣೆಯಲ್ಲಿ ಜನರೇ ನಿರ್ಧರಿಸುತ್ತಾರೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಲೇವಡಿ ಮಾಡಿದ್ದಾರೆ.ಇಂದು ಚಿತ್ರದುರ್ಗದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, 2018ರ ಚುನಾವಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ನಡೆಸಲಾಗುತ್ತದೆ ಮತ್ತು ಇನ್ನೊಂದು ಅವಧಿಗೆ ಕಾಂಗ್ರೆಸ್ ಪಕ್ಷವೇ ಅಧಿಕಾರ ನಡೆಸುತ್ತದೆ ಎಂದು ಹೇಳಿದರು.ನಮಗೆ ರಾಜ್ಯ ಬಿಜೆಪಿ ಒಳ ಜಗಳದ ಲಾಭ ಮಾಡಿಕೊಳ್ಳುವ ಅಗತ್ಯವಿಲ್ಲ. ನಮ್ಮ ಜನಪರ ಯೋಜನೆಗಳೇ ನಮಗೆ ಶ್ರೀರಕ್ಷೆಯಾಗಿ ನಿಲ್ಲುತ್ತವೆ. ಮುಂದಿನ ಚುನಾವಣೆಯಲ್ಲಿ ಗೆಲುವು ನಮ್ಮದೇ ಎಂದು ಆಂಜನೇಯ ವಿಶ್ವಾಸ ವ್ಯಕ್ತಪಡಿಸಿದರು.ರಾಜ್ಯ ಕಾಂಗ್ರೆಸ್ ಉಸ್ತುವಾರಿ ಬದಲಾವಣೆ ವಿಷಯ ಕುರಿತಂತೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಬದಲಾವಣೆ ಪಕ್ಷದಲ್ಲಿ ನಿರಂತರ ಪ್ರಕ್ರಿಯೆ. ಇದು ವಿಶೇಷವೇನೂ ಅಲ್ಲ ಎಂದರು.ಕಾಂಗ್ರೆಸ್ ಮುಕ್ತ ಕರ್ನಾಟಕವನ್ನು ಮಾಡುತ್ತೇವೆ ಎಂಬ ಬಿಜೆಪಿ ಹೇಳಿಕೆ ಪ್ರಬುದ್ಧವಾದುದಲ್ಲ. ಯಾವುದೇ ಜವಾಬ್ದಾರಿಯುತ ರಾಜಕಾರಣಿಗಳು ಈ ತರಹ ಲಘುವಾಗಿ ಮಾತನಾಡುವುದಿಲ್ಲ. ರಾಜ್ಯದಲ್ಲಿ ಹತಾಶರಾಗಿರುವ ಬಿಜೆಪಿ ನಾಯಕರು ಸುಮ್ಮನಿರಲಾರದೆ ಈ ರೀತಿ ಮಾತನಾಡುತ್ತಾರೆ.

ಕಾಂಗ್ರೆಸ್‍ಗೆ 100 ವರ್ಷಗಳ ಇತಿಹಾಸವಿದೆ. ಅದನ್ನು ಈ ದೇಶದಿಂದ ಅಥವಾ ಈ ದೇಶದ ಜನತೆಯ ಮನಸ್ಸಿನಿಂದ ತೆಗೆದು ಹಾಕುವುದು ಬಿಜೆಪಿ ಅಥವಾ ಯಾವುದೇ ಪಕ್ಷದಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.ಮೇ 13ಕ್ಕೆ ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ನಾಲ್ಕು ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ಮೇ 14ರಂದು ಚಿತ್ರದುರ್ಗದಲ್ಲಿ ಬೃಹತ್ ಸಮಾವೇಶವೊಂದನ್ನು ಹಮ್ಮಿಕೊಳ್ಳಲಾಗಿದ್ದು, ಈ ಸಮಾವೇಶದ ಮೂಲಕ ಸರ್ಕಾರದ ಜನಪರ ಯೋಜನೆ ಮತ್ತು ಸಾಧನೆಗಳ ಬಗ್ಗೆ ಜನತೆಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಆಂಜನೇಯ ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin