‘ಬಿಜೆಪಿಯವರು ಹರಾಮ್‍ಕೋರ್ ನಾಯಕರು’..! ಸ್ವಪಕ್ಷದವರ ವಿರುದ್ಧವೇ ‘ಕತ್ತಿ’ ಮಸೆತ

ಈ ಸುದ್ದಿಯನ್ನು ಶೇರ್ ಮಾಡಿ

Umesh-Katti---02

ಬೆಳಗಾವಿ,ಡಿ.8- ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುವಲ್ಲಿ ಎತ್ತಿದ ಕೈ ಎನಿಸಿರುವ ಮಾಜಿ ಸಚಿವ ಹಾಲಿ ಶಾಸಕ ಉಮೇಶ್ ಕತ್ತಿ ಇದೀಗ ತಮ್ಮ ಮಾತೃ ಪಕ್ಷದವರನ್ನೇ ಅಸಹ್ಯಕರ ರೀತಿಯಲ್ಲಿ ಟೀಕಿಸಿ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬಿಜೆಪಿಯವರು ನಾವು ಹಿಂದುಗಳೆಂದು ಹೇಳುತ್ತಾರೆ. ಆದರೆ ಅವರು ಹರಾಮ್‍ಕೋರ್ ನಾಯಕರೆಂದು ಉಮೇಶ್ ಕತ್ತಿ ಆರೋಪಿಸಿದ್ದಾರೆ. ಅವರ ಈ ಹೇಳಿಕೆ ಪಕ್ಷದ ವಲಯದಲ್ಲಿ ತೀವ್ರ ಅಸಮಾಧಾನ ಮೂಡಿಸಿದ್ದು , ಶಿಸ್ತು ಕ್ರಮ ಜರುಗಿಸುವಂತೆ ಕೆಲವರು ಒತ್ತಾಯಿಸಿದ್ದಾರೆ.

ಕಳೆದ ವಾರ ತಮ್ಮ ಆಪ್ತರ ಜೊತೆ ಔಪಚಾರಿಕವಾಗಿ ಮಾತನಾಡುವ ವೇಳೆ ಕತ್ತಿ ಬಿಜೆಪಿಯವರು ಹರಾಮ್‍ಕೋರ್ ನಾಯಕರು, ನನ್ನನ್ನು ಪ್ರತ್ಯೇಕ ಲಿಂಗಾಯಿತ ಧರ್ಮಕ್ಕೆ ಹೋಗಬೇಡಿ ಎಂದು ಸೂಚಿಸಿದ್ದರು. ಆದ್ದರಿಂದ ನಾನು ಭಾಗವಹಿಸಿಲ್ಲ ಎಂದು ಸ್ಪಷ್ಟಪಡಿಸಿದರು. ನನಗೂ ಬಿಜೆಪಿಗೂ ಆಗಿ ಬರುವುದಿಲ್ಲ. ನಾನು ಬೆಳೆದು ಬಂದ ರೀತಿಯೇ ಬೇರೆ. ಬಿಜೆಪಿ ಅಜೆಂಡಾವೇ ಬೇರೆ. ಆದರೆ ಕ್ಷೇತ್ರದ ಕಾರ್ಯಕರ್ತರ ಒತ್ತಡ, ರಾಜಕೀಯ ಭವಿಷ್ಯಕ್ಕಾಗಿ ಪಕ್ಷದಲ್ಲಿ ಮುಂದುವರೆದಿದ್ದೇನೆ. ಹಿಂದುತ್ವ, ಧರ್ಮ, ಜಾತಿ ನಮಗೆ ಆಗಿಬರುವುದಿಲ್ಲ. ಇದನ್ನು ನಾನು ಕೆಲ ಸಂದರ್ಭದಲ್ಲಿ ಪಕ್ಷದ ವೇದಿಕೆಯಲ್ಲೇ ಮುಖಂಡರೆದುರು ಹೊರ ಹಾಕಿದ್ದೇನೆ ಎಂದು ಹೇಳಿದ್ದಾರೆ.

ಪ್ರತ್ಯೇಕ ಲಿಂಗಾಯಿತ ಧರ್ಮಕ್ಕೆ ಪಕ್ಷದ ನಾಯಕರು ಹೋಗಬಾರದೆಂದು ನಿರ್ದೇಶಿಸಿದ್ದರು. ನಾನು ಹುಟ್ಟು ಲಿಂಗಾಯಿತ. ಸಾಯುವಾಗಲೂ ಲಿಂಗಾಯಿತನಾಗೇ ಸಾಯುತ್ತೇನೆ. ಧರ್ಮ ಮತ್ತು ಜಾತಿ ಅತಿ ಸೂಕ್ಷ್ಮ ವಿಷಯ. ಈ ವಿಷಯದಲ್ಲಿ ಯಾರೂ ಅನಗತ್ಯವಾಗಿ ಗೊಂದಲ ಸೃಷ್ಟಿಸಲು ಪ್ರಯತ್ನಿಸಬಾರದು. ಪ್ರತ್ಯೇಕ ಧರ್ಮಕ್ಕಾಗಿ ಪರ ವಿರೋಧ ಚರ್ಚೆ ನಡೆಯುತ್ತದೆ. ನಾವು ಕೆಲವು ಕಾರಣಗಳಿಗಾಗಿ ಈ ಹೋರಾಟದಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ಅಂತಿಮವಾಗಿ ಸಮಾಜದ ಮುಖಂಡರು, ಮಠಾಧೀಶರು ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ದರಾಗಬೇಕಾಗುತ್ತದೆ ಎಂದು ಹೇಳಿದ್ದಾರೆ.

ವಿವಾದಾತ್ಮಕ ಹೇಳಿಕೆ ನೀಡುವುದು ಕತ್ತಿಗೆ ಇದು ಹೊಸತೇನೂ ಅಲ್ಲ. ಈ ಹಿಂದೆ ಪ್ರತ್ಯೇಕ ರಾಜ್ಯವಾಗಬೇಕೆಂದು ಹೇಳಿಕೆ ಕೊಟ್ಟಿದ್ದರು. ಇದು ಭಾರೀ ವಿವಾದವನ್ನೇ ಸೃಷ್ಟಿಸಿತ್ತು. ಕತ್ತಿ ಆಪ್ತರು ಹೇಳುವ ಪ್ರಕಾರ ಅವರ ಒಂದೊಂದು ಹೇಳಿಕೆಯೂ ರಾಜಕೀಯದ ಲಾಭ ನಷ್ಟದಲ್ಲೇ ಇರುತ್ತದೆ. ಯಾವುದೇ ಹೇಳಿಕೆಯನ್ನು ಕೊಡುವ ಮುನ್ನ ಅವರು ಸಾಕಷ್ಟು ಯೋಚಿಸಿಯೇ ಹೇಳುತ್ತಾರೆ. ಚುನಾವಣಾ ಸಂದರ್ಭದಲ್ಲಿ ಮತದಾರರನ್ನು ಭಾವನಾತ್ಮಕವಾಗಿ ಸೆಳೆದುಕೊಳ್ಳಲು ಈ ರೀತಿ ಹೇಳಿರಬಹುದೆಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತದೆ.

Facebook Comments

Sri Raghav

Admin