ಬಿಜೆಪಿಯೊಳಗಿನ ಬಿಕ್ಕಟ್ಟು ಬಗೆಹರಿಯುವ ಮೊದಲೇ ಮತ್ತೊಂದು ವಿವಾದ ಸೃಷ್ಟಿ

ಈ ಸುದ್ದಿಯನ್ನು ಶೇರ್ ಮಾಡಿ

BJP-Office

ಬೆಂಗಳೂರು, ಮೇ 12- ರಾಜ್ಯ ಬಿಜೆಪಿಯೊಳಗೆ ಉಂಟಾಗಿದ್ದ ಬಿಕ್ಕಟ್ಟು ಶಮನವಾಯಿತು ಎನ್ನುವಷ್ಟರಲ್ಲಿ ಇದೀಗ ಮತ್ತೊಂದು ವಿವಾದ ಸೃಷ್ಟಿಯಾಗಿದೆ. ಕಳೆದ 14 ವರ್ಷಗಳಿಂದ ಬಿಜೆಪಿ ಕಾರ್ಯಾಲಯದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಕೇಶವಪ್ರಸಾದ್ ಅವರು ರಾಜೀನಾಮೆ ನೀಡಿದ್ದಾರೆ. ನಿನ್ನೆ ಸಂಜೆಯೇ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್‍ಕುಮಾರ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ನೀಡಿ ಕಚೇರಿಯಿಂದ ನಿರ್ಗಮಿಸಿದ್ದಾರೆಂದು ಮೂಲಗಳು ತಿಳಿಸಿವೆ.  ಪಕ್ಷದ ಕಚೇರಿಯಲ್ಲಿ ದಿನನಿತ್ಯದ ಚಟುವಟಿಕೆಗಳ ಜೊತೆ ಟೈಪಿಸ್ಟ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಬಳಿಕ ಅವರ ಸೇವೆಯನ್ನು ಗುರುತಿಸಿ ಕಾರ್ಯದರ್ಶಿ ಹುದ್ದೆ ನೀಡಲಾಗಿತ್ತು.ಆದರೆ ಕೇಶವಪ್ರಸಾದ್ ಕಚೇರಿಯಲ್ಲಿ ನಡೆಯುತ್ತಿದ್ದ ಪ್ರತಿಯೊಂದು ಬೆಳವಣಿಗೆಗಳನ್ನು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರಿಗೆ ಇಂಚಿಂಚು ಮಾಹಿತಿ ನೀಡುತ್ತಿದ್ದರು ಎನ್ನಲಾಗಿದೆ. ಕಚೇರಿಗೆ ಬಂದು ಹೋಗುವವರು. ಯಾರ್ಯಾರು ಬಂದಿದ್ದರು ?ಎಲ್ಲಿ ಸಭೆ ನಡೆಸಿದರು ? ಏನೇನು ನಡೆಯುತ್ತಿದೆ ಎಂಬುದು ಸೇರಿದಂತೆ ಎಲ್ಲ ಮಾಹಿತಿಗಳನ್ನು ಚಾಚೂ ತಪ್ಪದೆ ವರದಿ ರೂಪದಲ್ಲಿ ನೀಡುತ್ತಿದ್ದರು.  ಇತ್ತೀಚಿಗೆ ಪಕ್ಷದ ರಾಜ್ಯಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಸಂತೋಷ್ ವಿರುದ್ದ ಅಸಮಾಧಾನ ಹೊರಹಾಕಿದ್ದರು. ಇದನ್ನು ಮೊದಲು ಅವರಿಗೆ ತಲುಪಿಸಿದ್ದೇ ಇವರು ಎಂಬ ಗುಮಾನಿ ಇದೆ. ಜೊತೆಗೆ ಬಿಎಸ್‍ವೈ ಬಣದವರ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಸಂತೋಷ್‍ಗೆ ಹೇಳುತ್ತಿದ್ದರು. ಪಕ್ಷದ ವಿರುದ್ದ ತೊಡೆ ತಟ್ಟಿ ನಗರದ ಅರಮನೆ ಮೈದಾನದಲ್ಲಿ ಕೆ.ಎಸ್.ಈಶ್ವರಪ್ಪ ನಡೆಸಿದ ಸಮಾವೇಶಕ್ಕೆ ಪಕ್ಷದ ಕಚೇರಿಯಿಂದಲೇ ಎಲ್ಲವನ್ನು ಒದಗಿಸಿದ್ದರು.

ಸಹಜವಾಗಿ ಇದು ಯಡಿಯೂರಪ್ಪ ಕಣ್ಣು ಕೆಂಪಾಗುವಂತೆ ಮಾಡಿತ್ತು. ಕಳೆದ ವಾರ ಮೈಸೂರಿನಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿ ಸಂದರ್ಭದಲ್ಲಿ ರಾಜ್ಯ ಉಸ್ತುವಾರಿ ಮುರಳೀಧರರಾವ್ ಜೊತೆ ಬಿಎಸ್‍ವೈ ಚರ್ಚೆ ನಡೆಸಿ ಪಕ್ಷದ ಕಚೇರಿಯಿಂದಲೇ ಮಾಹಿತಿ ಸೋರಿಕೆ ಮಾಡುತ್ತಿರುವ ಕೇಶವಪ್ರಸಾದ್ ಅವರನ್ನು ಹೊರಹಾಕುವುದಾಗಿ ಹೇಳಿದ್ದರು.

ಕೇವಲ ತಮ್ಮ ಬೆಂಬಲಿಗರನ್ನು ಗುರಿಯಾಗಿಟ್ಟುಕೊಂಡು ಸಂತೋಷ್ ಬಳಿ ಆರೋಪ ಮಾಡುತ್ತಿರುವ ಅವರನ್ನು ಕಚೇರಿಯಿಂದ ಹೊರಹಾಕಲು ಯಡಿಯೂರಪ್ಪ ಸಿದ್ದತೆ ನಡೆಸಿದ್ದರು. ಇದರ ಸುಳಿವು ಅರಿತ ಅವರು ನಿನ್ನೆ ಸಂಜೆಯೇ ರಾಜೀನಾಮೆ ನೀಡಿ ನಿರ್ಗಮಿಸಿದ್ದಾರೆ.  ಇದರ ಜೊತೆಗೆ ಕೇಶವಪ್ರಸಾದ್ ಮೇಲೆ ಕೆಲವು ಗಂಭೀರ ಆರೋಪಗಳು ಕೇಳಿ ಬಂದಿದ್ದವು. ಪಕ್ಷದ ಕಚೇರಿಯಲ್ಲೇ ಕೇಳಿ ಬಂದಿತ್ತು. ಸಿದ್ದರಾಮ್ ಎಂಬ ಸಿಬ್ಬಂದಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಹಣ ಪಡೆದಿದ್ದರು ಎನ್ನಲಾಗಿದೆ. ಕೊನೆಗೆ ಹಣವನ್ನು ಹಿಂತಿರಿಗಿಸದೆ ಸಾಕಷ್ಟು ಸಾತಾಯಿಸಿದ್ದರು. ಇದು ಭಾರೀ ವಿವಾದ ಸೃಷ್ಟಿಸಿತ್ತು.

ಅಲ್ಲದೆ ಹಣಕಾಸಿನ ವಾಹಿವಾಟಿನ ಬಗ್ಗೆಯೂ ಸಿಬ್ಬಂಧಿಯೇ ಹಲವು ಬಾರಿ ಅನುಮಾನ ವ್ಯಕ್ತಪಡಿಸುತ್ತಿದ್ದರು. ಈ ಎಲ್ಲ ಬೆಳವಣಿಗೆಗಳಿಂದಲೇ  ಯಡಿಯೂರಪ್ಪಅವರು ಕೇಶವ ಪ್ರಸಾದ್‍ಗೆ ಪಕ್ಷದ ಕಚೇರಿಯಿಂದ ಗೇಟ್ ಪಾಸ್ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಸಂತೋಷ್ ಅವರ ಆಪ್ತ ಹಾಗೂ ಕಚೇರಿಯ ಟೈಪಿಸ್ಟ್ ಮಲ್ಲಿಕಾರ್ಜನ್ ಅವರನ್ನು ಕಿತ್ತು ಹಾಕಲಾಗಿತ್ತು. ಈಗ ಮಲ್ಲಿಕಾರ್ಜನ್ ಸಂತೋಷ್ ನಿದೇರ್ಶಕರಾಗಿರುವ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಕೇಶವಪ್ರಸಾದ್ ಇದೇ ಸಂಸ್ಥೆಯಲ್ಲಿ ವ್ಯವಸ್ಥಾಪಕರಾದರೂ ಅಚ್ಚರಿಯಿಲ್ಲ ಎನ್ನುತ್ತಿವೆ ಪಕ್ಷದ ಮೂಲಗಳು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin