ಬಿಜೆಪಿ ಅಧಿಕಾರಕ್ಕೆ ಬಂದರೆ 7ನೇ ವೇತನ ಆಯೋಗ ರಚನೆ : ಬಿಎಸ್‍ವೈ ಭರವಸೆ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa-01

ತುಮಕೂರು, ಜ.9-ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮರುಕ್ಷಣದಲ್ಲಿಯೇ 7ನೇ ವೇತನ ಆಯೋಗವನ್ನು ನೇಮಕ ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.  ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು,ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಸರಕಾರಿ ನೌಕರರಿಗೆ 7ನೇ ವೇತನ ಆಯೋಗ ರಚಿಸುವುದಾಗಿ ಹೇಳಿ ನೌಕರರ ಮೂಗಿಗೆ ತುಪ್ಪು ಸವರುವ ಕೆಲಸ ಮಾಡುತ್ತಿದೆ.ಈ ಹಿಂದೆ ನಾನು ಉಪಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿ ಆಗಿದ್ದ ವೇಳೆ ಸರಕಾರಿ ನೌಕರರಿಗೆ 5 ಮತ್ತು 6ನೇ ವೇತನ ಆಯೋಗವನ್ನು ಜಾರಿಗೊಳಿಸಿದ್ದೆ. ಇದನ್ನು ನಮ್ಮ ಶಿಕ್ಷಕ ಬಂಧುಗಳು ಮರೆತಿಲ್ಲ. ಶಿಕ್ಷಕರ ಕ್ಷೇತ್ರದ ಈ ಚುನಾವಣೆ ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂದರು.

ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ ಶಿಕ್ಷಣ ಕ್ಷೇತ್ರಕ್ಕೆ ಇದ್ದ ಅನುದಾನವನ್ನು 7ಸಾವಿರ ಕೋಟಿಯಿಂದ 17 ಸಾವಿರ ಕೋಟಿಗೆ ಹೆಚ್ಚಿಸಲಾಯಿತು.ಇದರಿಂದಾಗಿ 8 ಸಾವಿರ ಸಹಶಿಕ್ಷಕರು,4 ಸಾವಿರ ಪಿಯು ಶಿಕ್ಷಕರು,6000 ಜೆಓಸಿ ಶಿಕ್ಷಕರ ಖಾಯಂ,2000 ಅರೆಕಾಲಿಕ ಉಪನ್ಯಾಸಕ ಖಾಯಂ ಹಾಗೂ 434 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಶಿಕ್ಷಕರ ನೇಮಕ ಮಾಡಲಾಯಿತು. ಈ ವಿಚಾರವನ್ನು ಮತದಾರರ ಮುಂದಿಟ್ಟು ಮತ ಕೇಳುವ ಕೆಲಸವನ್ನು ಬಿಜೆಪಿ ಪಕ್ಷದ ಕಾರ್ಯಕರ್ತರು, ಅಭ್ಯರ್ಥಿಗಳು ಮಾಡಬೇಕು. ಕೇಂದ್ರ ಸರಕಾರದ ಸಾಧನೆ ಮತ್ತು ರಾಜ್ಯ ಸರಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಮತ ಯಾಚಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕೆಂದು ಬಿ.ಎಸ್.ಯಡಿಯೂರಪ್ಪ ಕರೆ ನೀಡಿದರು.

ಸರಕಾರ ಬರವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಕೆರೆ,ಕಟ್ಟೆಗಳಲ್ಲಿ ನೀರಿಲ್ಲ. ಸರಕಾರ ಮುಂಬರುವ ಮಳೆಯ ನೀರನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಕೆರೆಗಳ ಹೂಳು ತೆಗೆಸುವ ಕೆಲಸ ಮಾಡಬೇಕು. ಮಳೆ ನೀರು ಪೋಲಾಗದಂತೆ ಎಚ್ಚರಿಕೆ ವಹಿಸಬೇಕೆಂದು ಆಗ್ರಹಿಸಿದರು. ಶಾಸಕರಾದ ವೈ.ಎ.ನಾರಾಯಣಸ್ವಾಮಿ, ಬಿ.ಸುರೇಶ್‍ಗೌಡ,ಮಾಜಿ ಸಂಸದ ಜಿ.ಎಸ್.ಬಸವರಾಜು,ಜಿಲ್ಲಾ ಬಿಜೆಪಿ ಅಧ್ಯಕ್ಷ ಜೋತಿ ಗಣೇಶ್,ಬಿಜೆಪಿ ಅಭ್ಯರ್ಥಿ ಪಿ.ಆರ್.ಬಸವರಾಜು ಉಪಸ್ಥಿತರಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin