ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ಆಚರಣೆ ರದ್ದು

ಈ ಸುದ್ದಿಯನ್ನು ಶೇರ್ ಮಾಡಿ

B-JP-Protest-0020

ಬೆಂಗಳೂರು, ನ.8- ಬಿಜೆಪಿ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಟಿಪ್ಪು ಜಯಂತಿ ಆಚರಣೆ ರದ್ದು ಹಾಗೂ ಪಿಎಫ್‍ಐ, ಕೆಎಫ್‍ಡಿ ಮತ್ತು ಎಸ್‍ಡಿಐ ಸಂಘಟನೆಗಳನ್ನು  ನಿಷೇಧಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.  ನಗರದ ಮೌರ್ಯ ವೃತ್ತದ ಬಳಿ ಇರುವ ಗಾಂಧಿ ಪ್ರತಿಮೆ ಬಳಿ ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸುತ್ತಿರುವುದನ್ನು ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಟಿಪ್ಪು ಓರ್ವ ಮತಾಂದನೇ ಹೊರತು  ಸ್ವಾತಂತ್ರ್ಯ ಹೋರಾಟಗಾರನಲ್ಲ. ಅಲ್ಪಸಂಖ್ಯಾತರ ಮತಗಳನ್ನು ಓಲೈಸಿಕೊಳ್ಳಲು ಸರ್ಕಾರ ಟಿಪ್ಪುವನ್ನು ದೇಶಪ್ರೇಮಿ ಎಂದು ಬಿಂಬಿಸುತ್ತಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ಟಿಪ್ಪು ಜಯಂತಿಯನ್ನು ರದ್ದುಪಡಿಸಲಾಗುವುದು ಎಂದರು.

ರಾಜ್ಯದ ಅನೇಕ ಕಡೆ ಆರ್‍ಎಸ್‍ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಕೊಲೆಗಳ ಹಿಂದೆ ಮೂಲಭೂತವಾದಿ ಸಂಘಟನೆಗಳಾದ ಪಿಎಫ್‍ಐ, ಕೆಎಫ್‍ಡಿ ಮತ್ತು ಎಸ್‍ಡಿಐ ಕೈವಾಡವಿರುವುದು ಸಾಬೀತಾಗಿದೆ. ಮೊದಲು ಈ ಸಂಘಟನೆಗಳನ್ನು ನಿಷೇಧಿಸಬೇಕು. ಇದರಿಂದ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ಹೇಳಿದರು. ಶಿವಾಜಿನಗರದ ಬಳಿ ನಡೆದ ಆರ್‍ಎಸ್‍ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಹಿಂದೆ ಸಚಿವ ರೋಷನ್ ಬೇಗ್ ಅವರ ಕೈವಾಡ  ಇದೆ ಎಂಬ ಶೋಭಾಕರಂದ್ಲಾಜೆ ಅವರ ಹೇಳಿಕೆ ನೂರಕ್ಕೆ ನೂರರಷ್ಟು ನಿಜ. ಮಾನನಷ್ಟ ಮೊಕದ್ದಮೆ ಹೂಡಿದರೆ ಹೆದರುವುದಿಲ್ಲ. ಬೇಕಿದ್ದರೆ ಇಡೀ ನಮ್ಮ ಪಕ್ಷದವರ ಮೇಲೆಯೇ ಮಾನನಷ್ಟ ಮೊಕದ್ದಮೆ ಹೂಡಿದರೂ ಎದುರಿಸಲು ಸಿದ್ಧರಿದ್ದೇವೆ  ಎಂದು ಸವಾಲು ಹಾಕಿಈದರು.

ಈ ಕೊಲೆಯ ಸತ್ಯಾಸತ್ಯತೆ ಹೊರ ಬರಬೇಕಾದರೆ ರಾಜ್ಯ ಸರ್ಕಾರ ಕೂಡಲೇ ರಾಷ್ಟ್ರೀಯ ತನಿಖಾ ದಳ(ಎನ್‍ಐಎ)ಕ್ಕೆ ವಹಿಸಲಿ. ನಿಮ್ಮ ಹಣೆಬರಲ ಏನೆಂಬುದು ತಿಳಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ಮೂರೂವರೆ ವರ್ಷಗಳ ಕಾಲ ತೊಘಲಕ್ ದರ್ಬಾರ್ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕಾರಾವಧಿ ಕೊನೆ ಹಂತದಲ್ಲಿದೆ. ಯಾರಿಗೂ ಬೇಡವಾಗಿದ್ದರೂ ಟಿಪ್ಪು ಜಯಂತಿ ಆಚರಣೆ ಮಾಡುವ ಮೂಲಕ ಸಮಾಜದಲ್ಲಿ ಧರ್ಮ ಮತ್ತು ಜಾತಿಗಳ ನಡುವೆ ಕೋಮುಸಂಘರ್ಷ ಸೃಷ್ಟಿಸಲಾಗುತ್ತಿದೆ ಎಂದು ಅವರು ದೂರಿದರು. ನಾಳೆ ಕೇಂದ್ರ ಗೃಹ ಸಚಿವ ರಾಜನಾಥ್‍ಸಿಂಗ್ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿನ ಪ್ರಸಕ್ತ ವಿದ್ಯಮಾನಗಳ ಬಗ್ಗೆ ವಿವರಿಸಲಾಗುವುದು. ಇದೇ 10ರಂದು ರಾಜ್ಯಾದ್ಯಂತ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಬಿಜೆಪಿವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಅಫ್ಜಲ್‍ಗುರು ಜಯಂತಿ ನಡೆಸಿ:

ತನ್ನ ಆಡಳಿದುದ್ದಕ್ಕೂ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿ ಹಿಂದೂ ಧರ್ಮವನ್ನು ನಾಶ ಮಾಡಲು ಹೊರಟಿದ್ದ ಟಿಪ್ಪು ಸುಲ್ತಾನ್ ಜಯಂತಿ ಮಾಡುವ ಬದಲು ಸಂಸತ್ ಮೇಲೆ ದಾಳಿ ನಡೆಸಿ ನೇಣಿಗೇರಿದ ಅಫ್ಜಲ್‍ಗುರು ಜಯಂತಿಯನ್ನು ರಾಜ್ಯ ಸರ್ಕಾರ ಆಚರಿಸಿಕೊಳ್ಳಲಿ ಎಂದು ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ವ್ಯಂಗ್ಯವಾಡಿದರು. ನಮಗೆ ಬೇಕಿರುವುದು ಶರೀಫರು, ಅಬ್ದುಲ್ ಕಲಾಂ ಅವರಂತಹ ಜಯಂತಿ ಆಚರಣೆಗಳು. ಮುಸ್ಲಿಂ ಧರ್ಮಕ್ಕೆ ಮಾತಂತರವಾಗಲಿಲ್ಲ ಎಂಬ ಕಾರಣಕ್ಕೆ ಹಿಂದುಗಳ ನರಮೇಧ ನಡೆಸಿದ ಟಿಪ್ಪು ಜಯಂತಿ ಆಚರಣೆಯಲ್ಲ  ಎಂದು ಹೇಳಿದರು. ಲಂಡನ್‍ನಿಂದ ಟಿಪ್ಪು ಖಡ್ಗ ತಂದ ಹೆಂಡದ ದೊರೆ ವಿಜಯ್‍ಮಲ್ಯ, ಟಿಪ್ಪು ಚಿತ್ರ ನಿರ್ಮಿಸಲು ಹೊರಟಿದ್ದ ಸಂಜಯ್‍ಖಾನ್ ಪರಿಸ್ಥಿತಿ ಏನಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲಿ ಎಂದು ಮಾರ್ಮಿಕವಾಗಿ ನುಡಿದರು.

ಅಲ್ಪಸಂಖ್ಯಾತರ ಮತಕ್ಕಾಗಿ ಟಿಪ್ಪು ಜಯಂತಿ ಆಚರಿಸಿದರೆ ಸಮಸ್ತ ಹಿಂದುಗಳು ನಾಳೆ ನಿಮ್ಮ ವಿರುದ್ಧ ತಿರುಗಿ ಬೀಳಲಿದ್ದಾರೆ ಎಂಬುದರ ಬಗ್ಗೆ ಎಚ್ಚರವಿರಲಿ ಎಂದರು. ಸಂಸದೆ ಶೋಭಾಕರಂದ್ಲಾಜೆ ಮಾತನಾಡಿ, ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸಬಾರದು. ಆರ್‍ಎಸ್‍ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ರೋಷನ್‍ಬೇಗ್ ವಿರುದ್ಧ ಮಾಡಿದ ಆರೋಪಕ್ಕೆ ಈಗಲೂ ಬದ್ಧಳಿದ್ದೇನೆ. ನನ್ನ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದರೆ ಹೆದರುವ ಜಾಯಮಾನ ನನ್ನದಲ್ಲ. ಎಲ್ಲ ಸವಾಲುಗಳನ್ನು ಸ್ವೀಕರಿಸಲು ಸಿದ್ಧಳಿದ್ದೇನೆ ಎಂದರು. ಮಾಜಿ ಸಚಿವರಾದ ಸುರೇಶ್‍ಕುಮಾರ್, ಅರವಿಂದ ಲಿಂಬಾವಳಿ, ಕಟ್ಟಾಸುಬ್ರಹ್ಮಣ್ಯನಾಯ್ಡು ಮತ್ತಿತರರು ಮಾತನಾಡಿದರು. ಸಂಸದ ಪಿ.ಸಿ.ಮೋಹನ್, ಶಾಸಕರಾದ ಮುನಿರಾಜು, ನಾರಾಯಣಸ್ವಾಮಿ, ನಗರ ಘಟಕದ ಮುಖಂಡರು, ಬಿಬಿಎಂಪಿ ಸದಸ್ಯರು ಪಾಲ್ಗೊಂಡಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin