ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿಗೆ ಫೈನಲ್ ಟಚ್

ಈ ಸುದ್ದಿಯನ್ನು ಶೇರ್ ಮಾಡಿ
BJP-Executive--01
ಸಾಂಧರ್ಭಿಕ ಚಿತ್ರ

ಬೆಂಗಳೂರು,ಏ.7- ಅಭ್ಯರ್ಥಿಗಳ ಆಯ್ಕೆ ಗೆ ಅಂತಿಮ ಸ್ಪರ್ಶ ನೀಡಲು ಇಂದು ನಗರದ ಹೊರವಲಯದ ರೆಸಾರ್ಟ್‍ನಲ್ಲಿ ಬಿಜೆಪಿಯ ಕೋರ್ ಕಮಿಟಿ ಸಭೆ ನಡೆಯಿತು. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್, ಕೇಂದ್ರ ಸಚಿವರಾದ ಅನಂತಕುಮಾರ, ಸದಾನಂದಗೌಡ, ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವೇಡ್ಕರ್, ಮುಖಂಡರಾದ ರವಿಕುಮಾರ್, ಸಿ.ಟಿ.ರವಿ, ಅರುಣ್‍ಕುಮಾರ್, ಶೋಭ ಕರಂದ್ಲಾಜೆ ಸೇರಿದಂತೆ ಮತ್ತಿತರ ಮುಖಂಡರು ಭಾಗವಹಿಸಿದ್ದರು.

ಸಭೆಯಲ್ಲಿ ಪ್ರಮುಖವಾಗಿ ಸೋಮವಾರ ಬಿಡುಗಡೆ ಮಾಡಲು ಉದ್ದೇಶಿಸಿರುವ ಮೊದಲ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಹಾಗೂ ಪ್ರಮುಖರು ನೀಡಿರುವ ಅಭಿಪ್ರಾಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ಹಾಲಿ ಶಾಸಕರಿಗೆ ಅವರು ಪ್ರತಿನಿಧಿಸುವ ಕ್ಷೇತ್ರಗಳಲ್ಲೇ ಪ್ರತಿನಿಧಿಸುವುದು ಹಾಗೂ ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಂದ ಬಂದಿರುವ ವಲಸಿಗರಿಗೂ ಟಿಕೆಟ್ ನೀಡಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಎರಡಕ್ಕಿಂತ ಹೆಚ್ಚು ಆಕಾಂಕ್ಷಿಗಳಿರುವ ಕ್ಷೇತ್ರಗಳಲ್ಲಿ ಯಾರಿಗೆ ಟಿಕೆಟ್ ಕೊಡಬೇಕು, ಟಿಕೆಟ್ ಕೈ ತಪ್ಪಿದವರು ಬಂಡವಾಯವೆದ್ದರೆ ಹೇಗೆ ನಿಭಾಯಿಸಬೇಕು,ಕೆಲವು ಐವೋಲ್ಟೇಜ್ ಕ್ಷೇತ್ರಗಳೆನಿಸಿರುವ ಶಿವಮೊಗ್ಗ ನಗರ, ಬೆಂಗಳೂರಿನ ಬ್ಯಾಟರಾಯನಪುರ, ರಾಜರಾಜೇಶ್ವರಿನಗರ, ಸಾಗರ, ಸೊರಬ, ಹರಪನಹಳ್ಳಿ , ಬಳ್ಳಾರಿ ನಗರ, ಬಳ್ಳಾರಿ ಗ್ರಾಮಾಂತರ, ಮೈಸೂರಿನ ಕೃಷ್ಣರಾಜ, ಹನೂರು, ಗೋವಿಂದರಾಜನಗರ ಸೇರಿದಂತೆ ಮತ್ತಿತರ ಕೆಲವು ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಸರ್ವಸಮ್ಮತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.

ಯಾರಿಗೆ ಟಿಕೆಟ್ ನೀಡಿದರೂ ಬಂಡಾಯವೇಳದೆ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ಗೆಲುವಿಗೆ ಎಲ್ಲರೂ ಕೈ ಜೋಡಿಸಬೇಕು. ಇದಕ್ಕಾಗಿ ಯವುದೇ ತ್ಯಾಗ ಮಾಡಲು ಪಕ್ಷದ ನಿಷ್ಠಾವಂತರು ಸಿದ್ದರಾಗಬೇಕೆಂಬ ಸಂದೇಶವನ್ನು ಜಾವಡೇಕರ್ ಹಾಗೂ ಯಡಿಯೂರಪ್ಪ ನೀಡಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದರೆ ಕೆಲವರು ತ್ಯಾಗ ಮಾಡಬೇಕಾಗುತ್ತದೆ. ಟಿಕೆಟ್ ಕೈ ತಪ್ಪಿದವರು ಬಂಡಾಯ ಸಾರಬಾರದು. ಪಕ್ಷವು ಅವರ ಸೇವೆಯನ್ನು ಗುರುತಿಸಿ ಸೂಕ್ತ ಕಾಲದಲ್ಲಿ ಸೂಕ್ತ ಹುದ್ದೆಯನ್ನು ನೀಡಲಿದೆ.

ಇದಕ್ಕೆ ಎಲ್ಲರೂ ಬದ್ಧರಾಗಬೇಕು. ಬಂಡಾಯ ಅಭ್ಯರ್ಥಿಗಳ ಮನವೊಲಿಕೆಯನ್ನು ಯಡಿಯೂರಪ್ಪನವರೇ ನಿಭಾಯಿಸಬೇಕೆಂ ಮನವಿಯನ್ನು ಮಾಡಿದ್ದಾರೆ. ಕೋರ್ ಕಮಿಟಿಯಲ್ಲಿ ಚರ್ಚಿಸಲಾಗಿರುವ ಅಭಿಪ್ರಾಯವನ್ನು ನಾಳೆ ದೆಹಲಿಗೆ ತೆರಳಲಿರುವ ಯಡಿಯೂರಪ್ಪ ಸಂಸದೀಯ ಮಂಡಳಿ ಮುಂದಿಡಲಿದ್ದಾರೆ. ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಹಸಿರು ನಿಶಾನೆ ದೊರೆಯಲಿದೆ.

Facebook Comments

Sri Raghav

Admin