ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಬ್ರಿಗೇಡ್ ಕುರಿತು ಬಿಸಿ ಬಿಸಿ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

yaddyurappa-eshwarappa
ಬೆಂಗಳೂರು, ಅ.6- ರಾಜ್ಯಾಧ್ಯಕ್ಷ ಬಿ.ಎಸ್.ಯಡಿ ಯೂರಪ್ಪ ಮತ್ತು ಕೆ.ಎಸ್. ಈಶ್ವರಪ್ಪ ನಡುವೆ ಶೀತಲ ಸಮರ ನಡೆಯುತ್ತಿರುವ ಸಂದರ್ಭದಲ್ಲೇ ಇಂದು ಬಿಜೆಪಿಯ ಮಹತ್ವದ ಕೋರ್ ಕಮಿಟಿ ಸಭೆ ನಡೆಯಿತು.ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ ನಡೆದ ಎರಡನೆ ಕೋರ್ ಕಮಿಟಿ ಸಭೆಯಲ್ಲಿ ಮುಖ್ಯವಾಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಹಾಗೂ ಪಕ್ಷದ ಸಂಘಟನೆ ಕುರಿತಂತೆ ಚರ್ಚೆ ನಡೆಯಿತು. ಕೋರ್ ಕಮಿಟಿ ಸದಸ್ಯರಾದ ಅನಂತ್‍ಕುಮಾರ್, ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್, ಈಶ್ವರಪ್ಪ, ಸಂತೋಷ್, ಸಿ.ಎಂ.ಉದಾಸಿ, ಸಂತೋಷ್, ಅರವಿಂದ ಲಿಂಬಾವಳಿ, ಆರ್.ಅಶೋಕ್ ಸೇರಿದಂತೆ ಬಹುತೇಕ ಎಲ್ಲ ಸದಸ್ಯರೂ ಪಾಲ್ಗೊಂಡಿದ್ದರು.ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮುಖ್ಯವಾಗಿ ಈಶ್ವರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಸಂಗೊಳ್ಳಿ ರಾಯಣ್ಣ ಬ್ರಿಗೆಡ್ ಭಾರೀ ಸದ್ದು ಮಾಡಿದೆ ಎನ್ನಲಾಗಿದೆ.

ಈಗಾಗಲೇ ಕೇಂದ್ರ ವರಿಷ್ಠರು ರಾಜ್ಯಾಧ್ಯಕ್ಷರ ತೀರ್ಮಾನಕ್ಕೆ ವಿರುದ್ಧವಾಗಿ ಯಾರೊಬ್ಬರೂ ನಡೆದುಕೊಳ್ಳಬಾರದೆಂದು ಸ್ಪಷ್ಟ ಸೂಚನೆ ಕೊಟ್ಟಿದ್ದರು. ಇದನ್ನೇ ಅಸ್ತ್ರವಾಗಿಟ್ಟುಕೊಂಡಿದ್ದ ಯಡಿಯೂರಪ್ಪ ಯಾವ ಕಾರಣಕ್ಕಾಗಿ ಈ ಸಂಘಟನೆಯನ್ನು ಹುಟ್ಟುಹಾಕಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.ಪಕ್ಷದಲ್ಲಿ ವಿವಿಧ ಮೋರ್ಚಾಗಳಿವೆ. ಅದರಡಿಯಲ್ಲಿ ಸಮಾವೇಶ ನಡೆಸುವುದರ ಮೂಲಕ ಪಕ್ಷ ಸಂಘಟನೆಗೂ ಒತ್ತು ನೀಡಬಹುದು. ಪಕ್ಷದ ಚಿಹ್ನೆ, ಬ್ಯಾನರ್ ಹಾಗೂ ಕಾರ್ಯಕರ್ತರು ಯಾವುದನ್ನೂ ಬಳಸದೆ ವೈಯಕ್ತಿಕ ಹಿತಾಸಕ್ತಿಗಾಗಿ ಸಂಗೊಳ್ಳಿ ರಾಯಣ್ಣ ಬ್ರಿಗೆಡ್ ಹುಟ್ಟುಹಾಕಿರುವುದು ಸರಿಯಲ್ಲ ಎಂದು ಬಿಎಸ್‍ವೈ ಆಕ್ಷೇಪಿಸಿದ್ದಾರೆ.

ಇದಕ್ಕೆ ಪ್ರತ್ಯುತ್ತರ ನೀಡಿದ ಈಶ್ವರಪ್ಪ, ರಾಯಣ್ಣ ಬ್ರಿಗೆಡ್ ಮೂಲಕ ನಾನು ಹಿಂದುಳಿದ ಮತ್ತು ದಲಿತ ಸಮುದಾಯದ ಸಂಘಟನೆ ಮಾಡುತ್ತಿದ್ದೇನೆ. ಮುಂದೆ 2018ರ ವಿಧಾನಸಭೆ ಚುನಾವಣೆಯಲ್ಲಿ ಇದು ಪಕ್ಷಕ್ಕೆ ಆನೆಬಲ ತರಲಿದೆ.ಕನಿಷ್ಟ 40 ರಿಂದ 50 ವಿಧಾನಸಭಾ ಕ್ಷೇತ್ರಗಳಲ್ಲಿ ರಾಯಣ್ಣ ಬ್ರಿಗೆಡ್ ಕಾರ್ಯಕರ್ತರು ಸಕ್ರಿಯವಾಗಿ ಪಕ್ಷಕ್ಕೆ ದುಡಿಯಲಿದ್ದಾರೆ. ನಾನು ನನ್ನ ವೈಯಕ್ತಿಕ ಹಿತಾಸಕ್ತಿಗಾಗಿ ಈ ಸಂಘಟನೆಯಲ್ಲಿ ತೊಡಗಿಕೊಂಡಿದ್ದೇನೆ ಎಂದು ಹೇಳುತ್ತಿರುವುದು ಸರಿಯಲ್ಲ. ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ಪಕ್ಷ ವಿರೋಧಿ ಚಟುವಟಿಕೆ ನನ್ನ ಕೊನೆ ಉಸಿರಿರುವವರೆಗೂ ನಡೆಸುವುದಿಲ್ಲ ಎಂದು ಶಪಥ ಮಾಡಿದರು.

ಪದಾಧಿಕಾರಿಗಳ ನೇಮಕ ಗೊಂದಲ: ಇದೇ ವೇಳೆ ಪದಾಧಿಕಾರಿಗಳ ನೇಮಕದ ಬಗ್ಗೆಯೂ ಸಭೆಯಲ್ಲಿ ಪ್ರತಿಧ್ವನಿಸಿದೆ. ಕೆಜೆಪಿಯಲ್ಲಿ ಗುರುತಿಸಿಕೊಂಡವರನ್ನು ಮುಖ್ಯವಾಹಿನಿಗೆ ತರುವ ಮೂಲಕ ಪಕ್ಷದ ಕಾರ್ಯಕರ್ತರನ್ನೇ ಕಡೆಗಣಿಸಲಾಗಿದೆ. ಇದರಿಂದ ಅನೇಕರು ಅಸಮಾಧಾನಗೊಂಡು ಪಕ್ಷದ ಚಟುವಟಿಕೆಗಳಿಂದ ವಿಮುಖರಾಗುತ್ತಿದ್ದಾರೆ ಎಂದು ಕೆಲವರು ಆಕ್ಷೇಪಿಸಿದರು.ಈ ಹಂತದಲ್ಲಿ ಯಡಿಯೂರಪ್ಪ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ಐದಾರು ಜಿಲ್ಲೆಗಳಲ್ಲಿ ಮಾತ್ರ ಕೆಜೆಪಿಯಿಂದ ಬಿಜೆಪಿಗೆ ವಲಸೆ ಬಂದವರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಲಾಗಿದೆ. ಉಳಿದಂತೆ 25ಕ್ಕೂ ಹೆಚ್ಚು ಜಿಲ್ಲೆಗಳಿಗೆ ಮೂಲ ಕಾರ್ಯಕರ್ತರನ್ನೇ ನೇಮಿಸಲಾಗಿದೆ.

ಯಾರಲ್ಲೂ ಅಸಮಾಧಾನವಿಲ್ಲದಿದ್ದರೂ ಕೆಲವರು ಉದ್ದೇಶಪೂರ್ವಕವಾಗಿಯೇ ಗೊಂದಲ ಸೃಷ್ಟಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು. ಪದಾಧಿಕಾರಿಗಳ ನೇಮಕಾತಿ ಮುಗಿದ ಅಧ್ಯಾಯ. ಈಗಾಗಲೇ ರಾಷ್ಟ್ರೀಯ ನಾಯಕರೇ ಸ್ಪಷ್ಟ ಸೂಚನೆ ಕೊಟ್ಟು ರಾಜ್ಯಾಧ್ಯಕ್ಷರ ತೀರ್ಮಾನವನ್ನು ಯಾರೊಬ್ಬರೂ ಪ್ರಶ್ನಿಸಬಾರದು ಎಂದು ಆದೇಶ ಮಾಡಿದ್ದಾರೆ.ಹಾಗಿದ್ದೂ ಕೆಲವರು ತಮ್ಮ ಹಿಂಬಾಲಕರಿಗೆ ಸ್ಥಾನ ಸಿಕ್ಕಿಲ್ಲ ಎಂಬ ಒಂದೇ ಕಾರಣಕ್ಕಾಗಿ ಕಾರ್ಯಕರ್ತರನ್ನು ಛೂ ಬಿಡುವ ಕೆಲಸ ಮಾಡುತ್ತಿದ್ದಾರೆ.ನಮ್ಮ ಪಕ್ಷ 2018ರ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಬೇಕು. ಏನೇ ಅಸಮಾಧಾನ, ಗೊಂದಲ ಇದ್ದರೂ ಎಲ್ಲವನ್ನೂ ಬದಿಗೊತ್ತಿ ಇನ್ನು ಮುಂದೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳೋಣ. ಎಲ್ಲರೂ ಒಗ್ಗಟ್ಟಾಗಿರುವ ತೀರ್ಮಾನವನ್ನು ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಬಹುತೇಕ ಸದಸ್ಯರು ಇದಕ್ಕೆ ಒಪ್ಪಿಗೆಯನ್ನೂ ಸಹ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin