ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ, ಏನಿದೆ ಸ್ಪೆಷಲ್..?

ಈ ಸುದ್ದಿಯನ್ನು ಶೇರ್ ಮಾಡಿ

BJP--01

ಬೆಂಗಳೂರು, ಮೇ 4- ಅನ್ನದಾತರ ಸಾಲದ ಹೊರೆ ನೀಗಿಸಲು ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರಿ ಸಂಘಗಳಲ್ಲಿರುವ ರೈತರ ಒಂದು ಲಕ್ಷದವರೆಗಿನ ಸಾಲಮನ್ನಾ, 20 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತರಿಗೆ 10 ಸಾವಿರ ಆರ್ಥಿಕ ನೆರವು ನೀಡುವ ನೇಗಿಲ ಯೋಗಿ ಯೋಜನೆ, ಇಂದಿರಾ ಕ್ಯಾಂಟಿನ್ ಬದಲು ಅನ್ನಪೂರ್ಣ ಯೋಜನೆ ಜಾರಿ, ಎಲ್ಲ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್, ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಮಾಂಗಲ್ಯ ಭಾಗ್ಯ ಯೋಜನೆ, ಅಧಿಕಾರಕ್ಕೆ ಬಂದ ಒಂದು ತಿಂಗಳೊಳಗಾಗಿ ಎಸಿಬಿ ರದ್ದು, ಲೋಕಾಯುಕ್ತರಿಗೆ ಸಂಪೂರ್ಣ ಅಧಿಕಾರ ಸೇರಿದಂತೆ ಹತ್ತು-ಹಲವು ಭರವಸೆಗಳನ್ನು ಇಂದು ಬಿಡುಗಡೆ ಮಾಡಿದ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ರಾಜ್ಯದ ಜನರಿಗೆ ನೀಡಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಕಚೇರಿಯಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಭರವಸೆಗಳ ಮಹಾಪೂರವನ್ನೇ ಹರಿಸಿದೆ.  ರೈತರ ಕಲ್ಯಾಣ, ರಾಜ್ಯದ ಕಲ್ಯಾಣ, ದಕ್ಷ ಆಡಳಿತ, ಸುರಕ್ಷತಾ ಕರ್ನಾಟಕ, ಉಜ್ವಲ ಭವಿಷ್ಯದೆಡೆಗೆ ಕರ್ನಾಟಕದ ಯುವಜನತೆ, ಎಲ್ಲರ ಜತೆಗೆ ಎಲ್ಲರ ವಿಕಾಸ ಸೇರಿದಂತೆ ಹಲವು ಯೋಜನೆಗಳನ್ನುಬಿಜೆಪಿ ರೂಪಿಸಿದೆ. ರೈತರು, ಮಹಿಳೆಯರು, ಯುವಜನರ ಮತ ಸೆಳೆಯುವ ದೃಷ್ಟಿಯಲ್ಲಿ ಮಹತ್ವದ ಯೋಜನೆಗಳನ್ನು ಬಿಜೆಪಿ ಬಿಡುಗಡೆ ಮಾಡಿದೆ. ಕಾಂಗ್ರೆಸ್ ಸರ್ಕಾರ ದುರ್ಬಲಗೊಳಿಸಿದ್ದ ಸಕಾಲ ಯೋಜನೆಯನ್ನು ಮತ್ತೆ ಪ್ರಬಲಗೊಳಿಸಲು ನಿರ್ಧರಿಸಿದೆ.

ಪಕ್ಷ ಅಧಿಕಾರಕ್ಕೆ ಬಂದರೆ ಮೊದಲ ಸಂಪುಟ ಸಭೆಯಲ್ಲೇ ಲೋಕಾಯುಕ್ತವನ್ನು ಅದರ ಸಂಪೂರ್ಣ ಅಧಿಕಾರದೊಂದಿಗೆ ಮರುಸ್ಥಾಪನೆ ಮಾಡುವ ಭರವಸೆಯನ್ನು ಬಿಜೆಪಿ ನೀಡಿದೆ. ಭ್ರಷ್ಟಾಚಾರದ ವಿರುದ್ಧ ದೂರು ನೀಡಲು ನಾಗರಿಕರಿಗೆ ಸಹಾಯವಾಗುವಂತೆ ನೇರವಾಗಿ ಮುಖ್ಯಮಂತ್ರಿ ಕಚೇರಿ ಅಡಿ 2್ಡ47 ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಪ್ರಾರಂಭಿಸಲು ನಿರ್ಧರಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವ ಸರ್ಕಾರಿ ಅಧಿಕಾರಿಗಳಿಗಾಗಿ ಏಕೀಕೃತ ವಸತಿ ಸಮುಚ್ಚಯಗಳನ್ನು ರಚಿಸಲಾಗುವುದು ಎಂದು ಹೇಳಿದೆ.

ಭಾಗ್ಯಲಕ್ಷ್ಮಿ ಯೋಜನೆಯಡಿ ಇದ್ದ 1 ಲಕ್ಷ ರೂ. ಬಾಂಡ್‍ಅನ್ನು 2 ಲಕ್ಷ ರೂ.ಗೆ ಏರಿಸಲು ನಿರ್ಧರಿಸಿದೆ. ಸರ್ಕಾರಿ ಕಾಲೇಜುಗಳಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಅಮರಶಿಲ್ಪಿ ಜಕಣಾಚಾರಿ ಜಯಂತಿ ಆಚರಣೆ, ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಉಚಿತ ನ್ಯಾಪ್‍ಕಿನ್ ವಿತರಣೆ, ಜಿಲ್ಲಾ ಕೇಂದ್ರದಲ್ಲಿ 2, ತಾಲೂಕಿನಲ್ಲಿ 1 ಅನ್ನಪೂರ್ಣ ಕ್ಯಾಂಟಿನ್ ಆರಂಭ, ರೇಷ್ಮೆ ಬೆಳೆಗಾರರಿಗೆ 75 ಸಾವಿರದಿಂದ 1 ಲಕ್ಷದವರೆಗೆ ಸಬ್ಸಿಡಿ, ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆ ಜಾರಿ, ಪ್ರತಿ ಮನೆಗೆ ಸೌಭಾಗ್ಯ ಯೋಜನೆಯಡಿ ವಿದ್ಯುತ್, ಮಂಗಳೂರಿನಲ್ಲಿ ಎನ್‍ಐಎ ತನಿಖಾ ಸಂಸ್ಥೆ ಸ್ಥಾಪನೆ, ಬೆಂಗಳೂರಿನಲ್ಲಿ ಸಂಕಷ್ಟದಲ್ಲಿರುವ ಮಹಿಳೆಯರಿಗಾಗಿ ಕಿತ್ತೂರು ರಾಣಿ ಚೆನ್ನಮ್ಮ ಫ್ಲೈಯಿಂಗ್ ಸ್ಕ್ವಾಡ್ ರಚನೆ, ಎಲ್ಲ ಜಿಲ್ಲೆಗಳಲ್ಲಿ ಲಾಲ್‍ಬಾಗ್ ಮಾದರಿ ಉದ್ಯಾನವನ ರಚನೆ, ದೇವನಹಳ್ಳಿಯಲ್ಲಿ ಡಾ.ರಾಜ್‍ಕುಮಾರ್ ಮೆಗಾಫಿಲಂ ಸಿಟಿ ಸ್ಥಾಪನೆ, ಎಟಿಎಂ ಇಲ್ಲದ ಗ್ರಾಮಗಳಲ್ಲಿ ಎಟಿಎಂ ಸ್ಥಾಪನೆ ಸೇರಿದಂತೆ ಹಲವಾರು ಮಹತ್ವದ ಯೋಜನೆಗಳನ್ನು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ.

ರೈತರ ವಿದ್ಯುತ್ ಪಂಪ್‍ಸೆಟ್‍ಗಳಿಗೆ 3ಫೇಸ್ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದೆ. ಬೆಂಗಳೂರಿನಲ್ಲಿ ಕರ್ನಾಟಕ ಫೊರೆನ್ಸಿಕ್ ಸೈನ್ಸ್ ಯೂನಿವರ್ಸಿಟಿ ಸ್ಥಾಪನೆ ಮತ್ತು ಅದರ ಭಾಗವಾಗಿ ವಿಶ್ವದರ್ಜೆಯ ಸೈಬರ್ ಫೊರೆನ್ಸಿಕ್ ಪ್ರಯೋಗಾಲಯ ನಿರ್ಮಾಣ, ಮೈಸೂರು, ಧಾರವಾಡ, ಕಲಬುರಗಿ ಮತ್ತು ಮಂಗಳೂರಿನಲ್ಲಿ ನಾಲ್ಕು ಹೊಸ ಸೈಬರ್ ಫೊರೆನ್ಸಿಕ್ ಪ್ರಯೋಗಾಲಯಗಳ ಸ್ಥಾಪನೆ ಸೇರಿದಂತೆ ಹತ್ತು-ಹಲವು ಕಾನೂನು ಸುವ್ಯವಸ್ಥೆಗೆ ದಿಟ್ಟ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದೆ. ಸರ್ಕಾರ ಅಸ್ತಿತ್ವಕ್ಕೆ ಬಂದ ನೂರು ದಿನಗಳೊಳಗಾಗಿ ಕಾಂಗ್ರೆಸ್ ಸರ್ಕಾರದ ಆರ್ಥಿಕ ನಿರ್ವಹಣೆ ಕುರಿತು ಶ್ವೇತಪತ್ರ ಬಿಡುಗಡೆ ಮಾಡಲಾಗುವುದು. ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳ ವೆಚ್ಚವನ್ನು ಒಂದೇ ಬಾರಿಯ ಶೂನ್ಯ ಬೇಸ್ ಬಜೆಟ್ ವ್ಯವಹಾರದ ಮೂಲಕ ತಾರ್ಕಿಕಗೊಳಿಸುವುದು ಸೇರಿದಂತೆ ಹಲವು ಹಣಕಾಸಿನ ನಿರ್ವಹಣೆ ಯೋಜನೆಗಳನ್ನು ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿದೆ.

371(ಜೆ) ವಲಯದ ನಿವಾಸಿಗಳಿಗೆ ಮೀಸಲಾಗಿರುವ ಉದ್ಯೋಗವನ್ನು ತ್ವರಿತವಾಗಿ ಭರ್ತಿ ಮಾಡಲಾಗುವುದು. ವಿಶೇಷ ಸ್ಥಾನಮಾನ ಸಂಪೂರ್ಣ ಬಳಕೆ, ಹೊಸಪೇಟೆಯಿಂದ ಹೈದರಾಬಾದ್‍ವರೆಗಿನ ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರಗಿ ಮತ್ತು ಬೀದರ್ ಮೂಲಕ ಹಾದು ಹೋಗುವ ಹೈದರಾಬಾದ್ ಕರ್ನಾಟಕ ಕೈಗಾರಿಕಾ ಮೆಗಾ ಕಾರಿಡಾರ್ ಸ್ಥಾಪನೆ, ಕಲಬುರಗಿ ಐಟಿ ಪಾರ್ಕ್ ಮತ್ತು ತೊಗರಿ ಪಾರ್ಕ್ ಪೂರ್ಣಗೊಳಿಸುವುದು, ಹೈದರಾಬಾದ್ ಕರ್ನಾಟಕದ ಜಿಲ್ಲಾ ಪಂಚಾಯಿತಿಗಳಿಗೆ 200 ಕೋಟಿ ನೀಡುವುದು ಸೇರಿದಂತೆ ಹೈದರಾಬಾದ್ ಕರ್ನಾಟಕ ವಿಕಾಸಕ್ಕೆ ಹಲವು ಯೋಜನೆಗಳನ್ನು ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಿಸಿದೆ.

ರಾಜ್ಯದ ಎಲ್ಲ ಪ್ರದೇಶಗಳ ಅಭಿವೃದ್ಧಿಯಲ್ಲಿ ಸಮಾನತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ 30 ಜಿಲ್ಲೆಗಳ 30 ಹಬ್ ಮೆಗಾ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲಾಗುವುದು. ರಾಜ್ಯದ ಎಲ್ಲ ಜಿಲ್ಲೆಗಳನ್ನು ಸಂಪರ್ಕಿಸುವ ಷಟ್ಪಥ ಕರ್ನಾಟಕ ಮಾಲಾ ಹೆದ್ದಾರಿಯ ನಿರ್ಮಾಣ, ಭಾರತ್ ಮಾಲಾ ಮತ್ತು ಸಾಗರ್ ಮಾಲಾ, ಡಿಪಿಆರ್ ಹಾಗೂ ಅದರಡಿ ಪ್ರಗತಿಯಲ್ಲಿರುವ ಯೋಜನೆಗಳನ್ನು ಚುರುಕುಗೊಳಿಸುವುದು ಸೇರಿದಂತೆ ಕರ್ನಾಟಕದ ಸರ್ವಸ್ಪರ್ಶಿ ಅಭ್ಯುದಯಕ್ಕೆ ಕಾರ್ಯತಂತ್ರಗಳನ್ನು ಪ್ರಣಾಳಿಕೆಯಲ್ಲಿ ರೂಪಿಸಿದೆ.

ಅಡಿಕೆ, ತೆಂಗು ಸಂಶೋಧನಾ ಕೇಂದ್ರಗಳ ಸ್ಥಾಪನೆ, ಭತ್ತ, ಮೆಕ್ಕೆಜೋಳ ಖರೀದಿ, ಗೋಡಂಬಿ ಬೆಳೆಗೆ ಉತ್ತೇಜನ, ತೊಗರಿ ಪಾರ್ಕ್ ಪೂರ್ಣಗೊಳಿಸುವುದು, ಮಹಿಳೆಯರೇ ನಡೆಸುವ ಅತಿದೊಡ್ಡ ಸಹಕಾರಿ ಸಂಸ್ಥೆಗಳ ಮಾರಾಟ ಮಳಿಗೆಗಳ ನಿರ್ಮಾಣಕ್ಕೆ 10 ಸಾವಿರ ಕೋಟಿ ಸ್ತ್ರೀ ಉನ್ನತ ನಿಧಿ ಸ್ಥಾಪನೆ, ಹೈನುಗಾರಿಕೆ ಕ್ಷೇತ್ರದಲ್ಲಿ ಮಹಿಳೆಯರ ಪ್ರೋತ್ಸಾಹಕ್ಕಾಗಿ 100 ಕೋಟಿ ನಿಧಿ ಮೀಸಲು, ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಸ್ಮಾರ್ಟ್‍ಫೊೀನ್, ರಾಜ್ಯದಲ್ಲಿರುವ ಎಲ್ಲ ಕೆರೆಗಳ ಪುನಶ್ಚೇತನಕ್ಕೆ ಮಿಷನ್ ಕಲ್ಯಾಣಿ ಯೋಜನೆ, ಮುಖ್ಯಮಂತ್ರಿಗಳ ಕೃಷಿ ಫೆಲೋಷಿಪ್ ಯೋಜನೆಯಡಿ ಪ್ರತಿ ವರ್ಷ 1 ಸಾವಿರ ರೈತರಿಗೆ ಇಸ್ರೋ ಮತ್ತು ಚೀನಾ ಪ್ರವಾಸ, ಕೆಎಂಎಫ್ ಮೂಲಕ ಹಣ್ಣು ಮತ್ತು ತರಕಾರಿಗಳ ರಫ್ತಿನ ಉತ್ತೇಜನಕ್ಕಾಗಿ 3 ಸಾವಿರ ಕೋಟಿ ನಿಧಿ, ಪಶು ಸಂಗೋಪನೆ, ಹೈನುಗಾರಿಕೆಗೆ 3 ಸಾವಿರ ಕೋಟಿಯ ಕಾಮಧೇನು ಅನುದಾನ, ಗ್ರಾಮೀಣ ಪ್ರದೇಶಗಳಲ್ಲಿ ಪಶು ವೈದ್ಯಕೀಯ ಸೇವೆ ಒದಗಿಸಲು 1 ಸಾವಿರ ಕೋಟಿ ಮೀಸಲು, ಬಿಎಸ್‍ವೈ ಪ್ರಾರಂಭಿಸಿದ್ದ ಗೋ ಸೇವಾ ಆಯೋಗ ಪುನರಾರಂಭ ಸೇರಿದಂತೆ ಭಾರೀ ಭರವಸೆಗಳನ್ನು ಬಿಜೆಪಿ ಜನರ ಮುಂದೆ ಇಟ್ಟಿದೆ.

ಮಾಜಿ ಸೈನಿಕರಿಗೆ ಪೊಲೀಸ್ ಇಲಾಖೆಯಲ್ಲಿ ನೇಮಕಕ್ಕೆ ಅವಕಾಶ, ತುರ್ತು ಪರಿಸ್ಥಿತಿ ಹೋರಾಟಗಾರರಿಗೆ ಸರ್ಕಾರಿ ಸೌಲಭ್ಯ, ಯುವ ವಕೀಲರಿಗೆ ಪ್ರೋತ್ಸಾಹ, ವಿಧವೆಯರು, ಪರಿತ್ಯಕ್ತ ಮಹಿಳೆಯರು, ನಿರ್ಗತಿಕರು, ಹಿರಿಯ ನಾಗರಿಕರು ಮುಂತಾದವರಿಗೆ ನೆರವು ನೀಡುವ ವಾತ್ಸಲ್ಯ ಗ್ರಾಮ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಬಿಜೆಪಿ ಘೋಷಿಸಿದೆ.

Facebook Comments

Sri Raghav

Admin