ಮೈತ್ರಿ ಕುರಿತು ಮುಸ್ಲಿಂ ಬಾಂಧವರೇ ತೀರ್ಮಾನಿಸಲಿ : ಹೆಚ್ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy-JDS

ಬೆಂಗಳೂರು,ಆ.29– ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಜತೆ ಕೈ ಜೋಡಿಸಬೇಕೋ ಅಥವಾ ಬಿಜೆಪಿ ಜತೆ ಕೈ ಜೋಡಿಸಬೇಕೋ ಎಂದು ಮುಸ್ಲಿಂ ಧರ್ಮಗುರುಗಳನ್ನು ಕೇಳಲು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ನಿರ್ಧರಿಸಿದ್ದಾರೆ.  ಬಿಬಿಎಂಪಿ ಚುನಾವಣೆಯಲ್ಲಿ ಉಭಯ ಪಕ್ಷಗಳ ನಾಯಕರು ಜೆಡಿಎಸ್ ಬೆಂಬಲ ಕೋರುತ್ತಿರುವ ಹಿನ್ನೆಲೆಯಲ್ಲೇ ಮುಂದಿನ ನಾಲ್ಕೈದು ದಿನಗಳಲ್ಲಿ ಮುಸ್ಲಿಂ ಧರ್ಮಗುರುಗಳ ಮಹತ್ವದ ಸಭೆ ಕರೆದು ಅವರ ಅಭಿಪ್ರಾಯ ಪಡೆಯಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.
ಬಿಜೆಪಿಯ ಜತೆ ಸೇರಿದರೆ ನೀವು ನಮ್ಮನ್ನು ಸಾರಾಸಗಟಾಗಿ ತಿರಸ್ಕರಿಸುತ್ತೀರಿ. ಆಗ ನಾವು ಯಥಾ ಪ್ರಕಾರ ವಿಧಾನಸಭಾ ಚುನಾವಣೆಯಲ್ಲಿ ನಲವತ್ತು, ಐವತ್ತು ಸೀಟುಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗುತ್ತದೆ. ಹಾಗಂತ ಕಾಂಗ್ರೆಸ್ ಪಕ್ಷದ ಜತೆ ಕೈ ಜೋಡಿಸಿದರೆ ನಮಗೆ ಗಣನೀಯ ಪ್ರಮಾಣದ ಬೆಂಬಲ ನೀಡುತ್ತೀರಿ.ಆದರೆ ನಮ್ಮನ್ನು ಮೊದಲು ಮುಗಿಸಬೇಕು ಎಂದು ಕಾಂಗ್ರೆಸ್ ಯತ್ನಿಸುತ್ತದೆ ಎಂದು ತಮ್ಮ ರಾಜಕೀಯ ಧರ್ಮಸಂಕಟವನ್ನು ಅವರೆದುರು ತೋಡಿಕೊಳ್ಳಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ.

ಆದ್ದರಿಂದ ಮುಂದಿನ ದಿನಗಳಲ್ಲಿ ನಾವು ಯಾರ ಜತೆ ಕೈ ಜೋಡಿಸಬೇಕು ಎಂಬುದನ್ನು ನೀವೇ ಹೇಳಿ ಎಂದು ಮುಸ್ಲಿಂ ಧರ್ಮಗುರುಗಳ ಸಲಹೆ ಪಡೆಯಲು ಕುಮಾರಸ್ವಾಮಿ ನಿರ್ಧರಿಸಿದ್ದು ಈ ಬೆಳವಣಿಗೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.  ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ ಜತೆ ಕೈಜೋಡಿಸಿದರೆ ನಮಗೆ ಆಗುವ ಲಾಭ ಏನಿಲ್ಲ.ಆದರೆ ಅವರ ಜತೆ ಕೈ ಜೋಡಿಸಿದರೆ ಅದನ್ನೇ ದೊಡ್ಡದು ಮಾಡಿ, ಜೆಡಿಎಸ್ ಪಕ್ಷ ಕೋಮುವಾದಿಗಳ ಜತೆ ಕೈ ಜೋಡಿಸಿದೆ ಎಂದು ಘೋಷಿಸಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಕೈ ಬಿಡುತ್ತೀರಿ.
ಒಂದು ವೇಳೆ ಕಾಂಗ್ರೆಸ್ ಜತೆ ಕೈ ಜೋಡಿಸಿದರೆ ಅವರು ಮೊದಲೇ ನಮ್ಮ ಪಕ್ಷವನ್ನು ರಾಜಕೀಯವಾಗಿ ಮುಗಿಸಿ ಮುಂದಿನ ವಿಧಾನಸಭಾ ಚುನಾವಣೆ ಎದುರಿಸಲು ಮುಂದಾಗುತ್ತಾರೆ.ಇಂತಹ ಇಕ್ಕಳದಲ್ಲಿ ಸಿಲುಕಿಕೊಂಡಿರುವ ನಾವು ಏನು ಮಾಡಬೇಕು ಅಂತ ನೀವೇ ಹೇಳಿ.

ಇವತ್ತು ಬಿಜೆಪಿ ರಾಷ್ಟ್ರದ ಅಧಿಕಾರ ಸೂತ್ರ ಹಿಡಿದಿದೆ.ಇವತ್ತು ನಾವು ಕಾಂಗ್ರಸ್ ಜತೆ ಕೈ ಜೋಡಿಸಿದರೆ ಅದು ನಮ್ಮನ್ನು ರಾಜಕೀಯವಾಗಿ ಮುಗಿಸಿ, ಬಿಜೆಪಿಯನ್ನು ಎದುರಿಸಲು ಸಜ್ಜಾಗುತ್ತದೆ.ಅಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುವುದು ನಿಶ್ಚಿತ.  ಆಗ ಕಾಂಗ್ರೆಸ್ ಪಕ್ಷವೂ ಅಧಿಕಾರದಲ್ಲಿರುವುದಿಲ್ಲ. ಜೆಡಿಎಸ್ ಕೂಡಾ ಅಧಿಕಾರದಲ್ಲಿ ಪಾಲು ಪಡೆಯಲು ಸಾಧ್ಯವಾಗುವುದಿಲ್ಲ.ಅದರ ಬದಲು ನಾವು ಬಿಜೆಪಿಯ ಜತೆ ಕೈ ಜೋಡಿಸಿ ನಡೆದರೆ ಮುಂದಿನ ವಿಧಾನಸಭಾ ಚುನಾವಣೆಯ ನಂತರ ಅಲ್ಪಸಂಖ್ಯಾತರ ಹಿತ ಕಾಯುವ ಶಕ್ತಿ ನಮಗಿರುತ್ತದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಜೆಡಿಎಸ್ ಪಕ್ಷ ಕಾಂಗ್ರೆಸ್ ಜತೆ ಕೈ ಜೋಡಿಸಬೇಕೋ ಸಬಿಜೆಪಿ ಜತೆ ಕೈ ಜೋಡಿಸಬೇಕೋ ಎಂಬ ಕುರಿತು ನೀವೇ ನಿರ್ಧರಿಸಿ ರಾಜಕೀವಾಗಿ ನಾವು ಎದುರಿಸುತ್ತಿರುವ ಧರ್ಮಸಂಕಟವನ್ನು ಪರಿಹರಿಸಿ ಎಂದು ಮುಸ್ಲಿಂ ಧರ್ಮಗುರುಗಳ ಸಲಹೆ ಪಡೆಯಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ ಎಂದು ಮೂಲಗಳು ವಿವರಿಸಿವೆ.

► Follow us on –  Facebook / Twitter  / Google+

Facebook Comments

Sri Raghav

Admin