ಬಿಜೆಪಿ ಟಿಕೆಟ್ ವಂಚಿತ ಬೇಳೂರು ಗೋಪಾಲಕೃಷ್ಣ ಕಾಂಗ್ರೆಸ್ ಸೇರ್ಪಡೆ

ಈ ಸುದ್ದಿಯನ್ನು ಶೇರ್ ಮಾಡಿ

Beluru--Gopalakrishna

ಬೆಂಗಳೂರು, ಏ.22-ಬಿಜೆಪಿ ಟಿಕೆಟ್ ವಂಚಿತ ಬೇಳೂರು ಗೋಪಾಲಕೃಷ್ಣ ಇಂದು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಮುಂತಾದ ಮುಖಂಡರ ನೇತೃತ್ವದಲ್ಲಿ ಬೇಳೂರು ಅವರಿಗೆ ಕಾಂಗ್ರೆಸ್ ಬಾವುಟ ನೀಡಿ ಪಕ್ಷಕ್ಕೆ ಬರ ಮಾಡಿಕೊಳ್ಳಲಾಯಿತು. ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವವನ್ನು ನೀಡಲಾಯಿತು. ನಂತರ ಮಾತನಾಡಿದ ಬೇಳೂರು ಗೋಪಾಲಕೃಷ್ಣ , ಬಿಜೆಪಿ ಪಕ್ಷದಲ್ಲಿ ಅತ್ಯಂತ ನೋವುಂಡು ಆ ಪಕ್ಷ ತೊರೆದು ಕಾಂಗ್ರೆಸ್ ಪಕ್ಷವನ್ನು ಯಾವುದೇ ಷರತ್ತಿಲ್ಲದೆ ಸೇರುತ್ತಿದ್ದೇನೆ. ಬಿಜೆಪಿಯವರ ತತ್ವ ಸಿದ್ದಾಂತಗಳೆಲ್ಲ ಬರೀ ಬೋಗಸ್ ಎಂದು ಆರೋಪಿಸಿದರು.

ನಮ್ಮ ಸಾಹೇಬ್ರರಾದ ಕಾಗೋಡು ತಿಮ್ಮಪ್ಪನವರು ಕಾಂಗ್ರೆಸ್‍ಗೆ ಬರುವಂತೆ ಹೇಳಿದರು. ಅದರಂತೆ ಕಾಂಗ್ರೆಸ್‍ಗೆ ಬಂದಿದ್ದೇನೆ. ಕಳೆದ 18 ವರ್ಷಗಳಿಂದ ನಮ್ಮ ಸೋದರ ಮಾವನವರಾದ ಕಾಗೋಡು ತಿಮ್ಮಪ್ಪನವರೊಂದಿಗೆ ರಾಜಕೀಯ ಜಿದ್ದಾಜಿದ್ದಿ ನಡೆಸಿದ್ದೆ. ಈಗ ಜಿದ್ದಾಜಿದ್ದಿ ಕೈಬಿಟ್ಟು ಅವರ ಗೆಲುವಿಗೆ ಸಹಕರಿಸುತ್ತೇವೆ ಎಂದರು.

ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲಿಸಲು ಶ್ರಮಿಸುತ್ತೇನೆ ಎಂದು ಹೇಳಿದ ಅವರು, ಬಿಜೆಪಿಯವರು ಕೋಮುಗಲಭೆ ಸೃಷ್ಟಿಸಿ ಬಿಲ್ಲವರು, ಈಡಿಗರನ್ನು ಬಲಿ ಹಾಕಿ ಅಧಿಕಾರವನ್ನು ಅವರೇ ಹಿಡಿಯುತ್ತಾರೆ. ಯುವಕರು ಇದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, 2004-2008ರಲ್ಲಿ ಶಾಸಕರಾದ ಬೇಳೂರು ಗೋಪಾಲಕೃಷ್ಣ ಅವರು ಕಲರ್‍ಫುಲ್ ರಾಜಕಾರಣಿ, ಅವರ ಸೇರ್ಪಡೆಯಿಂದ ನಮ್ಮ ಪಕ್ಷಕ್ಕೆ ಹೆಚ್ಚಿನ ಶಕ್ತಿ ಬಂದಿದೆ. ಮಂಗಳೂರು, ಉಡುಪಿ, ಕಾರವಾರ, ಶಿವಮೊಗ್ಗದಲ್ಲಿ ಪಕ್ಷ ಸಂಘಟನೆಗೆ ಅನುಕೂಲವಾಗಲಿದೆ ಎಂದು ಹೇಳಿದರು.

Facebook Comments

Sri Raghav

Admin