ಬಿಜೆಪಿ ಭಿನ್ನಮತ ಮತ್ತೆ ಹೈಕಮಾಂಡ್ ಅಂಗಳಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa

ಬೆಂಗಳೂರು, ಆ.8- ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಅಸಮಾಧಾನದ ಹೊಗೆ ಮತ್ತೆ ಹೈಕಮಾಂಡ್ ಅಂಗಳ ತಲುಪುವುದು ಬಹುತೇಕ ಖಚಿತವಾಗಿದೆ. ರಾಜ್ಯಾಧ್ಯಕ್ಷ  ಬಿ.ಎಸ್.ಯಡಿಯೂರಪ್ಪನವರ ಸರ್ವಾಧಿಕಾರಿ ಧೋರಣೆ ವಿರುದ್ಧ ಅಸಮಾಧಾನ ಗೊಂಡಿರುವ ಒಂದು ಬಣ, ಅವರ ವಿರುದ್ಧ ಕೇಂದ್ರದ ವರಿಷ್ಠರಿಗೆ ದೂರು ನೀಡಲು ಸಜ್ಜಾಗಿದೆ. ಇದಕ್ಕೆ ಪ್ರತಿಯಾಗಿ ಪಕ್ಷದ ಸಂಘಟನೆ ಸೇರಿದಂತೆ ತಮಗೆ ಯಾವುದೇ ರೀತಿಯಲ್ಲಿ ಸಹಕಾರ ನೀಡುತ್ತಿಲ್ಲ ಎಂದು ಬಿಎಸ್‍ವೈ ರಾಷ್ಟ್ರೀಯ ನಾಯಕರಿಗೆ ಪ್ರತಿದೂರು ನೀಡಲು ಮುಂದಾಗಿದ್ದಾರೆ.  ಹೀಗೆ ಬಿಜೆಪಿಯಲ್ಲಿ ಎರಡು ಬಣಗಳ ತಿಕ್ಕಾಟ ಹೈಕಮಾಂಡ್ ಅಂಗಳಕ್ಕೆ ತಲುಪುವುದು ಖಚಿತವಾಗಿದ್ದು, ಸಮಸ್ಯೆ ಇತ್ಯರ್ಥಪಡಿಸುವ ಹೊಣೆಗಾರಿಕೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೆಗಲೇರಿದೆ. ಈಗಾಗಲೇ ಯಡಿಯೂರಪ್ಪ ನಾಯಕತ್ವದ ವಿರುದ್ಧ ಕಿಡಿಕಾರುತ್ತಿರುವ ನಾಯಕರಾದ ಕೆ.ಎಸ್.ಈಶ್ವರಪ್ಪ, ಸಿ.ಟಿ.ರವಿ ಮತ್ತಿತರರು ರಾಜ್ಯ ಉಸ್ತುವಾರಿ ಮುರಳೀಧರ್‍ರಾವ್ ಹಾಗೂ ರಾಷ್ಟ್ರೀಯ ಅಧ್ಯಕ್ಷರಿಗೆ ದೂರು ನೀಡಲು ತೆರೆಮರೆಯಲ್ಲಿ ಸಿದ್ಧತೆ ನಡೆಸಿದ್ದಾರೆ. ತಾವು ರಾಜ್ಯಾಧ್ಯಕ್ಷರಾದ ಮೇಲೆ ಕೆಲವರು ವಿನಾಕಾರಣ ಪಕ್ಷದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದರಿಂದ ಸಂಘಟನೆ ಮೇಲೆ ಪರಿಣಾಮ ಬೀರುತ್ತಿದ್ದು, ಭಿನ್ನಮತೀಯರಿಗೆ ತಿಳಿಹೇಳುವಂತೆ ಬಿಎಸ್‍ವೈ ಬಣದವರು ಪ್ರತಿದೂರಿಗೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಈಶ್ವರಪ್ಪ ಬಣದ ವಾದವೇನು..?
ಯಡಿಯೂರಪ್ಪ ಬಿಜೆಪಿಗೆ ಮರಳಿ ರಾಜ್ಯಾಧ್ಯಕ್ಷ ರಾದ ಮೇಲೆ ತಮ್ಮ ಹಿಂದಿನ ವರ್ತನೆಯನ್ನೇ ಮುಂದುವರಿಸಿದ್ದಾರೆ. ಪ್ರತಿ ತಿಂಗಳು ಒಂದು ಬಾರಿ ಕೋರ್ ಕಮಿಟಿ ಹಾಗೂ ಪದಾಧಿಕಾರಿಗಳ ಸಭೆ ಕರೆಯಬೇಕೆಂದು ನಿರ್ದೇಶನ ನೀಡಲಾಗಿದೆ. ಆದರೂ ನೆಪಮಾತ್ರಕ್ಕೆ ಪದಾಧಿಕಾರಿಗಳ ಸಭೆ ಕರೆದಿದ್ದನ್ನು ಹೊರತುಪಡಿಸಿದರೆ ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ, ಪಕ್ಷದ ಸಂಘಟನೆ, ಜಿಲ್ಲಾ ಪ್ರವಾಸ ಹಾಗೂ ಪ್ರಮುಖ ತೀರ್ಮಾನಗಳ ವಿಷಯದಲ್ಲಿ ಯಡಿಯೂರಪ್ಪ ಏಕಪಕ್ಷೀಯ ನಿರ್ಧಾರ ಕೈಗೊಳ್ಳು ತ್ತಿದ್ದಾರೆ ಎಂಬುದು ಈಶ್ವರಪ್ಪ ಬಣದ ವಾದ.
ಮಡಿಕೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಡಿವೈಎಸ್‍ಪಿ ಎಂ.ಕೆ.ಗಣಪತಿ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಪಕ್ಷ ತೀರ್ಮಾನಿಸಿತ್ತು. ಇದರಂತೆ ಮಡಿಕೇರಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ದಿಢೀರನೆ ಬೇರೊಂದು ಕಾರಣ ಹೇಳಿ ಯಾತ್ರೆ ರದ್ದುಪಡಿಸ ಲಾಗಿತ್ತು. ಯಾತ್ರೆಯನ್ನು ಯಾವ ಕಾರಣಕ್ಕೆ ರದ್ದುಪಡಿಸಲಾಯಿತು ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಕೇವಲ ಗಣಪತಿ ಆತ್ಮಹತ್ಯೆ ಪ್ರಕರಣವಲ್ಲದೆ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕೆಂಬ ವಿಷಯದಲ್ಲಿ ಯಡಿಯೂರಪ್ಪ ಮಧ್ಯಪ್ರವೇಶಿಸಿ ನಮ್ಮನ್ನು ಕಟ್ಟಿಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ವರಿಷ್ಠರು ನಿರ್ದೇಶನ ನೀಡಬೇಕೆಂದು ಅಸಮಾಧಾನಗೊಂಡ ನಾಯಕರು ಮನವಿ ಮಾಡಲಿದ್ದಾರೆ.
ಬಿಎಸ್‍ವೈ ವಾದವೇನು..?
ನಾನು ರಾಜ್ಯಾಧ್ಯಕ್ಷನಾಗಿದ್ದು ಕೆಲವರಿಗೆ ಇಷ್ಟವಿಲ್ಲ. ಪದಾಧಿಕಾರಿಗಳ ನೇಮಕಾತಿಯಲ್ಲಿ ತಮ್ಮ ಬಣದವರಿಗೆ ಆದ್ಯತೆ ನೀಡಿದ್ದೇವೆ ಎಂದು ಕೆಲವರು ಪಕ್ಷದಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕೆಜೆಪಿಯಿಂದ ವಲಸೆ ಬಂದ ಎಂಟು ಮಂದಿಯನ್ನು ಮಾತ್ರ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಇನ್ನುಳಿದ ಜಿಲ್ಲೆಗಳಿಗೆ ನೇಮಕ ಮಾಡುವ ವೇಳೆ ವರಿಷ್ಠರ ಜತೆಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ.  ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನೇ ದೊಡ್ಡದು ಮಾಡಿ ನನ್ನ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ನಡೆಯುತ್ತಿದೆ. ವರಿಷ್ಠರ ನಿರ್ದೇಶನದಂತೆ ನಾನು ಸಂಘಟನೆಯಲ್ಲಿ ತೊಡಗಿಕೊಂಡಿದ್ದೇನೆ. ಜಿಲ್ಲಾ ಪ್ರವಾಸ, ಕಾರ್ಯಕರ್ತರ ಭೇಟಿ, ಸರ್ಕಾರದ ವೈಫಲ್ಯಗಳ ವಿರುದ್ಧ ಹೋಬಳಿ ಮಟ್ಟದಲ್ಲಿ ಜಿಲ್ಲಾ ಮಟ್ಟದವರೆಗೂ ಹೋರಾಟ ಸೇರಿದಂತೆ ಯಾವುದೇ ವಿಷಯದಲ್ಲೂ ನಾನು ಹಿಂದೆ ಬಿದ್ದಿಲ್ಲ.

Facebook Comments

Sri Raghav

Admin