ಬಿಜೆಪಿ ಮಂಡಿಸಿದ್ದ ಸಚಿವರ ವಿರುದ್ಧದ ಭ್ರಷ್ಟಾಚಾರ ನಿಲುವಳಿ ಸೂಚನೆ ತಿರಸ್ಕೃತ

ಈ ಸುದ್ದಿಯನ್ನು ಶೇರ್ ಮಾಡಿ

Session-Belagavi-000001

ಬೆಂಗಳೂರು, ಫೆ.13-ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಸಚಿವರ ಮೇಲಿನ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಪ್ರತಿಪಕ್ಷ ಬಿಜೆಪಿ ನಿಲುವಳಿ ಸೂಚನೆಗೆ ಸಲ್ಲಿಸಿದ ನೋಟಿಸ್‍ನಲ್ಲಿ ದಿನಾಂಕ ನಮೂದಿಸದ ಕಾರಣ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವಕಾಶ ನೀಡದೆ ತಿರಸ್ಕರಿಸಿದ ಘಟನೆ ಮೇಲ್ಮನೆಯಲ್ಲಿ ನಡೆಯಿತು. ಕಲಾಪದ ಆರಂಭದಲ್ಲಿ ಸರ್ಕಾರದ ಸಚಿವರು ಹಲವು ಕಾಂಗ್ರೆಸ್ ಶಾಸಕರ ಮನೆ ಮೇಲೆ ಐಟಿ ದಾಳಿ ನಡೆದಿದೆ. ದಾಳಿ ವೇಳೆ ಕೋಟ್ಯಂತರ ರೂ. ಹಣ, ಒಡವೆ ಪತ್ತೆಯಾಗಿದೆ. ಈ ವಿಷಯ ಪ್ರಸ್ತಾಪಿಸಲು ನಿಲುವಳಿ ಸೂಚನೆಗೆ ಅವಕಾಶ ನೀಡಬೇಕೆಂದು ಪ್ರತಿಪಕ್ಷದ ಸದಸ್ಯ ಬಿ.ಜೆ.ಪುಟ್ಟಸ್ವಾಮಿ ಆಗ್ರಹಿಸಿದರು.

ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಚರ್ಚೆಯಾಗಬೇಕಿದೆ. ಇದಕ್ಕೆ ಅವಕಾಶ ನೀಡಿ ಎಂದು ಹೇಳಿದರು. ಬಿಜೆಪಿ ಪ್ರಸ್ತಾಪಕ್ಕೆ ಕಾಂಗ್ರೆಸ್ ಸದಸ್ಯರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಭಾರೀ ಭ್ರಷ್ಟಾಚಾರ ನಡೆದಿರುವ ಬಗ್ಗೆ ವರದಿಯಾಗಿದೆ. ಈ ಬಗ್ಗೆ ನಿಲುವಳಿ ಮಂಡಿಸಿದ್ದು, ಚರ್ಚೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು.   ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಎಚ್.ಎಂ.ರೇವಣ್ಣ, ವಿ.ಎಸ್.ಉಗ್ರಪ್ಪ, ಶರಣ ಮಟ್ಟೂರು, ಬಸವರಾಜ್ ಇಟಗಿ, ಮುಖ್ಯ ಸಚೇತಕ ಐವಾನ್ ಡಿಸೋಜಾ, ಸದನದಲ್ಲಿ ಹಾಜರಿದ್ದ ಸಚಿವರು ಸೇರಿದಂತೆ ಎಲ್ಲ ಆಡಳಿತ ಪಕ್ಷದ ಸದಸ್ಯರು ಪ್ರತಿಪಕ್ಷದ ಸದಸ್ಯರ ಮೇಲೆ ಹರಿಹಾಯ್ದರು.

ಭಾರೀ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರು ನೀವು. ನಿಮಗೆ ಯಾವುದೇ ನೈತಿಕತೆ ಇಲ್ಲ ಎಂದು ರೇಗಿದರು. ಮಧ್ಯ ಪ್ರವೇಶಿಸಿದ ಸಭಾಪತಿ ಡಿ.ಎಚ್.ಶಂಕರಮೂರ್ತಿಯವರು ಪ್ರತಿಪಕ್ಷದ ಸದಸ್ಯರು ನೀಡಿರುವ ನೋಟಿಸ್‍ನಲ್ಲಿ ದಿನಾಂಕ ನಮೂದಾಗಿಲ್ಲ. ಇದನ್ನು ತಿರಸ್ಕರಿಸಿದ್ದೇನೆ ಎಂದು ಹೇಳಿದರು. ನಾಳೆ ದಿನಾಂಕ ನಮೂದಿಸಿ ನೋಟಿಸ್ ನೀಡುವುದಾಗಿ ಬಿ.ಜೆ.ಪುಟ್ಟಸ್ವಾಮಿ ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin