ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಚಕ್ರಾಧಿಪತ್ಯ ವಿಸ್ತರಣೆಗೆ ಕಾರ್ಯತಂತ್ರ

ಈ ಸುದ್ದಿಯನ್ನು ಶೇರ್ ಮಾಡಿ

BJP-national-executive

ಭುವನೇಶ್ವರ, ಏ.15- ಮುಂಬರುವ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ಪ್ರದೇಶಗಳಲ್ಲೂ ತನ್ನ ನೆಲೆಯನ್ನು ಸುಭದ್ರಗೊಳಿಸಲು ಹಾಗೂ ಪಕ್ಷದ ಸಾಮಥ್ರ್ಯವನ್ನು ಮತ್ತಷ್ಟು ಸದೃಢಗೊಳಿಸಲು ಭಾರತೀಯ ಜನತಾ ಪಕ್ಷ ಮಹತ್ವದ ಕಾರ್ಯತಂತ್ರಗಳಿಗೆ ಚಾಲನೆ ನೀಡಿದೆ.
ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ಇಂದಿನಿಂದ ಆರಂಭವಾದ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಪ್ರಚಲಿತ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಭಾರೀ ಪ್ರಾಮುಖ್ಯತೆ ಪಡೆದುಕೊಂಡಿದೆ.ವಿಶೇಷವಾಗಿ ಪೂರ್ವ ಮತ್ತು ಆಗ್ನೇಯ ಕರಾವಳಿ ಭಾಗಗಳಲ್ಲಿ ಬಿಜೆಪಿ ಚಕ್ರಾಧಿಪತ್ಯ ವಿಸ್ತರಣೆಗಾಗಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಮಹತ್ತರ ಚರ್ಚೆ-ಸಮಾಲೋಚನೆಗಳು ನಡೆದಿವೆ.   ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನೇತೃತ್ವದಲ್ಲಿ ಈ ಸಭೆ ನಡೆಯುತ್ತಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಶತಾಯಗತಾಯ ಗೆಲುವು ಸಾಧಿಸುವ ಧ್ಯೇಯೋದ್ಧೇಶಗಳನ್ನು ಹೊಂದಿರುವ ಪಕ್ಷದ ಅಗ್ರಮಾನ್ಯ ಧುರೀಣರಿಗೆ ಇದು ಒಂದು ರೀತಿಯಲ್ಲಿ ರಾಷ್ಟ್ರಮಟ್ಟದ ಚುನಾವಣಾ ಪೂರ್ವ ಸಿದ್ದತೆಯಂತಾಗಿದೆ.

ಬಿಜೆಪಿ ವರಿಷ್ಠರಾದ ಎಲ್.ಕೆ.ಅಡ್ವಾಣಿ, ಡಾ. ಮುರಳಿ ಮನೋಹರ ಜೋಷಿ, ಕೇಂದ್ರ ಸಚಿವರು, ಬಿಜೆಪಿ ಆಡಳಿತ ರಾಜ್ಯದ 13 ಮುಖ್ಯಮಂತ್ರಿಗಳು ಮತ್ತು ಮೂವರು ಉಪ ಮುಖ್ಯಮಂತ್ರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಕರ್ನಾಟಕ ರಾಜ್ಯದಿಂದ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮುಖಂಡರಾದ ಅನಂತಕುಮಾರ್, ಜಗದೀಶ್ ಶೆಟ್ಟರ್, ಡಿ.ವಿ.ಸದಾನಂದ ಗೌಡ, ಕೆ.ಎಸ್.ಈಶ್ವರಪ್ಪ ಮೊದಲಾದವರು ಪಾಲ್ಗೊಂಡಿದ್ದಾರೆ.

ಒಡಿಶಾ ಮೇಲೂ ಗೆಲುವಿನ ಕಣ್ಣಿಟ್ಟಿರುವ ಬಿಜೆಪಿ ಆ ರಾಜ್ಯದ ಶೇ.17ರಷ್ಟು ದಲಿತರನ್ನು ಓಲೈಸಲು ಈಗಿನಿಂದಲೇ ತಂತ್ರಗಾರಿಕೆ ಹೆಣೆಯುತ್ತಿದೆ. ಇದರ ಭಾಗವಾಗಿ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯುವ ಸ್ಥಳಕ್ಕೆ ದಲಿತ ಕವಿ ಭೀಮಾ ಭೋಯಿ ಹೆಸರನ್ನು ಇಟ್ಟಿದೆ.  ಒಡಿಶಾ ಸೇರಿದಂತೆ ಹೊಸ ಕ್ಷೇತ್ರಗಳಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಲು ಸಜ್ಜಾಗಿರುವ ಬಿಜೆಪಿ 2019ರ ಚುನಾವಣೆಯಲ್ಲಿ ಆಂಧ್ರ ಪ್ರದೇಶದ 25 ಸ್ಥಾನಗಳು, ಓಡಿಶಾದ 21, ತಮಿಳುನಾಡಿನ 39, ತೆಲಂಗಾಣದ 17, ಪಶ್ಚಿಮ ಬಂಗಾಳದ 42, ಬಿಹಾರದ 40, ಮಹಾರಾಷ್ಟ್ರದ 48 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin