ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ಪ್ರಾಬಲ್ಯಕ್ಕೆ ಮೋದಿ ಸೂತ್ರ

ಈ ಸುದ್ದಿಯನ್ನು ಶೇರ್ ಮಾಡಿ

Modi-and-Amith-Shah-BJP

ನವದೆಹಲಿ, ಸೆ.24-ಗುಜರಾತ್ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬುಲೆಟ್‍ರೈಲ್ ಯೋಜನೆಗೆ ಮುನ್ನುಡಿ ಮತ್ತು ಸರ್ದಾರ್ ಸರೋವರ್ ಡ್ಯಾಂ ಲೋಕಾರ್ಪಣೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಈಗ ಪಕ್ಷದ ಪ್ರಾಬಲ್ಯವನ್ನು ಮತ್ತಷ್ಟು ದೃಢಗೊಳಿಸುವ ಸೂತ್ರವೊಂದನ್ನು ರೂಪಿಸಿದ್ದಾರೆ.  ಕಾಂಗ್ರೆಸ್ ಹಾಗೂ ಇತರ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯವಿರುವ ರಾಜ್ಯಗಳಲ್ಲೂ ಬಿಜೆಪಿ ಹಿಡಿತ ಸಾಧಿಸಲು ಅನುಕೂಲವಾಗುವಂತೆ ಸರ್ಕಾರದ ಸಾಧನೆಗಳು ಮತ್ತು ಯೋಜನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಮತ್ತು ವ್ಯಾಪಕವಾಗಿ ಪ್ರಚಾರ ಮಾಡಲು ಬಿಜೆಪಿ ಮುಖಂಡರುಗಳಿಗೆ ಹುಕ್ಕುಂ ಹೊರಡಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ರಾಜಧಾನಿ ನವದೆಹಲಿಯಲ್ಲಿ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಚಾಲನೆ ದೊರೆತ್ತಿದ್ದು ಪಕ್ಷದ ನಾಯಕರಿಗೆ ಮೋದಿ ಕೆಲವೊಂದು ಮಹತ್ವದ ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ನೋಟು ಅಮಾನ್ಯೀಕರಣದ ನಂತರ ಆರ್ಥಿಕ ಪ್ರಗತಿ ಕುಂಠಿತವಾಗಿದೆ ಎಂಬ ಅಸಮಾಧಾನ ಭುಗಿಲೆದ್ದಿರುವ ಸಂದ¨ರ್sದಲ್ಲಿ, ಕೇಂದ್ರ ಸರ್ಕಾರದ ಸದೃಢ ಆರ್ಥಿಕ ನೀತಿಗಳು, ಜಿಎಸ್‍ಟಿ ಅನುಷ್ಠಾನದ ಫಲಶೃತಿಗಳ ಬಗ್ಗೆ ಮತ್ತಷ್ಟು ಪ್ರಚಾರವನ್ನು ರಾಜ್ಯಗಳಲ್ಲಿ ಕೈಗೊಳ್ಳುವಂತೆ ಮೋದಿ ಪಕ್ಷದ ಮುಖಂಡರು ಮತ್ತು ರಾಷ್ಟ್ರೀಯ ಪದಾಧಿಕಾರಿಗಳು ಸೂಚಿಸಲಿದ್ದಾರೆ.

ಸರ್ಕಾರದ ಆರ್ಥಿಕ ಮತ್ತು ರಾಜಕೀಯ ಹೊಸ ಅಂಶಗಳ ಕಾರ್ಯಸೂಚಿಗಳನ್ನು ಮೋದಿ ಸಿದ್ದಪಡಿಸಿದ್ದ ಅದನ್ನು ಸಭೆಯಲ್ಲಿ ಮಂಡಿಸಲಿದ್ದಾರೆ.
ಈ ಸಭೆಯಲ್ಲಿ ಅನೇಕ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗುವುದು. ಹಿಂದುತ್ವದ ಪ್ರಖರ ಪ್ರತಿಪಾದಕ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮ ಶತಮಾನೋತ್ಸವ ಸೆ.25ರಂದು ನಡೆಯಲಿದ್ದು, ಆ ಸಮಾರಂಭವನ್ನು ದೇಶಾದ್ಯಂತ ಅದ್ಧೂರಿಯಾಗಿ ಆಚರಿಸಲು ಮತ್ತು ಅದೇ ಸಂದರ್ಭದಲ್ಲಿ ಕೆಲವೊಂದು ಮಹತ್ವದ ಘೋಷಣೆಗಳನ್ನು ಹೊರಡಿಸಲು ಉದ್ದೇಶಿಸಲಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ರಾಜ್ಯ ಬಿಜೆಪಿ ಅಧ್ಯಕ್ಷರು, ಮತ್ತು ಇತರ ಪ್ರಮುಖ ಸಾಂಸ್ಥಿಕ ಸಂಸ್ಥೆಗಳ ಮುಖ್ಯಸ್ಥರು ಸಭೆಯಲ್ಲಿ ಮಹತ್ವದ ವಿಷಯಗಳು ಕುರಿತು ಚರ್ಚಿಸುವರು.  ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯ ಎರಡನೆ ದಿನ ನಾಳೆ 1,400 ಶಾಸಕರು, 337 ಸಂಸದರು, ಮತ್ತು ಎಲ್ಲ ವಿಧಾನ ಪರಿಷತ್ ಸದಸ್ಯರುಗಳು ಸೇರಿದಂತೆ 2,000ಕ್ಕೂ ಹೆಚ್ಚು ಮಂದಿ ಭಾಗವಹಿಸುತ್ತಿರುವುದು ವಿಶೇಷ.  ನಾಳೆ ಮೋದಿ ಕಾರ್ಯಕಾರಿಣಿ ಸಭೆಯ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

Facebook Comments

Sri Raghav

Admin