ಬಿಜೆಪಿ ಹಿಂದುಳಿದ ವರ್ಗಗಳ ಬೃಹತ್ ಏಕತಾ ಸಮಾವೇಶ (Updates)

ಈ ಸುದ್ದಿಯನ್ನು ಶೇರ್ ಮಾಡಿ

Ekata--Samavesha-5

> ಕಾಂಗ್ರೆಸ್ ಶವಪೆಟ್ಟಿಗೆಗೆ ಕೊನೆ ಮೊಳೆ ಹೊಡೆಯಲಿದ್ದೇವೆ: ಷಾ ಬಣ್ಣನೆ

ಬೆಂಗಳೂರು, ನ.27-ನಿದ್ದೆ ಮಾಡುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಎಚ್ಚರಿಸಲು ನಗಾರಿ ಹೊಡೆದಿದ್ದೇವೆ. ಕಾಂಗ್ರೆಸ್‍ನ ಶವಪೆಟ್ಟಿಗೆಗೆ ಕೊನೆ ಮೊಳೆ ಹೊಡೆಯಲಿದ್ದೇವೆ. ಈ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ನಮ್ಮ ಪಕ್ಷದ ಸರ್ಕಾರವನ್ನು ಅಧಿಕಾರಕ್ಕೆ ತರಲಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಇಂದಿಲ್ಲಿ ತಿಳಿಸಿದರು.  ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ಹಿಂದುಳಿದ ವರ್ಗಗಳ ಏಕತಾ ಸಮಾವೇಶವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಅತ್ಯಂತ ಭ್ರಷ್ಟ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಎಂದು ಟೀಕಿಸಿದರು.

ಕೇಂದ್ರ ಸರ್ಕಾರದ ಎರಡೂವರೆ ವರ್ಷದ ಆಡಳಿತಾವಧಿಯಲ್ಲಿ ಜಾರಿಗೆ ತಂದಿರುವ 54 ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ದೇಶಾದ್ಯಂತ ಈ ಯೋಜನೆಗಳು ಜಾರಿಯಾಗಿದ್ದರೂ ಕರ್ನಾಟಕದಲ್ಲಿ ಈ ಯೋಜನೆಗಳನ್ನು ಸಿದ್ದರಾಮಯ್ಯನವರ ಸರ್ಕಾರ ಜನರಿಗೆ ತಲುಪಿಸುವಲ್ಲಿ ವಿಫಲವಾಗಿದೆ ಎಂದು ಷಾ ಆರೋಪಿಸಿದರು.  ಪ್ರಧಾನಿ ನರೇಂದ್ರ ಮೋದಿಯವರು ಕಪ್ಪು ಹಣದ ವಿರುದ್ಧ ಸಮರ ಸಾರಿದ್ದಾರೆ. 500, 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸುವ ಮೂಲಕ ದೇಶದಲ್ಲಿನ ವ್ಯಾಪಕ ಭ್ರಷ್ಟಾಚಾರ ತಡೆಯುವ ನಿಟ್ಟಿನಲ್ಲಿ ಹೋರಾಟ ಆರಂಭಿಸಿದ್ದಾರೆ. ಇದರಿಂದ ಕಾಳಧನಿಕರಿಗೆ ನಡುಕ ಉಂಟಾಗಿದೆ. ಉಗ್ರ ಚಟುವಟಿಕೆಗಳನ್ನು, ಹವಾಲ ನಕಲಿ ನೋಟುಗಳನ್ನು ತಡೆಗಟ್ಟಲು ಈ ದಿಟ್ಟ ಕ್ರಮವನ್ನು ನಮ್ಮ ಪ್ರಧಾನಿ ಕೈಗೊಂಡಿರುವ ಕ್ರಮಕ್ಕೆ ದೇಶದ 125 ಕೋಟಿ ಜನರು ಬೆಂಬಲಿ ನೀಡಿದೆ. ಆದರೆ ವಿರೋಧ ಪಕ್ಷಗಳು ನಾಳೆ ಆಕ್ರೋಶ್ ದಿವಸ್ ಆಚರಣೆ ಮಾಡುತ್ತಿವೆ ಎಂದು ವ್ಯಂಗ್ಯವಾಡಿದರು.

ಈ ಆಕ್ರೋಶ್ ದಿವಸ್‍ಗೆ ಬಿಹಾರ ಮುಖ್ಯಮಂತ್ರಿ ಹಾಗೂ ಜೆಡಿಯು ಮುಖಂಡ ನಿತೀಶ್‍ಕುಮಾರ್ ಬೆಂಬಲ ನೀಡದಿರುವುದು ಉತ್ತಮ ಬೆಳವಣಿಗೆ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರ ಹಿಂದುಳಿದ ವರ್ಗದವರ, ರೈತರ, ಶೋಷಿತರ, ಬಡವರ ಪರವಾಗಿ ಕೆಲಸ ಮಾಡುತ್ತಿದೆ. ಅದಕ್ಕಾಗಿಯೇ ಹತ್ತು ಹಲವು ಯೋಜನೆಗಳನ್ನು ರೂಪಿಸಿದೆ. ಅವುಗಳನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದರು.  ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ. ರಾಜ್ಯದಲ್ಲಿ ಅಭಿವೃದ್ದಿ ಪರ್ವ ಪ್ರಾರಂಭವಾಗುತ್ತದೆ ಎಂದು ತಿಳಿಸಿದರು. ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ನಮ್ಮ ಪಕ್ಷ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲಿದೆ. ಅದಕ್ಕೆ ಎಲ್ಲರ ಸಹಕಾರ ಸಿಗಲಿದೆ ಎಂಬ ವಿಶ್ವಾಸವನ್ನು ಅಮಿತ್ ಷಾ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ . ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಜನ ಬೇಸತ್ತಿದ್ದಾರೆ. ಈ ಸರ್ಕಾರವನ್ನು ತೊಲಗಿಸಲು ನಿರ್ಧರಿಸಿದ್ದಾರೆ. ಯಾವುದೇ ಅಭಿವೃದ್ದಿ ಕೆಲಸಗಳನ್ನು ಈ ಸರ್ಕಾರ ಮಾಡಿಲ್ಲ. ಅದಕ್ಕಾಗಿಯೇ ಈ ಜನ ಬಿಜೆಪಿಯತ್ತ ಒಲವು ವ್ಯಕ್ತಪಡಿಸುತ್ತಿದ್ದಾರೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ನೋಟು ನಿಷೇಧ ವಿರೋಧಿಸಿ ನಾಳೆ ವಿಪಕ್ಷಗಳು ಕೈಗೊಂಡಿರುವ ಆಕ್ರೋಶ್ ದಿವಸ್‍ನಲ್ಲಿ ಯಾರೂ ಪಾಲ್ಗೊಳ್ಳಬಾರದು. ಎಲ್ಲರೂ ಪ್ರಧಾನಿ ಮೋದಿ ಪರವಾಗಿ ನಿಲ್ಲಬೇಕೆಂದು ಕರೆ ನೀಡಿದರು.  ನಾಳೆ ನಾವೆಲ್ಲರೂ ಸಂಭ್ರಮಾಚರಣೆ ಮಾಡೋಣ. ದೇವರಾಜ ಅರಸು, ಬಸವಣ್ಣನವರ ಚಿಂತನೆಗಳನ್ನು ಜಾರಿ ಮಾಡಲು ನಾವು ಸಿದ್ದರಿದ್ದೇವೆ. ಕಾವೇರಿ, ಮಹಾದಿ ಸಮಸ್ಯೆಯನ್ನು ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಪರಿಹರಿಸುತ್ತೇವೆ ಎಂದು ಯಡಿಯೂರಪ್ಪ ಭರವಸೆ ನೀಡಿದರು.  ಸಮಾರಂಭದಲ್ಲಿ ಕೇಂದ್ರ ಸಚಿವರಾದ ಅನಂತಕುಮಾರ, ಡಿ.ವಿ.ಸದಾನಂದಗೌಡ, ರಮೇಶ್ ಜಿಗಜಿಣಗಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಂಸದರಾದ ಶೋಭ ಕರಂದ್ಲಾಜೆ, ಪಿ.ಸಿ.ಮೋಹನ್, ಪ್ರತಾಪ್ ಸಿಂಹ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಈಶ್ವರಪ್ಪ , ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್, ಬಿ.ಜೆ.ಪುಟ್ಟಸ್ವಾಮಿ, ಶಾಸಕರು, ಪರಿಷತ್ ಸದಸ್ಯರು ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.

 

> ಬಿಜೆಪಿ ಹಿಂದುಳಿದ ವರ್ಗಗಳ ಬೃಹತ್ ಏಕತಾ ಸಮಾವೇಶ ಸಾವಿರಾರು ಬಿಜೆಪಿ ಕಾರ್ಯಕರ್ತರು

> ಹಿಂದುಳಿದ ವರ್ಗಗಳ ಬೃಹತ್ ಏಕತಾ ಸಮಾವೇಶಕ್ಕೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದ ಅಮಿತ್ ಷಾ

>  ಶೋಭಾ ಕರಂದ್ಲಾಜೆ ವಾಗ್ದಾಳಿ

ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ವರ್ಗದವರಿಗೆ ಏನೂ ಕೊಟ್ಟಿಲ್ಲ ಎಂದು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.
ಅರಮನೆ ಮೈದಾನದಲ್ಲಿ ನಡೆದ ಹಿಂದುಳಿದ ವರ್ಗದವರ ಬೃಹತ್ ಏಕತಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಹಿಂದುಳಿದ ವರ್ಗದವರ ದನಿಯಾಗಿದ್ದರು. ಆದರೆ, ಸಿದ್ದರಾಮಯ್ಯನವರು ಹಿಂದುಳಿದ ವರ್ಗಕ್ಕೆ ಏನೂ ಕೊಡಲಿಲ್ಲ. ಅನ್ನಭಾಗ್ಯ ಯೋಜನೆ ಹೆಸರಿನಲ್ಲಿ 30ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ ಅವರು, ಕೊಡುತ್ತಿರುವುದು ಕೇವಲ 3ಕೆಜಿ ಮಾತ್ರ.
ಆದರೆ, ಅನ್ನಭಾಗ್ಯ ಯೋಜನೆಗೆ ಪ್ರಧಾನಿಯವರು ಪ್ರತಿ ತಿಂಗಳು 400 ಕೋಟಿ ರೂ. ಅನುದಾನ ನೀಡುತ್ತಿದ್ದಾರೆ. ಕೇಂದ್ರ ಸರ್ಕಾರ ಕೊಟ್ಟ ಅಕ್ಕಿ, ಗೋಧಿಯನ್ನು ಕಾಂಗ್ರೆಸ್ ಪುಡಾರಿಗಳು ಮಾರಿಕೊಂಡಿದ್ದಾರೆ. ಶಾದಿಭಾಗ್ಯ ಯೋಜನೆಯನ್ನು ಎಲ್ಲರಿಗೂ ಕೊಡಿ ಎಂದು ಯಡಿಯೂರಪ್ಪನವರು ಅಂದೇ ಪ್ರತಿಭಟನೆ ಮಾಡಿದ್ದರು. ಮೂರು ವರ್ಷವಾದರೂ ಬಡ ಮುಸಲ್ಮಾನರಿಗೆ ಶಾದಿಭಾಗ್ಯ ಯೋಜನೆ ಪ್ರತಿಫಲ ಸಿಕ್ಕಿಲ್ಲ. ಭಾಗ್ಯಲಕ್ಷ್ಮಿ ಯೋಜನೆಯನ್ನು ಸಿದ್ದರಾಮಯ್ಯ ಸರ್ಕಾರ ಕಸಿದುಕೊಂಡಿದೆ. ಕೇಂದ್ರದಿಂದ ಪ್ರತಿ ವರ್ಷ 25 ಸಾವಿರ ಕೋಟಿ ರೂ. ಹೆಚ್ಚುವರಿ ಹಣ ಬರುತ್ತಿದೆ. ಈ ಹಣ ಎಲ್ಲಿ ಹೋಯ್ತು.ಕಾಂಗ್ರೆಸ್‍ನವರು ಲೋಡ್‍ಗಟ್ಟಲೆ ಕಪ್ಪುಹಣ ಹೊಂದಿದ್ದಾರೆ. ಈ ಹಣ ರಕ್ಷಣೆಗಾಗಿ ಆಕ್ರೋಶ್ ದಿವಸ್‍ಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.

> ಬಿಜೆಪಿ ಎಂದೆಂದೂ ಹಿಂದುಳಿದ ವರ್ಗದವರ ಪಕ್ಷ : ಅರವಿಂದ ಲಿಂಬಾವಳಿ

ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ಬಿಜೆಪಿ ಎಂದೆಂದೂ ಹಿಂದುಳಿದ ವರ್ಗದವರ ಪಕ್ಷವಾಗಿದೆ. ಸ್ವಾಮೀಜಿಗಳು ಈಶ್ವರಪ್ಪನವರನ್ನು ಭೇಟಿಯಾಗಿ ಮಠಗಳಿಗೆ ನೆರವು ಕೇಳಿದಾಗ ಅದನ್ನು ಬಿಎಸ್‍ವೈಯವರು ತಕ್ಷಣವೇ ಈಡೇರಿಸಿದ್ದರು. ಕನಕ ಜಯಂತಿ, ವಾಲ್ಮೀಕಿ ಜಯಂತಿ ಪ್ರಾರಂಭಿಸಿದ್ದು ನಮ್ಮ ಬಿಜೆಪಿ ಸರ್ಕಾರ. ಅದೇ ವಾಲ್ಮೀಕಿ ಜನಾಂಗದವರು ವಿರೋಧಿಸುತ್ತಿರುವ ಟಿಪ್ಪು ಜಯಂತಿಯನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.400 ಕೋಟಿ ರೂ. ಇದ್ದ ಸಮಾಜ ಕಲ್ಯಾಣ ಇಲಾಖೆಯ ಅನುದಾನವನ್ನು ಯಡಿಯೂರಪ್ಪನವರು 4400 ಕೋಟಿ ರೂ.ಗೆ ಏರಿಸಿದರು ಎಂದು ಹೇಳಿದರು.

> ಕುರ್ಚಿ ಖಾಲಿ ಮಾಡುವ ಸಂದೇಶ ಇಂದಿನ ಸಮಾವೇಶದ ಮೂಲಕ ಹೋಗುತ್ತಿದೆ : ಆರ್.ಅಶೋಕ್

ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕುರ್ಚಿ ಖಾಲಿ ಮಾಡುವ ಸಂದೇಶ ಇಂದಿನ ಸಮಾವೇಶದ ಮೂಲಕ ಹೋಗುತ್ತಿದೆ. ಈ ಸರ್ಕಾರದ ಬಗ್ಗೆ ಜನರಿಗೆ ಬೇಸರವಾಗಿದೆ. ಸಿದ್ದರಾಮಯ್ಯನವರು ಸದಾ ನಿದ್ದೆಯಲ್ಲೇ ಕಾಲ ಕಳೆಯುತ್ತಾರೆ. ದೇಶ ಕಾಂಗ್ರೆಸ್ ಮುಕ್ತವಾಗಿದೆ, ಕರ್ನಾಟಕವೂ ಕಾಂಗ್ರೆಸ್ ಮುಕ್ತವಾಗಬೇಕು ಎಂದರು. ಕೆಎಫ್‍ಡಿಯಂತಹ ಸಂಘಟನೆಗಳು ವ್ಯವಸ್ಥಿತವಾಗಿ ಬಿಜೆಪಿ, ಆರ್‍ಎಸ್‍ಎಸ್ ಕಾರ್ಯಕರ್ತರ ಹತ್ಯೆ ಮಾಡುತ್ತಿವೆ. ಆದರೆ, ಕಾಂಗ್ರೆಸ್ ಸರ್ಕಾರ ಆ ಸಂಘಟನೆಗಳನ್ನು ಪರೋಕ್ಷವಾಗಿ ಬೆಂಬಲಿಸುತ್ತಿದೆ. ಕಾರ್ಯಕರ್ತರನ್ನು ಕೊಲೆ ಮಾಡಿಸಿದರೂ ಬಿಜೆಪಿ ಹಠ ಬಿಡುವುದಿಲ್ಲ. ಸಿದ್ದರಾಮಯ್ಯನವರನ್ನು ಕಿತ್ತೊಗೆಯುತ್ತೇವೆ ಎಂದು ಹೇಳಿದರು.

 

 

Amith-Shah
ಬಿಜೆಪಿ ಹಿಂದುಳಿದ ವರ್ಗಗಳ ಬೃಹತ್ ಏಕತಾ ಸಮಾವೇಶಕ್ಕೆ ಆಗಮಿಸುತ್ತಿರುವ ಅಮಿತ್ ಷಾ

 

ಬೆಂಗಳೂರಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಬೃಹತ್ ಏಕತಾ ಸಮಾವೇಶದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತಟ್ಟಿದ ಟ್ರಾಫಿಕ್ ಜಾಮ್ ಬಿಸಿ

ಬಿಜೆಪಿ ಹಿಂದುಳಿದ ವರ್ಗಗಳ ಬೃಹತ್ ಏಕತಾ ಸಮಾವೇಶದ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿದ್ದ ಬೈಕ್ ರ‍್ಯಾಲಿಗೆ ಆರ್.ಅಶೋಕ್, ಶೋಭಾ ಕರಂದ್ಲಾಜೆ ಚಾಲನೆ

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin