ಬಿಟಿಎಂ ಬಡಾವಣೆಯಲ್ಲಿ ರೆಡ್ಡಿ ಅವರನ್ನು ಬೀಟ್ ಮಾಡೋರು ಯಾರು..?

ಈ ಸುದ್ದಿಯನ್ನು ಶೇರ್ ಮಾಡಿ

btn

– ಕೆ.ಎಸ್.ಜನಾರ್ಧನ್
ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಮೂರನೆ ಬಾರಿ ಕಣಕ್ಕಿಳಿಯುತ್ತಿರುವ ಸೋಲಿಲ್ಲದ ಸರದಾರ ಗೃಹ ಸಚಿವರೂ ಆದ ಕಾಂಗ್ರೆಸ್ ಮುಖಂಡ ರಾಮಲಿಂಗಾರೆಡ್ಡಿ ಅವರಿಗೆ ಸವಾಲೊಡ್ಡುವರು ಯಾರು ? ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಬಾರಿ ಸತತವಾಗಿ ಗೆಲುವು ಸಾಧಿಸಿ ಕ್ಷೇತ್ರ ಪುನರ್‍ವಿಂಗಡಣೆಯಿಂದ ಬದಲಾದ ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲೂ ಸತತವಾಗಿ ಎರಡು ಬಾರಿ ಗೆಲುವು ಸಾಧಿಸಿ ಈಗ 7ನೇ ಬಾರಿ ಕಣಕ್ಕಿಳಿಯುತ್ತಿದ್ದಾರೆ.  ಸುಮಾರು 2.60 ಲಕ್ಷ ಮತದಾರರನ್ನು ಹೊಂದಿರುವ ಕ್ಷೇತ್ರದಲ್ಲಿ ಮುಸ್ಲಿಂ, ರೆಡ್ಡಿ, ಒಕ್ಕಲಿಗರು, ಎಸ್ಸಿ, ಎಸ್ಟಿ, ತಿಗಳರು ಸೇರಿದಂತೆ ಎಲ್ಲಾ ಸಮುದಾಯದವರು ಇದ್ದಾರೆ. ಮೂಲನಿವಾಸಿಗಳ ಜತೆ ಹೊರಗಿನಿಂದ ಬಂದು ನೆಲೆಸಿರುವವರು ಇಲ್ಲಿ ಹೆಚ್ಚಾಗಿದ್ದಾರೆ.

ಕಾಂಗ್ರೆಸ್‍ನ ಭದ್ರಕೋಟೆಯಾಗಿರುವ ಈ ಕ್ಷೇತ್ರದ ಮೇಲೆ ತನ್ನ ಹಿಡಿತ ಸಾಧಿಸಲು ಬಿಜೆಪಿ, ಜೆಡಿಎಸ್ ಪಕ್ಷಗಳು ಹೆಣಗಾಡುತ್ತಿವೆ. ಪ್ರಭಾವಿ ವರ್ಚಸ್ಸುಳ್ಳ ರಾಮಲಿಂಗಾರೆಡ್ಡಿ ಅವರ ಎದುರು ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ. ಜೆಡಿಎಸ್ ಈಗಾಗಲೇ ಈ ಕ್ಷೇತ್ರಕ್ಕೆ ಬಿಬಿಎಂಪಿ ಸದಸ್ಯರಾಗಿರುವ ದೇವ್‍ದಾಸ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ರಾಮಲಿಂಗಾರೆಡ್ಡಿ ವಿರುದ್ಧ ಬಿಜೆಪಿಯಿಂದ ಕಣಕ್ಕಿಳಿಯಲು ಹಲವರು ಟಿಕೆಟ್‍ಗಾಗಿ ಪೈಪೋಟಿ  ನಡೆಸಿದ್ದಾರೆ. ಮಾಜಿ ಶಾಸಕರು, ಬಿಜೆಪಿ ಮುಖಂಡರಾದ ಸುಬ್ಬ್ಬಾರೆಡ್ಡಿ ಅವರ ಮಗನಾದ ವಿವೇಕ್‍ರೆಡ್ಡಿ ಬಿಜೆಪಿಯ ಶ್ರೀಧರ್, ಜಯದೇವ್ ಎಂಬುವರು ಟಿಕೆಟ್‍ಗಾಗಿ ಹೈಕಮಾಂಡ್ ಜೊತೆ ಮಾತುಕತೆ ನಡೆಸಿದ್ದಾರೆ. ಈ ನಡುವೆ ಜನಾರ್ದನರೆಡ್ಡಿ ಅವರ ಸೋದರ ಸಂಬಂಧಿಯಾದ ಲಲ್ಲೇಶ್‍ರೆಡ್ಡಿ ಎಂಬುವರು ಕೂಡ ಈ ಕ್ಷೇತ್ರದ ಮೇಲೆ ಕಣ್ಣಿಟ್ಟು ಟಿಕೆಟ್‍ಗಾಗಿ ಪ್ರಯತ್ನ ನಡೆಸಿದ್ದಾರೆ. ಕಳೆದ ಆರೇಳು ತಿಂಗಳಿನಿಂದ ಈ ಕ್ಷೇತ್ರದ ಜನತೆಯ ಸಂಪರ್ಕದಲ್ಲಿದ್ದಾರೆ.
ಈ ಕ್ಷೇತ್ರದ ವಿಶೇಷವೆಂದರೆ ಒಕ್ಕಲಿಗ, ರೆಡ್ಡಿ ಲಿಂಗಾಯತರಾಗಲೀ, ಮುಸ್ಲಿಂ ಸಮುದಾಯದವರಾಗಲೀ, ಪರಿಶಿಷ್ಟ ಜಾತಿ, ಜನಾಂಗದವರಾಗಲೀ ಯಾರೂ ನಿರ್ಣಾಯಕರಾಗಿರುವುದಿಲ್ಲ. ಎಲ್ಲರೂ 15, 20 ಸಾವಿರದಷ್ಟು ಮತದಾರರಿದ್ದಾರೆ. ಎಲ್ಲಾ ಜಾತಿ ಜನಾಂಗದವರು ಇಲ್ಲಿ ಇರುವುದು ವಿಶೇಷ. ಹಾಲಿ ಶಾಸಕರು, ಗೃಹ ಸಚಿವರೂ ಆದ ರಾಮಲಿಂಗಾರೆಡ್ಡಿ ಅವರು ತಮ್ಮ ಕ್ಷೇತ್ರದಲ್ಲಿ ಉತ್ತಮ ಜನಸಂಪರ್ಕ ಹೊಂದಿದ್ದರೆ, ಇವರ ಬಗ್ಗೆ ವಿರೋಧಿ ಅಲೆ ಕೂಡ ಇಲ್ಲ. ಸಂಯಮ ರಾಜಕಾರಣಿ, ಯಾವುದೇ ಸಂಘರ್ಷಕ್ಕಿಳಿಯುವುದಿಲ್ಲ. ಎಲ್ಲರನ್ನು ಸಮಚಿತ್ತವಾಗಿ ನಿಭಾಯಿಸುವ ಗುಣವನ್ನು ಹೊಂದಿರುವವರು.

ಕಳೆದ ಬಾರಿ ಇವರ ವಿರುದ್ಧ ಬಿಜೆಪಿಯಿಂದ ಸುಧಾಕರ್ ಎಂಬುವರು ಕಣಕ್ಕಿಳಿಸಲಾಗಿತ್ತು. ರಾಮಲಿಂಗಾರೆಡ್ಡಿ ಅವರು ಸುಮಾರು 49 ಸಾವಿರ ಅಂತರದಲ್ಲಿ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿದ್ದರು. ಬಿಟಿಎಂ ಲೇಔಟ್‍ನಲ್ಲಿ ರಾಮಲಿಂಗಾರೆಡ್ಡಿ ವಿರುದ್ಧ ಸ್ಪರ್ಧಿಸಿ ಗೆಲ್ಲುವುದು ಅಷ್ಟು ಸುಲಭ ಸಾಧ್ಯವಿಲ್ಲ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಚರ್ಚಿತವಾಗುತ್ತಿವೆ. ರಾಮಲಿಂಗಾರೆಡ್ಡಿ ಅವರಿಂದ ದೂರವಾಗಿದ್ದ ಕೆಲ ಕಾಂಗ್ರೆಸ್ ಮುಖಂಡರೆಲ್ಲ ಈಗ ಅವರೊಂದಿಗೆ ಕೈ ಜೋಡಿಸಿದ್ದಾರೆ. ಹಾಗಾಗಿ ಕಳೆದ ಬಾರಿಗಿಂತ ಇವರ ಗೆಲುವು ಸುಲಭವಾಗುವ ಸಾಧ್ಯತೆ ಇದೆ ಎಂಬ ಲೆಕ್ಕಾಚಾರ ಕಾಂಗ್ರೆಸ್‍ನಲ್ಲಿ ಹಾಕಲಾಗಿದೆ. ಆದರೆ ಚುನಾವಣೆಯ ಗಾಳಿ ಹೀಗೇ ಬೀಸುತ್ತದೆ ಎಂದು ಹೇಳಲಿಕ್ಕೆ ಸಾಧ್ಯವಿಲ್ಲ.

ಯಾವುದೋ ಅಲೆಯಲ್ಲಿ ಯಾರ್ಯಾರೋ ಕೊಚ್ಚಿ ಹೋಗಿದ್ದಾರೆ. ಸಾಕಷ್ಟು ಪ್ರಭಾವಿಗಳು ಸೋತಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದೆ. ಇದರ ಅರಿವು ರಾಮಲಿಂಗಾರೆಡ್ಡಿ ಅಂತಹ ನಾಯಕರಿಗೂ ಇದೆ. ಹಾಗಾಗಿ ಅವರು ಚುನಾವಣೆಯನ್ನು ಅಷ್ಟು ಸುಲಭವಾಗಿ ಪರಿಗಣಿಸಿಲ್ಲ.  ಬಿಜೆಪಿ ಪಕ್ಷ ಇಲ್ಲಿ ಪರಿಣಾಮಕಾರಿಯಾಗಿ ಪ್ರಚಾರ ನಡೆಸುತ್ತಿದೆ. ಮನೆ ಮನೆ ಪ್ರಚಾರ, ಬೂತ್‍ಮಟ್ಟದ ಪ್ರಚಾರ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡು ಪಕ್ಷ ಸಂಘಟನೆಯಲ್ಲಿ ಕಾರ್ಯಕರ್ತರು ತೊಡಗಿಸಿಕೊಂಡಿದ್ದಾರೆ. ನಾಯಕರು ಪ್ರಧಾನಿ ನರೇಂದ್ರ ಮೋದಿ ಅಲೆಯನ್ನು ನೆಚ್ಚಿಕೊಂಡಿದ್ದಾರೆ. ಒಮ್ಮತದ ಅಭ್ಯರ್ಥಿ ಕಣಕ್ಕಿಳಿದು ರಾಜ್ಯದಲ್ಲಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಷಾ ಅಲೆ ಎದ್ದರೆ, ರಾಮಲಿಂಗಾರೆಡ್ಡಿ ಅವರಿಗೆ ಅಂದುಕೊಂಡಷ್ಟು ಗೆಲುವು ಸುಲಭವಾಗುವುದಿಲ್ಲ.

ಜೆಡಿಎಸ್ ಪಕ್ಷವನ್ನು ಈ ಕ್ಷೇತ್ರದಲ್ಲಿ ಅಷ್ಟಾಗಿ ಕಡೆಗಣಿಸುವಂತಿಲ್ಲ. ಬಿಬಿಎಂಪಿ ಸದಸ್ಯರಾಗಿರುವ ದೇವದಾಸ್ ಅವರು ಕೂಡ ಪರಿಣಾಮಕಾರಿಯಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಯಾರು, ಯಾರಿಗೆ ಕೈ ಜೋಡಿಸುತ್ತಾರೆ. ಯಾರು, ಯಾರ ಕೈ ಹಿಡಿಯುತ್ತಾರೆ ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗುತ್ತದೆ.  ಬಿಜೆಪಿ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೆ ಎಂಬ ಅಂಶವೂ ಕೂಡ ಪ್ರಮುಖವಾಗುತ್ತದೆ. ಜಯನಗರ ಕ್ಷೇತ್ರದಲ್ಲಿ ಸತತವಾಗಿ ನಾಲ್ಕು ಬಾರಿ ಗೆದ್ದು ಕ್ಷೇತ್ರ ಬದಲಾಯಿಸಿದ ಮೇಲೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್‍ಗೆ ನೆಲೆ ಇಲ್ಲದಂತಾಗಿತ್ತು. ರಾಮಲಿಂಗಾರೆಡ್ಡಿ ಅವರು ಜಯನಗರ ಕ್ಷೇತ್ರದ ಮೇಲೆ ಕಣ್ಣಿಟ್ಟು ಅವರ ಪುತ್ರಿ ಸೌಮ್ಯ ರೆಡ್ಡಿ ಅವರನ್ನು ಕಣಕ್ಕಿಳಿಸಲು ಮುಂದಾಗಿ ಈಗಾಗಲೇ ಪ್ರಚಾರವನ್ನು ಶುರುವಿಟ್ಟುಕೊಂಡಿದ್ದಾರೆ.
ಬಿಟಿಎಂ ಲೇಔಟ್ ಜೊತೆಗೆ ಜಯನಗರ ಕ್ಷೇತ್ರದ ಜವಾಬ್ದಾರಿ ಕೂಡ ಬಹುತೇಕ ಅವರ ಮೇಲೆಯೇ ಬೀಳಲಿದೆ. ಎರಡೂ ಕ್ಷೇತ್ರಗಳ ಹೊಣೆಗಾರಿಕೆ ಜೊತೆಗೆ ಜಯಮಾಲೆ ಯಾರಿಗೆ ಒಲಿಯಲಿದೆ ಎಂಬುದು ಕುತೂಹಲ ಕೆರಳಿಸಿದೆ.

Facebook Comments

Sri Raghav

Admin