ಬಿಡಿಎ ಕಚೇರಿಯಲ್ಲಿ ಆತ್ಮಹತ್ಯೆ ಯತ್ನಿಸಿದ್ದ ಮಹಿಳೆಯ ಆರೋಗ್ಯ ವಿಚಾರಿಸಿದ ಜಾರ್ಜ್

ಈ ಸುದ್ದಿಯನ್ನು ಶೇರ್ ಮಾಡಿ

BDA-Suicide

ಬೆಂಗಳೂರು, ಅ.25-ಹೊರವರ್ತುಲ ರಸ್ತೆ ನಿರ್ಮಾಣಕ್ಕೆ ನಂದಿನಿ ಬಡಾವಣೆ ಕಂಠೀರವ ಜಂಕ್ಷನ್ ಬಳಿ ನಿರ್ಮಿಸುತ್ತಿರುವ ಅಂಡರ್‍ಪಾಸ್‍ಗೆ ಸ್ವಾಧೀನಪಡಿಸಿಕೊಂಡ ಕಟ್ಟಡಕ್ಕೆ ಪರಿಹಾರ ನೀಡದೆ ಕಳೆದ ಮೂರು ವರ್ಷಗಳಿಂದ ಸತಾಯಿಸುತ್ತಿದ್ದ ಬಿಡಿಎ ಕ್ರಮಕ್ಕೆ ಬೇಸತ್ತು ನಿನ್ನೆ ಮಹಾಲಕ್ಷ್ಮಿ ಲೇಔಟ್‍ನ ಮಂಗಳಾ ಎಂಬುವವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿರುವ ಬೌರಿಂಗ್ ಆಸ್ಪತ್ರೆಗೆ ಇಂದು ನಗರಾಭಿವೃದ್ಧಿ ಸಚಿವ ಜಾರ್ಜ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಬಿಡಿಎ ಕಮಿಷನರ್ ರಾಜ್‍ಕುಮಾರ್ ಕತ್ರಿ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಆಸ್ಪತ್ರೆಗೆ ತೆರಳಿದ ಸಚಿವರು ಕುಟುಂಬಸ್ಥರ ಬಳಿ ಘಟನೆ ಬಗ್ಗೆ ಮಾಹಿತಿ ಪಡೆದರಲ್ಲದೆ ಅಧಿಕಾರಿಗಳ ವಿಳಂಬ ಧೋರಣೆ ಬಗ್ಗೆ ಬೇಸರ ವ್ಯಕ್ತಪಡಿಸಿ ಕೂಡಲೇ ಪರಿಶೀಲನೆ ನಡೆಸಿ ಪರಿಹಾರದ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಮಂಗಳಾ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಉಸಿರಾಟಕ್ಕೆ ತೊಂದರೆಯಾಗಿದ್ದು, ವೆಂಟಿಲೇಟರ್ ಹಾಕಿ ಚಿಕಿತ್ಸೆ ನೀಡಲಾಗುತ್ತಿದೆ. ಮುಂದಿನ 48 ಗಂಟೆಗಳ ಕಾಲ ತೀವ್ರ ನಿಗಾ ಘಟಕದಲ್ಲಿಡಬೇಕಾಗಿದೆ ಎಂದು ಡಾ.ಮಂಜುನಾಥ್ ತಿಳಿಸಿದ್ದಾರೆ. ಬಿಡಿಎ ಸ್ವಾಧೀನ ಪಡಿಸಿಕೊಂಡಿದ್ದ ಜಾಗಕ್ಕೆ ಪರಿಹಾರ ನೀಡುವುದಾಗಿ ಘೋಷಿಸಿತ್ತು. ಪರಿಹಾರಕ್ಕಾಗಿ ಕಳೆದ ಮೂರು ವರ್ಷಗಳಿಂದ ಕಚೇರಿಗೆ ಅಲೆದು ಅಲೆದು ಮಂಗಳಾ ಬೇಸತ್ತಿದ್ದರು. ನಿನ್ನೆ ಕಚೇರಿಯಲ್ಲಿ ಅಧಿಕಾರಿಗಳ ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮುಖ್ಯಮಂತ್ರಿಗಳಿಗೆ ದೂರು: ಅಂಡರ್‍ಪಾಸ್ ಕಾಮಗಾರಿಗೆ ಸ್ವಾಧೀನಪಡಿಸಿಕೊಂಡಿದ್ದ ಜಾಗ ಮತ್ತು ಕಟ್ಟಡ ಸೇರಿದಂತೆ 18 ಸಂತ್ರಸ್ತರಿಗೆ ಬಿಡಿಎ 32 ಕೋಟಿ ರೂ.ಗಳನ್ನು ನೀಡಬೇಕು. ಈವರೆಗೆ ಒಂದು ಪೈಸೆಯನ್ನೂ ನೀಡಿಲ್ಲ. ಇಲ್ಲಿನ ಜನರ ಪರಿಸ್ಥಿತಿಯನ್ನು ಇಲಾಖೆ ಅರ್ಥ ಮಾಡಿಕೊಳ್ಳಬೇಕು. ಬೇರೆ ರಾಜ್ಯಗಳಿಂದ ಬರುವ ಅಧಿಕಾರಿಗಳಿಗೆ ಸ್ಥಳೀಯರ ಸಮಸ್ಯೆಗಳು ಅರ್ಥವಾಗುವುದಿಲ್ಲ. ಕೂಡಲೇ ಪರಿಹಾರ ನೀಡಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿಗಳಿಗೆ ದೂರು ನೀಡುವುದಾಗಿ ಸ್ಥಳೀಯ ಶಾಸಕರಾದ ಕೆ.ಗೋಪಾಲಯ್ಯ ಹೇಳಿದ್ದಾರೆ.  ನಿನ್ನೆ ಮಂಗಳಾ ಎಂಬುವರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದುರದೃಷ್ಟಕರ. ಬಿಡಿಎ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೆ ಇಂತಹ ಘಟನೆಗಳು ಮುಂದುವರಿಯುವ ಸಾಧ್ಯತೆ ಇರುತ್ತದೆ. ಕೂಡಲೇ ಎಚ್ಚೆತ್ತು ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಗೋಪಾಲಯ್ಯ ಆಗ್ರಹಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin