ಬಿಪಿಎಲ್ ಕುಟುಂಬಗಳನ್ನು ಸೆಳೆಯಲು ‘ವಸ್ತ್ರ ಭಾಗ್ಯ’ ಕರುಣಿಸಲು ಮುಂದಾದ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

Vastrea-Bhagya--01
ಬೆಂಗಳೂರು,ಜ.15-ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರ ಮೂಗಿಗೆ ತುಪ್ಪ ಸವರಲು ಸಜ್ಜಾಗಿರುವ ರಾಜ್ಯ ಸರ್ಕಾರ ಇದೀಗ ಬಡತನ ರೇಖೆಗಿಂತ(ಬಿಪಿಎಲ್)ಕೆಳಗಿರುವ ಕುಟುಂಬಗಳಿಗೆ ಸೀರೆ ಹಾಗೂ ಪಂಚೆ ನೀಡಲು ಮುಂದಾಗಿದೆ. ಅನ್ಯಭಾಗ್ಯ, ಕ್ಷೀರ ಭಾಗ್ಯ, ಶಾದಿ ಭಾಗ್ಯ ಸೇರಿದಂತೆ ಹಲವು ಭಾಗ್ಯಗಳ ಜೊತೆಗೆ ರಾಜ್ಯದ ಜನತೆಗೆ ಸರ್ಕಾರ ವಸ್ತ್ರ ಭಾಗ್ಯವನ್ನು ನೀಡುವ ಮೂಲಕ ಮತದಾರರನ್ನು ತನ್ನತ್ತ ಸೆಳೆಯುವುದು ಈ ಯೋಜನೆಯ ಮುಖ್ಯ ಉದ್ದೇಶ.

ಯೋಜನೆ ಪ್ರಕಾರ ಬಿಪಿಎಲ್ ಕುಟುಂಬಗಳಲ್ಲಿನ ಮಹಿಳೆಯರಿಗೆ ಸೀರೆ, ರವಿಕೆ, ಪುರುಷರಿಗೆ ಪಂಚೆ ಹಾಗೂ ಶರ್ಟ್‍ಗಳನ್ನು ನೀಡಲಾಗುತ್ತದೆ. ಇದೇ 29ರಂದು ನಡೆಯಲಿರುವ ಸಚಿವ ಸಂಪುಟ ಸಭೆಯ ಪೂರ್ವಭಾವಿ ಸಭೆಯಲ್ಲಿ ಸ್ಪಷ್ಟ ತೀರ್ಮಾನ ಹೊರಬೀಳಲಿದೆ. ಫೆ.16ರಂದು ಆಡಳಿತಾರೂಢ ಕಾಂಗ್ರೆಸ್‍ನ ಕೊನೆಯ ಬಜೆಟ್‍ನ್ನು ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿದ್ದಾರೆ. ಈ ವೇಳೆ ಅವರು ಬಿಪಿಎಲ್ ಕುಟುಂಬಗಳಿಗೆ ವಸ್ತ್ರ ಭಾಗ್ಯವನ್ನು ಘೋಷಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಈಗಾಗಲೇ ಜವಳಿ ಇಲಾಖೆಯು ಈ ಸಂಬಂಧ ಕರಡು ಯೋಜನೆಯನ್ನು ಸಿದ್ದಪಡಿಸಿದ್ದು ಆರ್ಥಿಕ ಇಲಾಖೆಗೆ ಕಳುಹಿಸಿಕೊಟ್ಟಿದೆ. ಒಂದು ವೇಳೆ ವಸ್ತ್ರಭಾಗ್ಯಕ್ಕೆ ಆರ್ಥಿಕ ಇಲಾಖೆಯಿಂದ ಒಪ್ಪಿಗೆ ದೊರೆತರೆ ಘೋಷಣೆಯಾಗುವುದು ಬಹುತೇಕ ಖಚಿತ. 29ರಂದು ನಡೆಯಲಿರುವ ಸಚಿವ ಸಂಪುಟ ಸಭೆ ಹಾಗೂ ಇಲಾಖಾವಾರು ಬಜೆಟ್ ಸಭೆಯಲ್ಲಿ ನಾವು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ವಸ್ತ್ರ ಭಾಗ್ಯವನ್ನು ಬಜೆಟ್‍ನಲ್ಲಿ ಘೋಷಣೆ ಮಾಡುವಂತೆ ಮನವಿ ಮಾಡಲಿದ್ದೇವೆ. ಈಗಾಗಲೇ ಇಲಾಖೆ ವತಿಯಿಂದ ಆರ್ಥಿಕ ಇಲಾಖೆಗೆ ಕರಡು ಯೋಜನೆಯನ್ನು ಕಳುಹಿಸಿಕೊಟ್ಟಿದ್ದೇವೆ. ನಮಗೆ ಒಪ್ಪಿಗೆ ದೊರೆಯುವ ವಿಶ್ವಾಸವಿದೆ ಎಂದು ಜವಳಿ ಸಚಿವ ರುದ್ರಪ್ಪ ಲಮಾಣಿ ಹೇಳಿದ್ದಾರೆ.

ಯೋಜನೆಗೆ ವಾರ್ಷಿಕವಾಗಿ 550 ಕೋಟಿ ವೆಚ್ಚವಾಗಲಿದೆ. ಮಹಿಳೆಯರಿಗೆ ಸೀರೆ, ಕುಪ್ಪಸ, ಪುರಷರಿಗೆ ಪಂಚೆ, ಶರ್ಟ್ ನೀಡುವುದು ಸರ್ಕಾರಕ್ಕೆ ಹೊರೆಯಾದರೂ ಚಿಂತೆಯಿಲ್ಲ. ಜನತೆಗೆ ಅನುಕೂಲ ಕಲ್ಪಿಸಿಕೊಡುವ ದೃಷ್ಟಿಯಿಂದ ಈ ಯೋಜನೆಯನ್ನು ಜಾರಿ ಮಾಡಲು ತೀರ್ಮಾನಿಸಿದ್ದೇವೆ ಎಂದು ಅವರು ಹೇಳಿದ್ದಾರೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹೆಸರಿನಲ್ಲಿ ಇಂದಿರಾ ವಸ್ತ್ರ ಯೋಜನೆ ಎಂದು ಹೆಸರಿಡಲಾಗುವುದು. ಈಗಾಗಲೇ ಇಂದಿರಾ ಕ್ಯಾಂಟೀನ್, ಇಂದಿರಾ ನಗರಸಾರಿಗೆ ಜಾರಿ ಮಾಡಿರುವಾಗ ಈ ಯೋಜನೆಯಿಂದ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಒಂದು ಕೋಟಿಗೂ ಹೆಚ್ಚು ಬಿಪಿಎಲ್ ಕುಟುಂಬಗಳಿವೆ. ಜೊತೆಗೆ ನೇಕಾರರ ಸಮುದಾಯಕ್ಕೂ ಇದು ಅನುಕೂಲವಾಗಲಿದೆ. ಬಟ್ಟೆಗಳನ್ನು ನೇಕಾರರಿಂದಲೇ ಖರೀದಿ ಮಾಡುವುದರಿಂದ ಸಂಕಷ್ಟದಲ್ಲಿರುವವರಿಗೆ ಆರ್ಥಿಕ ನೆರವು ಸಿಗುತ್ತದೆ. ಇದರಿಂದ ಅವರಿಗೆ ಉತ್ತೇಜನ ಸಿಗಲಿದೆ ಎಂದು ಹೇಳಿದ್ದಾರೆ. ಇಂದಿರಾ ವಸ್ತ್ರ ಯೋಜನೆ ಜೊತೆಗೆ ಪಶುಸಂಗೋಪನಾ ಇಲಾಖೆಯಿಂದ ಬಡವರಿಗೆ ಉಚಿತವಾಗಿ ಆಡು, ಕುರಿ, ಕೋಳಿಗಳನ್ನು ವಿತರಣೆ ಮಾಡಲು ಸರ್ಕಾರ ಮುಂದಾಗಿದೆ. ಇವೆಲ್ಲವೂ ಬಜೆಟ್‍ನಲ್ಲಿ ಘೋಷಣೆಯಾಗಲಿದೆ ಎಂದು ತಿಳಿದುಬಂದಿದೆ.

Facebook Comments

Sri Raghav

Admin