ಬಿಪಿಎಲ್ ಪಡಿತರ ಚೀಟಿದಾರರಿಗೆ ನೀಡುತ್ತಿದ್ದ ಅಕ್ಕಿ ಪ್ರಮಾಣ 5 ರಿಂದ 8ಕೆಜಿಗೆ ಹೆಚ್ಚಳ, ಏಪ್ರಿಲ್‍ನಿಂದ ಜಾರಿ

ಈ ಸುದ್ದಿಯನ್ನು ಶೇರ್ ಮಾಡಿ

CM-Photo

ಬೆಂಗಳೂರು,ಫೆ.8-ಬಿಪಿಎಲ್ ಪಡಿತರ ಚೀಟಿದಾರರಿಗೆ ನೀಡುತ್ತಿರುವ ಅಕ್ಕಿ ಪ್ರಮಾಣವನ್ನು ಪ್ರತಿ ಯೂನಿಟ್‍ಗೆ 5 ಕೆ.ಜಿಯಿಂದ 8ಕೆಜಿಗೆ ಏರಿಸಲಾಗಿದ್ದು, ಏಪ್ರಿಲ್‍ನಿಂದ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕ್ಷೀರಭಾಗ್ಯ ಯೋಜನೆಯಲ್ಲಿ ಶಾಲಾ ಮಕ್ಕಳಿಗೆ ಐದು ದಿನ ಹಾಲು ವಿತರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.  ಆಧಾರ್ ಲಿಂಕ್ ಮಾಡಿಕೊಳ್ಳದ ಬಿಪಿಎಲ್ ಕಾರ್ಡುದಾರರಿಗೆ ಎರಡು ತಿಂಗಳು ಪಡಿತರ ಧಾನ್ಯ ವಿತರಣೆ ಮಾಡಲು ಮತ್ತು ಗ್ಯಾಸ್ ಸಂಪರ್ಕವಿದ್ದರಿಗೂ ಸೀಮೆಎಣ್ಣೆ ನೀಡಲು ನಿರ್ಧಾರ ಮಾಡಿರುವುದಾಗಿ ಸಭೆಯಲ್ಲಿ ಅವರು ಘೋಷಣೆ ಮಾಡಿದರು.

ಶಾಸಕರ ಅನುದಾನವನ್ನು ಎರಡು ಕೋಟಿಯಿಂದ 5 ಕೋಟಿಗೆ ಹೆಚ್ಚಿಸಬೇಕು, ಬೆಂಗಳೂರು ನಗರ ಹೊರವಲಯದ 1600 ಬಗರ್‍ಹುಕುಂ ಸಾಗುವಳಿದಾರರಿಗೆ ಕಾನೂನು ರಕ್ಷಣೆ ನೀಡಬೇಕು, ಬಿಡಿಎ ಸ್ವಾಧೀನಪಡಿಸಿಕೊಂಡಿರುವ ಜಾಗದಲ್ಲಿ ಬಡವರು ನಿರ್ಮಿಸಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸಬೇಕೆಂದು ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಮಾಡಿದ ಆಗ್ರಹಕ್ಕೆ ಪೂರಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕರ ಅನುದಾನವನ್ನು ಮೂರು ಕೋಟಿಗೆ ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಮತ್ತು ಇನ್ನಿತರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು.

BPL-Card--01

ಬರದ ಹಿನ್ನೆಲೆಯಲ್ಲಿ ಕೊಳವೆ ಬಾವಿಗಳನ್ನು ಕೊರೆಸಲು ಹೆಚ್ಚಿನ ಅನುದಾನ ನೀಡಬೇಕೆಂದು ಹಲವು ಶಾಸಕರು ಸಭೆಯಲ್ಲಿ ಒತ್ತಡ ತಂದಿದ್ದಾರೆ. ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಿರಂತರ ಬರವಿರುವ ಕಾರಣ ಬರ ನಿರ್ವಹಣೆ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕಾಗಿದೆ.   ಈ ಹಿನ್ನೆಲೆಯಲ್ಲಿ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು. ಸಚಿವರು ಕೇವಲ ತಮ್ಮ ಬೆಂಬಲಿಗರ ಮಾತುಗಳನ್ನಷ್ಟೇ ಕೇಳದೆ ಶಾಸಕರ ಅಹವಾಲುಗಳನ್ನೂ ಆಲಿಸಿ ಅಭಿವೃದ್ಧಿ ಕೆಲಸಗಳಿಗೆ ಪೂರಕವಾಗಿ ಸ್ಪಂದಿಸಬೇಕು, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಒದಗಿಸುವ ಕೆಲಸವನ್ನು ಸಮಾರೋಪಾದಿಯಲ್ಲಿ ಕೈಗೊಳ್ಳುವತ್ತ ಸಚಿವರು, ಶಾಸಕರು ಕಾರ್ಯೋನ್ಮುಖವಾಗಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಸೀಮೆಎಣ್ಣೆ ಅಗತ್ಯವಿದ್ದು , ಗ್ಯಾಸ್ ಸಂಪರ್ಕ ಇರುವವರೆಗೂ ಸೀಮೆಎಣ್ಣೆ ನೀಡಬೇಕೆಂದು ಶಾಸಕರು ಮಾಡಿದ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿಗಳು ಗ್ಯಾಸ್ ಸಂಪರ್ಕ ಇರುವವರಿಗೂ ಸೀಮೆಎಣ್ಣೆ ನೀಡುವಂತೆ ಸೂಚಿಸಿದರು.   ಆಧಾರ್‍ಕಾರ್ಡ್ ಲಿಂಕ್ ಮಾಡದ ಪಡಿತರ ಚೀಟಿಗಳನ್ನು ರದ್ದು ಮಾಡಲು ಆಹಾರ ಇಲಾಖೆ ಮುಂದಾಗಿದೆ. ಇದಕ್ಕೆ ಕಾಲಾವಕಾಶ ನೀಡಬೇಕೆಂದು ಕೆಲ ಶಾಸಕರು ಮನವಿ ಮಾಡಿದ ಹಿನ್ನೆಲೆಯಲ್ಲಿ ಇನ್ನು ಎರಡು ತಿಂಗಳು ಕಾಲಾವಕಾಶ ನೀಡುವಂತೆ ನಿರ್ದೇಶನ ನೀಡಿದರು. ಅಲ್ಲದೆ ಕಲಾಪದಲ್ಲಿ ಎಲ್ಲ ಸಚಿವರು, ಶಾಸಕರು ಕಡ್ಡಾಯವಾಗಿ ಹಾಜರಿರಬೇಕು. ಪ್ರತಿಪಕ್ಷಗಳು ಸರ್ಕಾರದ ವಿರುದ್ದ ಮಾಡುವ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಬೇಕೆಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin