ಬಿಪಿಎಲ್ ಪಡಿತರ ಚೀಟಿದಾರರಿಗೊಂದು ಸಿಹಿಸುದ್ದಿ..!

ಈ ಸುದ್ದಿಯನ್ನು ಶೇರ್ ಮಾಡಿ

Ration--01

ಬೆಂಗಳೂರು,ನ.9-ಬಿಪಿಎಲ್ ಪಡಿತರ ಚೀಟಿದಾರರು ಇನ್ನು ಮುಂದೆ ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಾದರೂ ತಮ್ಮ ಪಾಲಿನ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೊದಲು ನೊಂದಾಯಿತ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯುವ ವ್ಯವಸ್ಥೆ ಇತ್ತು. ಈ ಅನಿವಾರ್ಯತೆಯ ಕಾರಣಕ್ಕಾಗಿ ನ್ಯಾಯಬೆಲೆ ಅಂಗಡಿಯವರು ಫಲಾನುಭವಿಗಳ ಜೊತೆ ಒರಟಾಗಿ ಮಾತನಾಡುತ್ತಿದ್ದರು.

ಇನ್ನು ಮುಂದೆ ಈ ರೀತಿಯ ಮುಜುಗರ ತಪ್ಪಲಿದೆ. ರಾಜ್ಯದ ಯಾವುದೇ ಭಾಗದ ನ್ಯಾಯಬೆಲೆ ಅಂಗಡಿಯಲ್ಲಿ ನೋಂದಣಿಯಾಗಿ ಆಧಾರ್ ಸಂಖ್ಯೆಯನ್ನು ಸಂಪರ್ಕಿಸಿದ್ದರೆ ಸಾಕು. ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಾದರೂ ಬಿಪಿಎಲ್ ಚೀಟಿದಾರರು ಪಡಿತರ ಪಡೆದುಕೊಳ್ಳಬಹುದು ಎಂದರು. ಇನ್ನು ಮುಂದೆ ಪಡಿತರಚೀಟಿ ಪಡೆಯಲು ಆಧಾರ್ ಸಂಖ್ಯೆ ಇದ್ದರೆ ಸಾಕು, ಮನೆ ಸಂಖ್ಯೆ, ವಿದ್ಯುತ್ ಬಿಲ್ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಪಿಎಲ್ ಕಾರ್ಡ್‍ಗಾಗಿ ಇದುವರೆಗೂ 9.05 ಲಕ್ಷ ಅರ್ಜಿಗಳು ಬಂದಿವೆ. ಅದರಲ್ಲಿ 4.05 ಲಕ್ಷ ಕಾರ್ಡ್‍ಗಳು ಮುದ್ರಣಗೊಂಡಿವೆ. ಪ್ರತಿದಿನ 40 ಸಾವಿರ ಕಾರ್ಡ್‍ಗಳು ಮುದ್ರಣಗೊಳ್ಳುತ್ತಿವೆ. ಇನ್ನು ಕೆಲವು ಕಾರ್ಡ್‍ನ ಮಾಹಿತಿಗಳು ಜಿಲ್ಲಾಧಿಕಾರಿ, ತಹಸೀಲ್ದಾರ್ ಹಾಗೂ ಜನಸ್ನೇಹಿ ಕೇಂದ್ರಗಳಲ್ಲಿ ಉಳಿದಿದ್ದು, ಸುಮಾರು 5 ಲಕ್ಷ ಕಾರ್ಡ್‍ಗಳ ವಿತರಣೆ ಬಾಕಿ ಇದೆ. ಮಾಹಿತಿ ಸಂಪೂರ್ಣ ಲಭ್ಯವಾದರೆ 10 ದಿನದೊಳಗಾಗಿ ಫಲಾನುಭವಿಗಳ ಮನೆಗೆ ಕಾರ್ಡ್‍ಗಳನ್ನು ಕಳುಹಿಸಲಾಗುವುದು ಎಂದು ತಿಳಿಸಿದರು.

ಅನಿಲಭಾಗ್ಯ ಯೋಜನೆ ಫಲಾನುಭವಿಗಳ ಆಯ್ಕೆಗೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು , ಶಾಸಕರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಈ ಸಮಿತಿಗೆ ಶಾಸಕರು ವಾರದೊಳಗಾಗಿ ಫಲಾನುಭವಿಗಳ ಪಟ್ಟಿ ಕೊಡಬೇಕು. ಸರ್ಕಾರ ಜಿಲ್ಲಾವಾರು ಕೋಟಾವನ್ನು ನಿಗದಿಮಾಡಿದ್ದು ಮೊದಲ ಹಂತದಲ್ಲಿ 10 ಲಕ್ಷ ಮಂದಿಗೆ ಅನಿಲ ಭಾಗ್ಯ ಯೋಜನೆಯಡಿ ಉಚಿತ ಸಂಪರ್ಕ, ಎರಡು ರಿಫೀಲಿಂಗ್ ಸಿಲಿಂಡ್, ಗ್ಯಾಸ್ ಸ್ಟವ್ ನೀಡಲಾಗುವುದು. 2ನೇ ಹಂತದಲ್ಲಿ 10 ಲಕ್ಷ ಫಲಾನುಭವಿಗಳಿಗೆ ಅನಿಲಭಾಗ್ಯ ಸಂಪರ್ಕ ನೀಡಲಾಗುತ್ತದೆ ಎಂದು ಹೇಳಿದರು.

Facebook Comments

Sri Raghav

Admin