ಬಿಬಿಎಂಪಿಗೆ ಈ ಬಾರಿ ಬಿಜೆಪಿ ಮೇಯರ್ : ಕಮಲ ಪಾಳೆಯ ನಾಯಕರ ವಿಶ್ವಾಸ

ಈ ಸುದ್ದಿಯನ್ನು ಶೇರ್ ಮಾಡಿ

BJP-01

ಬೆಂಗಳೂರು, ಆ.13- ಹಿಂಬಾಗಿಲ ಮೂಲಕ ಬಿಬಿಎಂಪಿಯಲ್ಲಿ ಅಧಿಕಾರ ಗದ್ದುಗೆ ಹಿಡಿದಿರುವ ಕಾಂಗ್ರೆಸ್ ಆಡಳಿತವನ್ನು ಕೊನೆಗಾಣಿಸಿ ಈ ಬಾರಿ ಬಿಜೆಪಿ ಅಧಿಕಾರ ಹಿಡಿಯಲಿದೆ ಎನ್ನುವ ಮೂಲಕ ಕೇಂದ್ರ ಸಚಿವ ಅನಂತ್‍ಕುಮಾರ್ ಜೆಡಿಎಸ್ ಜತೆ ಮೈತ್ರಿಗೆ ಬಿಜೆಪಿ ಸಿದ್ಧವಿದೆ ಎಂಬ ಸಂದೇಶ ರವಾನಿಸಿದ್ದಾರೆ.  ಪಕ್ಷದ ಕಚೇರಿಯಲ್ಲಿ ನಡೆದ ಬೆಂಗಳೂರು ನಗರ ಘಟಕ ಕಾರ್ಯಕಾರಿಣಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಬಿಜೆಪಿ ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯುವುದು ಶತಸಿದ್ಧ. ಅದನ್ನು ಕಾದು ನೋಡಿ ಎಂದು ಮಾರ್ಮಿಕವಾಗಿ ತಿಳಿಸಿದರು.  ಕಳೆದ ಚುನಾವಣೆಯಲ್ಲಿ ಬೆಂಗಳೂರು ನಗರದ ಜನತೆ ಬಿಜೆಪಿಗೆ ಸ್ಪಷ್ಟ ಜನಾದೇಶ ನೀಡಿದ್ದರು.

ಆದರೆ, ಕಾಂಗ್ರೆಸ್ ವಾಮಮಾರ್ಗದ ಮೂಲಕ ಮೇಯರ್ ಚುನಾವಣೆಯಲ್ಲಿ ಅಧಿಕಾರ ಹಿಡಿಯಿತು. ಈ ಬಾರಿ ಅದಕ್ಕೆ ಅವಕಾಶ ನೀಡುವುದಿಲ್ಲ ಎನ್ನುವ ಮೂಲಕ ಜೆಡಿಎಸ್ ಜತೆ ಮೈತ್ರಿಗೆ ಸಿದ್ಧ ಎಂದು ಅವರು ಪರೋಕ್ಷವಾಗಿ ಹೇಳಿದ್ದಾರೆ.  ಮುಂದಿನ ತಿಂಗಳು ನಡೆಯಲಿರುವ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಶತಾಯ-ಗತಾಯ ಅಧಿಕಾರ ಹಿಡಿಯಲು ಈಗಾಗಲೇ ಸಿದ್ಧತೆ ನಡೆಸಿದ್ದೇವೆ. ಯಾರ ಜತೆ ಮೈತ್ರಿ ಮಾಡಿಕೊಳ್ಳಬೇಕು ಎಂಬುದನ್ನು ನಗರ ಘಟಕದ ಅಧ್ಯಕ್ಷರು, ಶಾಸಕರು, ಸಂಸದರು ಮತ್ತು ಪದಾಧಿಕಾರಿಗಳ ಜತೆ ಚರ್ಚೆ ನಡೆಸಲಾಗುವುದು. ಯಾವುದೇ ಕಾರಣಕ್ಕೂ ಬಿಬಿಎಂಪಿಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಅನಂತ್‍ಕುಮಾರ್ ನುಡಿದರು.

ಶತಮಾನದ ಆರ್ಥಿಕ ಸುಧಾರಣೆ: ಸಂಸತ್ತಿನ ಉಭಯ ಸದನಗಳಲ್ಲಿ ಕಳೆದ ವಾರ ಬಹುಮತದಿಂದ ಅಂಗೀಕೃತವಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಈ ಶತಮಾನದ ಆರ್ಥಿಕ ಸುಧಾರಣೆ ಎಂದು ಅನಂತ್‍ಕುಮಾರ್ ಬಣ್ಣಿಸಿದರು.  ಹಲವು ಅಡೆತಡೆಗಳ ನಡುವೆಯೇ ಜಿಎಸ್‍ಟಿಯನ್ನು ಬಹುಮತದಿಂದ ಅಂಗೀಕಾರ ಮಾಡಲಾಯಿತು. ಆದಷ್ಟು ಶೀಘ್ರದಲ್ಲೇ ಇದನ್ನು ಎಲ್ಲ ರಾಜ್ಯಗಳೂ ಅನುಷ್ಠಾನ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ನಾನೇ ಮನವಿ ಮಾಡುವುದಾಗಿ ತಿಳಿಸಿದರು. ಜಿಎಸ್‍ಟಿಯಿಂದ ಒಂದೇ ದೇಶ ಒಂದೇ ತೆರಿಗೆ ಜಾರಿಯಾಗಲಿದೆ. ಈಗಾಗಲೇ ಕೆಲವು ರಾಜ್ಯಗಳು ಇದನ್ನು ಅನುಷ್ಠಾನ ಮಾಡಿವೆ. ಉಳಿದ ರಾಜ್ಯಗಳು ಅಂಗೀಕಾರ ಮಾಡಿಕೊಳ್ಳುವಂತೆ ನಾನೇ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

ಅನಾರೋಗ್ಯದ ನಡುವೆಯೂ ಜಿಎಸ್‍ಟಿ ಮಸೂದೆ ಅಂಗೀಕಾರದ ವೇಳೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಂಸತ್‍ಗೆ ಬಂದಿದ್ದು ನನಗೆ ಅತೀವ ಸಂತಸ ತಂದಿತು. ಇದರಿಂದ ವೈಯಕ್ತಿಕವಾಗಿ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.  ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ತೀರ್ಮಾನ ಕೈಗೊಂಡರೂ ಅದಕ್ಕೆ ನಮ್ಮ ಪಕ್ಷ ಬದ್ಧವಾಗಿರುತ್ತದೆ. ನಾಡು-ನುಡಿ, ಜಲದ ವಿಷಯದಲ್ಲಿ ನಾವೆಲ್ಲರೂ ಒಂದೇ ಎಂದರು. ಆಸ್ತಿ ಘೋಷಣೆ ಮಾಡಿಕೊಳ್ಳಲಿ: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಯಾವುದೇ ಜನಪ್ರತಿನಿಧಿಗಳು ನಿಗದಿತ ಅವಧಿಯೊಳಗೆ ತಮ್ಮ ಆಸ್ತಿ ವಿವರಗಳನ್ನು ಘೋಷಣೆ ಮಾಡಿಕೊಳ್ಳುವುದು ಉತ್ತಮ ಎಂದು ಸಲಹೆ ಮಾಡಿದರು.

ಚರ-ಸ್ಥಿರಾಸ್ತಿ, ಬ್ಯಾಂಕ್‍ನಿಂದ ಪಡೆದಿರುವ ಸಾಲ ಸೇರಿದಂತೆ ತಮ್ಮ ಕುಟುಂಬದ ಸದಸ್ಯರು ಹೊಂದಿರುವ ಆಸ್ತಿ ವಿವರಗಳನ್ನು ಘೋಷಣೆ ಮಾಡಿಕೊಳ್ಳಬೇಕು. ಪಾರದರ್ಶಕತೆ ಮತ್ತು ಆರ್ಥಿಕ ಶಿಸ್ತು ಇದರಿಂದ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.  ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಅನೇಕ ಸಚಿವರು ತಮ್ಮ ಆಸ್ತಿ ವಿವರಗಳನ್ನು ಘೋಷಣೆ ಮಾಡಿಕೊಂಡಿದ್ದಾರೆ. ಅದೇ ರೀತಿ ಮುಖ್ಯಮಂತ್ರಿ, ಸಚಿವರು, ಸಂಸದರು, ಪಾಲಿಕೆ ಸದಸ್ಯರು ತಮ್ಮ ಆಸ್ತಿ ವಿವರಗಳನ್ನು ಘೋಷಣೆ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.

► Follow us on –  Facebook / Twitter  / Google+

Facebook Comments

Sri Raghav

Admin