ಬಿಬಿಎಂಪಿಗೆ ಹೊಸ ಪ್ರದೇಶಗಳಿಗೆ ಕಾವೇರಿ ನೀರು ಪೂರೈಕೆ ಕುರಿತು ವರದಿ ನೀಡಲು ಸಿಎಂ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

cm-m

ಬೆಂಗಳೂರು, ಆ.16– ಕಾವೇರಿ 5ನೆ ಹಂತದ ಯೋಜನೆ ಆರಂಭಕ್ಕೆ ಇನ್ನೂ ಸಮಯಾವಕಾಶ ಬೇಕಾಗಿರುವುದರಿಂದ ತಕ್ಷಣಕ್ಕೆ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೊಸದಾಗಿ ಸೇರ್ಪಡೆಯಾದ ಪ್ರದೇಶಗಳಿಗೆ ಸೋರಿಕೆಯನ್ನು ತಡೆಗಟ್ಟಿ ಉಳಿತಾಯವಾಗುವ ನೀರನ್ನು ಪೂರೈಸುವ ಸಾಧಕ-ಬಾಧಕಗಳ ಬಗ್ಗೆ ವಾರದೊಳಗೆ ವರದಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.  ಗೃಹ ಕಚೇರಿ ಕೃಷ್ಣಾದಲ್ಲಿ ಬಿಡಬ್ಲ್ಯೂಎಸ್‍ಎಸ್‍ಬಿ ಮತ್ತು ಬಿಬಿಎಂಪಿ ಅಧಿಕಾರಿಗಳ ಜತೆ ಕಾವೇರಿ 5ನೆ ಹಂತದ ನೀರು ಪೂರೈಕೆ ಬಗ್ಗೆ ಸಭೆ ನಡೆಸಿದ ಮುಖ್ಯಮಂತ್ರಿಯವರು, ಬೆಂಗಳೂರಿನ ಸುತ್ತಮುತ್ತಲಿನ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳಿಗೆ ಪ್ರತಿದಿನ ಕಾವೇರಿ ಯೋಜನೆ ಹಂತದಿಂದ 77 ದಶಲಕ್ಷ ಲೀಟರ್ ನೀರನ್ನು ಪೂರೈಸುವ ಬಗ್ಗೆ ಮಾಹಿತಿ ನೀಡಿದರು.

5ನೆ ಹಂತದ ಕಾವೇರಿ ಯೋಜನೆ ಕೈಗಾ ಹಣಕಾಸು ನೆರವು ಪಡೆಯಲು ಸಮಯಾವಕಾಶ ನೀಡಿದ್ದು, ಕನಿಷ್ಠವೆಂದರೂ ಯೋಜನೆ ಪ್ರಾರಂಭಿಸಲು ಎರಡು ವರ್ಷಗಳ ಸಮಯ ಬೇಕು. ಆವರೆಗೂ ಬೆಂಗಳೂರಿನ ಹೊಸ ಪ್ರದೇಶಗಳಿಗೆ ನೀರು ಪೂರೈಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.  ಬೆಂಗಳೂರು ದಕ್ಷಿಣ ವಲಯದಲ್ಲಿ 174 ಕೋಟಿ ರೂ. ಖರ್ಚು ಮಾಡಿ ಲೆಕ್ಕ ಸಿಗದ ನೀರನ್ನು ಉಳಿತಾಯ ಮಾಡುವ ಯೋಜನೆ ಜಾರಿಯಲ್ಲಿದೆ ಎಂದರು. ಮೂರು ವರ್ಷಗಳಿಂದ ಕಾಮಗಾರಿ ಪೂರೈಸಿ ಸುಮಾರು 33 ಎಂಎಲ್‍ಡಿ ನೀರನ್ನು ಪ್ರತಿನಿತ್ಯ ಉಳಿತಾಯ ಮಾಡಲಾಗುತ್ತಿದೆ. ಪಶ್ಚಿಮ ವಿಭಾಗದಲ್ಲಿ 308 ಕೋಟಿ, ಕೇಂದ್ರ ವಿಭಾಗದಲ್ಲಿ 154 ಕೋಟಿ ಸೇರಿ ಒಟ್ಟು 650 ಕೋಟಿ ರೂ. ವೆಚ್ಚದಲ್ಲಿ ನೀರಿನ ಉಳಿತಾಯ ಯೋಜನೆ ಕೈಗೊಳ್ಳಬೇಕು.

ಬಾಕಿ ಉಳಿದಿರುವ ಎರಡು ವಲಯಗಳಲ್ಲಿ ನಾಲ್ಕು ತಿಂಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ. ಆದ್ದರಿಂದ ಸುಮಾರು 120 ಎಂಎಲ್‍ಡಿ ನೀರು ಪ್ರತಿದಿನ ಲಭ್ಯವಾಗಲಿದೆ. ಹೊಸ ಪ್ರದೇಶಗಳಿಗೆ 180 ಎಂಎಲ್‍ಡಿ ನೀರು ಅಗತ್ಯವಿದೆ. ಈ ಭಾಗಗಳಿಗೆ ಪೈಪ್‍ಲೈನ್ ಹಾಕಲು 1885 ಕೋಟಿ ಅಗತ್ಯವಿದ್ದು, ರಾಜ್ಯಸರ್ಕಾರ 1200 ಕೋಟಿ ರೂ.ಗಳನ್ನು ಖರ್ಚು ಮಾಡಿ, ಬಿಡಬ್ಲ್ಯೂಎಸ್‍ಎಸ್‍ಬಿ 300 ಕೋಟಿ ರೂ. ಖರ್ಚು ಮಾಡಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ತಕ್ಷಣ ಹೊಸ ಪ್ರದೇಶಗಳಿಗೆ ನೀರು ಪೂರೈಕೆ ಮಾಡಲು ಸಾಧ್ಯವಿದೆ ಎಂದು ಅಧಿಕಾರಿಗಳಿಗೆ ವಿವರಿಸಿದರು.
ಈ ಎಲ್ಲ ಯೋಜನೆಗಳ ರೂಪುರೇಷೆ ಮತ್ತು ಖರ್ಚು-ವೆಚ್ಚದ ಸಮಗ್ರ ಮಾದರಿಯನ್ನು ಸಿದ್ಧಪಡಿಸಿ ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಬಾಕಿ ಇರುವ ಮೂರು ವಲಯಗಳಲ್ಲಿ ನೀರು ಸೋರಿಕೆ ಘಟನೆ ಕೈಗೆತ್ತಿಕೊಂಡರೆ ಕನಿಷ್ಟ 240 ಎಂಎಲ್‍ಡಿ ನೀರು ಲಭ್ಯವಾಗಲಿದೆ. ಬೆಂಗಳೂರಿಗೆ 263 ಎಂಎಲ್‍ಡಿ ನೀರು ಬೇಡಿಕೆ ಇದೆ ಎಂದು ಅಧಿಕಾರಿಗಳು ತಿಳಿಸಿದರು.
ಒಂದೆಡೆ ಸೋರಿಕೆಯಾದ ನೀರು ಮತ್ತು ಸಂಸ್ಕರಿಸಿದ ನೀರನ್ನು ಮರು ಬಳಕೆ ಮಾಡುವ ಯೋಜನೆ ನಡೆಯುತ್ತಿದ್ದಲ್ಲಿ ದೀರ್ಘಕಾಲದ ಯೋಜನೆ 4196 ಕೋಟಿ ರೂ. ವೆಚ್ಚದ 5ನೆ ಹಂತದ ಕಾವೇರಿ ನೀರು ಪೂರೈಕೆ ಯೋಜನೆಗಳ ಅಂತಿಮ ಸ್ಪರ್ಶ ನೀಡಲಿ ಎಂದು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin