ಬಿಬಿಎಂಪಿಯಲ್ಲಿ ಕಾಂಗ್ರೆಸ್ ಲೆಕ್ಕಾಚಾರ ಸಫಲ : ಜೆಡಿಎಸ್ ಗೆ ಉಪ ಮೇಯರ್ ಹಾಗೂ 4 ಸ್ಥಾಯಿ ಸಮಿತಿ

ಈ ಸುದ್ದಿಯನ್ನು ಶೇರ್ ಮಾಡಿ

JDS--01

ಬೆಂಗಳೂರು, ಸೆ.24- ಬಿಬಿಎಂಪಿಯಲ್ಲಿ ಕಾಂಗ್ರೆಸ್ ಜತೆಗಿನ ಮೈತ್ರಿ ಮುಂದುವರಿಸಲು ಜೆಡಿಎಸ್ ಸಮ್ಮತಿ ವ್ಯಕ್ತಪಡಿಸಿದ್ದು, ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿ ಬಿಟ್ಟುಕೊಡಲು ಸಹಮತ ಸೂಚಿಸಿದೆ. ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಉಪಮೇಯರ್ ಸ್ಥಾನ ಜೆಡಿಎಸ್‍ಗೆ ಸಿಗಲಿದ್ದು, ಮೇಯರ್ ಸ್ಥಾನ ಕಾಂಗ್ರೆಸ್ ಪಾಲಾಗಲಿದೆ. ಇದರೊಂದಿಗೆ ನಗರ ಯೋಜನೆ, ಲೆಕ್ಕಪತ್ರ, ಶಿಕ್ಷಣ ಹಾಗೂ ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿಗಳು ಜೆಡಿಎಸ್ ಪಾಲಾಗಲಿದೆ.

ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿಯವರ ನಿವಾಸದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಸಹಮತಕ್ಕೆ ಬರಲಾಗಿದೆ.
ಕಾಂಗ್ರೆಸ್ ಜತೆಗಿನ ಮೈತ್ರಿ ಮುಂದುವರಿಸಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗ್ರೀನ್ ಸಿಗ್ನಲ್ ನೀಡಿದ್ದರು. ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾದ ಅನಿವಾರ್ಯತೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾತುಕತೆ ನಡೆಸುವ ಹೊಣೆಯನ್ನು ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿಯವರಿಗೆ ವಹಿಸಲಾಗಿತ್ತು.

ಇಂದು ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಮತ್ತಿತರ ಜೆಡಿಎಸ್ ಮುಖಂಡರು ರಾಮಲಿಂಗಾರೆಡ್ಡಿಯವರೊಂದಿಗೆ ನಡೆಸಿದ ಮಾತುಕತೆ ಸಂದರ್ಭದಲ್ಲಿ ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿ ಬಿಟ್ಟುಕೊಡುವಂತೆ ಮನವಿ ಮಾಡಿಕೊಂಡರು.   ಜೆಡಿಎಸ್ ಮನವಿಗೆ ರಾಮಲಿಂಗಾರೆಡ್ಡಿಯವರು ಎಸ್ ಎಂದಿರುವ ಹಿನ್ನೆಲೆಯಲ್ಲಿ ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿ ಸ್ಥಾನಗಳು ಜೆಡಿಎಸ್ ಪಾಲಾಗಲಿವೆ.   ಉಳಿದ ಎಂಟು ಸಮಿತಿಗಳಲ್ಲಿ ಎರಡು ಸಮಿತಿಗಳನ್ನು ಪಕ್ಷೇತರ ಸದಸ್ಯರಿಗೆ ಬಿಟ್ಟುಕೊಡುವ ಸಾಧ್ಯತೆಯಿದ್ದು, ಉಳಿದ ಆರು ಸಮಿತಿಗಳು ಕಾಂಗ್ರೆಸ್‍ಗೆ ಒಲಿಯಲಿವೆ.

ಇದೇ 28ರಂದು ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಅಭ್ಯರ್ಥಿ ಮೇಯರ್ ಸ್ಥಾನಕ್ಕೆ ಹಾಗೂ ಉಪಮೇಯರ್ ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ.  ಮೇಯರ್, ಉಪಮೇಯರ್ ಚುನಾವಣೆ ಮುಗಿದ ನಂತರ ಅಕ್ಟೋಬರ್‍ನಲ್ಲಿ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ಚುನಾವಣೆ ನಡೆಸಲು ಪ್ರಾದೇಶಿಕ ಆಯುಕ್ತರು ತೀರ್ಮಾನಿಸಿದ್ದಾರೆ.

11.30ರೊಳಗೆ ಹಾಜರಿ ಕಡ್ಡಾಯ:

ಈ ಬಾರಿ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಮತ ಹಕ್ಕು ಹೊಂದಿರುವ ಮತದಾರರು 11.30ರೊಳಗೆ ಸಭಾಭವನದಲ್ಲಿ ಹಾಜರಿರಬೇಕು ಎಂದು ಪ್ರಾದೇಶಿಕ ಆಯುಕ್ತೆ ಜಯಂತಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.  ಸಮಯ ಮೀರಿ ಬರುವ ಸದಸ್ಯರುಗಳಿಗೆ ಯಾವುದೇ ಕಾರಣಕ್ಕೂ ಸಭಾಂಗಣ ಪ್ರವೇಶಿಸಲು ಅವಕಾಶ ನೀಡಬಾರದು ಎಂದು ಕೌನ್ಸಿಲ್ ಅಧಿಕಾರಿಗಳಿಗೆ ಜಯಂತಿಯವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.  ಕಳೆದ ಬಾರಿಯ ಚುನಾವಣೆಯಲ್ಲಿ ಸಂಸದರಾದ ರಾಜೀವ್ ಚಂದ್ರಶೇಖರ್ ಹಾಗೂ ಪಿ.ಸಿ.ಮೋಹನ್ ಅವರು ಸಕಾಲಕ್ಕೆ ಮತದಾನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಆ ಸಂದರ್ಭದಲ್ಲಿ ಆ ಇಬ್ಬರು ಸದಸ್ಯರನ್ನು ಭದ್ರತಾ ಸಿಬ್ಬಂದಿಗಳು ಒಳ ಪ್ರವೇಶಿಸಲು ಅವಕಾಶ ನಿರಾಕರಿಸಿದಾಗ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿತ್ತು. ಹೀಗಾಗಿ ಈ ಬಾರಿ ಯಾವುದೇ ಕಾರಣಕ್ಕೂ ಸಕಾಲಕ್ಕೆ ಆಗಮಿಸದ ಸದಸ್ಯರಿಗೆ ಮತದಾನದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡದಿರಲು ಜಯಂತಿಯವರು ಈ ನಿರ್ಧಾರ ಕೈಗೊಂಡಿದ್ದಾರೆ.

Facebook Comments

Sri Raghav

Admin