ಬಿಬಿಎಂಪಿಯಲ್ಲಿ ಕೋಟ್ಯಂತರ ರೂ.ಗಳ ಜಾಹೀರಾತು ಅವ್ಯವಹಾರ, ಆಯುಕ್ತರೂ ಶಾಮೀಲು

ಈ ಸುದ್ದಿಯನ್ನು ಶೇರ್ ಮಾಡಿ

BBMP--01

ಬೆಂಗಳೂರು, ಫೆ.27- ನಗರದಲ್ಲಿ ನಿರ್ಮಿಸಲಾಗುತ್ತಿರುವ ಸ್ಕೈವಾಕ್‍ಗಳ ಮೇಲೆ ಜಾಹೀರಾತು ಅಳವಡಿಸುವ ಗುತ್ತಿಗೆಯನ್ನು ಕಪ್ಪುಪಟ್ಟಿಗೆ ಸೇರಿರುವ ಗುತ್ತಿಗೆದಾರರಿಗೆ ನೀಡುವ ಮೂಲಕ ಪಾಲಿಕೆಯಲ್ಲಿ ಕೋಟ್ಯಂತರ ರೂ.ಗಳ ಅವ್ಯವಹಾರ ನಡೆಸಲಾಗಿದೆ ಎಂದು ಗಂಭೀರ ಆರೋಪ ಮಾಡಿರುವ ಲೆಕ್ಕಪತ್ರ ಸ್ಥಾಯಿ ಸಮಿತಿ ಈ ಅವ್ಯವಹಾರದಲ್ಲಿ ಆಯುಕ್ತರು ಕೂಡ ಶಾಮೀಲಾಗಿರುವ ಶಂಕೆ ವ್ಯಕ್ತಪಡಿಸಿದೆ.  ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷೆ ನೇತ್ರಾ ನಾರಾಯಣ್, ಸದಸ್ಯರಾದ ಗೌತಮ್ ಮತ್ತಿತರರು ಜಾಹೀರಾತು ವಿಭಾಗದಲ್ಲಿ ನಡೆಯುತ್ತಿರುವ ಕೋಟ್ಯಂತರ ರೂ. ಅವ್ಯವಹಾರಗಳ ಬಗ್ಗೆ ವಿವರಿಸಿದರು.

ಜನದಟ್ಟಣೆ ಹೆಚ್ಚಾಗಿರುವ ನಗರದ ಪ್ರಮುಖ ರಸ್ತೆಗಳಲ್ಲಿ ಪಾಲಿಕೆ ವತಿಯಿಂದ ಸ್ಕೈವಾಕ್‍ಗಳನ್ನು ನಿರ್ಮಿಸಲಾಗುತ್ತಿದ್ದು, ಇವುಗಳ ಮೇಲೆ ಜಾಹೀರಾತು ಪ್ರಕಟಿಸುವುದಕ್ಕೆ ಅಧಿಕೃತ ಜಾಹೀರಾತು ಕಂಪೆನಿಗಳಿಜಗೆ ಗುತ್ತಿಗೆ ನೀಡಬೇಕು. ಆದರೆ, ಅಧಿಕಾರಿಗಳು ಕಾನೂನು ಉಲ್ಲಂಘನೆ ಮಾಡಿ ಕಪ್ಪುಪಟ್ಟಿಗೆ ಸೇರಿರುವ ಪ್ರಕಾಶ್ ಆಟ್ರ್ಸ್ ಅಕಾರ್ಡ್ ಹಾಗೂ ರಿಪ್ಪಲ್ ಮೀಡಿಯಾ ಸಂಸ್ಥೆಗೆ ನೀಡಿದೆ. ಈ ಸಂಸ್ಥೆಗಳಿಗೆ ಗುತ್ತಿಗೆ ನೀಡಬಾರದೆಂದು ತೀರ್ಮಾನಿಸಲಾಗಿದೆ. ಆದರೂ ಸಹ ಅಧಿಕಾರಿಗಳು ಕಪ್ಪುಪಟ್ಟಿಗೆ ಸೇರಿರುವ ಈ ಸಂಸ್ಥೆಗಳಿಗೆ ಗುತ್ತಿಗೆ ನೀಡಿರುವುದರ ಹಿಂದೆ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ ಎಂದು ನೇತ್ರಾ ನಾರಾಯಣ್ ಗಂಭೀರ ಆರೋಪ ಮಾಡಿದರು.

ಬಸ್ ನಿಲ್ದಾಣದಲ್ಲಿ ಈ ಸಂಸ್ಥೆಗಳು ಜಾಹೀರಾತು ಅಳವಡಿಸದೆ ತಿಂಗಳಿಗೆ 80 ಸಾವಿರ ರೂ. ಬಾಡಿಗೆ ಪಡೆದಿವೆ. ಆದರೆ, ಪಾಲಿಕೆಗೆ ಪಾವತಿಸಿರುವುದು ಮಾತ್ರ 5 ಸಾವಿರ. ಉಳಿದ 75 ಸಾವಿರ ರೂ.ಗಳನ್ನು ಅವರೇ ಪಡೆದುಕೊಂಡಿದ್ದಾರೆ. ಅವರಿಗೇಕೆ ಲಾಭ ಮಾಡಿಕೊಡಬೇಕು. ಅದರ ಬದಲು ಜಾಹೀರಾತುಗಳನ್ನು ಪಾಲಿಕೆಯೇ ಅಳವಡಿಸಿದರೆ ಆದಾಯ ಹೆಚ್ಚಳವಾಗಲಿದೆ ಎಂದು ಅಭಿಪ್ರಾಯಪಟ್ಟರು.  ಜತೆಗೆ ನಗರದಲ್ಲಿರುವ 2439 ಅನಧಿಕೃತ ಜಾಹೀರಾತು ಫಲಕಗಳಿವೆ. ಇದರಲ್ಲಿ 1841 ಫಲಕಗಳನ್ನು ತೆರವುಗೊಳಿಸಲಾಗಿದೆ ಎಂದು ಹೈಕೋರ್ಟ್‍ಗೆ ಅಧಿಕಾರಿಗಳು ವರದಿ ನೀಡಿದ್ದಾರೆ. ತೆರವುಗೊಳಿಸಿದ 1841 ಫಲಕಗಳಿಗೆ ಖರ್ಚಾದ ಹಣ ಎಷ್ಟು, ಗುತ್ತಿಗೆದಾರರು ಯಾರು, ಎಲ್ಲೆಲ್ಲಿ ತೆರವುಗೊಳಿಸಿದ್ದೀರಿ ಎಂಬ ಮಾಹಿತಿ ನೀಡಿ ಎಂದು ಮಾಹಿತಿ ಮತ್ತು ಅಧಿಕಾರ ಕೇಂದ್ರ ಆರ್‍ಟಿಐ ಅಡಿ ಅರ್ಜಿ ಸಲ್ಲಿಸಿದೆ. ಆದರೆ, ಪಾಲಿಕೆಯ ಜಾಹೀರಾತು ವಿಭಾಗದ ಅಧಿಕಾರಿಗಳು ಇದುವರೆಗೂ ಯಾವುದೇ ಮಾಹಿತಿ ನೀಡುತ್ತಿಲ್ಲ. ನಮ್ಮ ಸಮಿತಿಯು ಕೂಡ ಮೂರು ದಿನಗಳಲ್ಲಿ ವರದಿ ನೀಡಿ ಎಂದು ತಿಳಿಸಿದ್ದರೂ ಮಾಹಿತಿ ನೀಡಿಲ್ಲ. ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಇದರಿಂದಲೇ ತಿಳಿಯುತ್ತದೆ ಎಷ್ಟು ಅವ್ಯವಹಾರವಾಗಿದೆ ಎಂದು ಆರೋಪಿಸಿದರು.

ಜಾಹೀರಾತು ವಿಭಾಗದಲ್ಲಿ ಸಂಸ್ಥೆಗಳು ನೋಂದಣಿ ಮಾಡಿಕೊಳ್ಳಬೇಕು. ಠೇವಣಿಯನ್ನೂ ಇಡಬೇಕು. ಸಂಸ್ಥೆಗಳಿಂದ ಎಷ್ಟು ಠೇವಣಿ ಬಂದಿದೆ, ಯಾವ್ಯಾವ ಬ್ಯಾಂಕ್‍ನಲ್ಲಿ ಇಟ್ಟಿದ್ದೀರ ಎಂದು ರಾಮು ಎಂಬುವವರು ಆರ್‍ಟಿಐ ಅಡಿ ಮಾಹಿತಿ ಕೇಳಿದ್ದಾರೆ. ಈ ಹಣವನ್ನು ಕೂಡ ಅಧಿಕಾರಿಗಳು ನುಂಗಿ ನೀರು ಕುಡಿದಿದ್ದಾರೆ. ಹಾಗಾಗಿ ಜಾಹೀರಾತು ವಿಭಾಗದ ಬ್ಯಾಂಕ್ ಅಕೌಂಟ್‍ನ ಸಮಗ್ರ ಮಾಹಿತಿ ಪಡೆದು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಸದಸ್ಯರು ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin